ತರಗತಿ ಹೊರಗೆ ನಿಂತ ಬಾಲಕಿ- ಫೋಟೋ ವೈರಲ್ ಆಗ್ತಿದ್ದಂತೆ ಅದೇ ಶಾಲೆಯಲ್ಲಿ ದಾಖಲಾತಿ

Public TV
2 Min Read

ಹೈದರಾಬಾದ್: ಬಾಲಕಿಯೊಬ್ಬಳು ತನ್ನ ಕೈಯಲ್ಲಿ ಖಾಲಿ ಬಟ್ಟಲು ಹಿಡಿದುಕೊಂಡು ತರಗತಿ ಹೊರಗೆ ನಿಂತು ಇಣುಕಿ ನೋಡುತ್ತಿದ್ದ ಫೋಟೋವೊಂದು ವೈರಲ್ ಆಗಿತ್ತು. ಫೋಟೋ ವೈರಲ್ ಆದ ಬೆನ್ನಲ್ಲೇ ಬಾಲಕಿಗೆ ಅದೇ ಶಾಲೆಯಲ್ಲಿ ದಾಖಲಾತಿ ದೊರೆತಿದೆ.

ಮೋತಿ ದಿವ್ಯಾ ತರಗತಿ ಹೊರಗೆ ನಿಂತಿದ್ದ ಬಾಲಕಿ. ಇತ್ತೀಚೆಗೆ ದಿವ್ಯಾ ತರಗತಿ ಹೊರಗೆ ನಿಂತಿದ್ದ ಮನಕಲಕುವ ಫೋಟೋವನ್ನು ತೆಲುಗು ಪ್ರತಿಕೆಯೊಂದು ಪ್ರಕಟಿಸಿತ್ತು. ಆದರೆ ಇದೀಗ ಆ ಫೋಟೋದಿಂದ ಬಾಲಕಿಗೆ ಅದೇ ಶಾಲೆಯಲ್ಲಿ ಅಡ್ಮಿಶನ್ ಸಿಕ್ಕಿದೆ. ಅವುಲಾ ಶ್ರೀನಿವಾಸ್ ಈ ಫೋಟೋವನ್ನು ಕ್ಲಿಕ್ಕಿಸಿದ್ದರು. ಅವುಲಾ ಈ ಫೋಟೋವನ್ನು ಪ್ರಕಟಿಸಿ ಅದಕ್ಕೆ ‘ಹಸಿವಿನ ನೋಟ’ ಎಂದು ಕ್ಯಾಪ್ಷನ್ ಕೊಟ್ಟಿದ್ದರು. ಈ ಫೋಟೋವನ್ನು ಹೈದರಾಬಾದ್‍ನ ಗುಡಿಮಲಕಪುರದ ದೇವಲ್ ಜಾಮ್ ಸಿಂಗ್ ಸರ್ಕಾರಿ ಶಾಲೆಯಲ್ಲಿ ಕ್ಲಿಕ್ಕಿಸಲಾಗಿದೆ.

ಈ ವೈರಲ್ ಫೋಟೋ ವೆಂಕಟ್ ರೆಡ್ಡಿ ಅವರ ಕಣ್ಣಿಗೆ ಬಿದ್ದಿದೆ. ವೆಂಕಟ್ ರೆಡ್ಡಿ ಅವರು ಎಂವಿ ಫೌಂಡೇಶನ್‍ನಲ್ಲಿ ರಾಷ್ಟ್ರೀಯ ಕನ್ವೀನರ್ ಆಗಿದ್ದು, ಇದು ಹೆಣ್ಣು ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡುವ ಎನ್‍ಜಿಓ. ವೆಂಕಟ್ ರೆಡ್ಡಿ ಈ ಫೋಟೋವನ್ನು ತಮ್ಮ ಫೇಸ್‍ಬುಕ್‍ನಲ್ಲಿ ಶೇರ್ ಮಾಡಿ ಅದಕ್ಕೆ, “ಯಾಕೆ ಈ ಬಾಲಕಿಗೆ ದಾಖಲಾತಿ ನೀಡಿಲ್ಲ. ಆ ಬಾಲಕಿಗೂ ಕೂಡ ಓದುವ ಹಾಗೂ ಊಟ ಮಾಡುವ ಅಧಿಕಾರ ಇದೆ. ಇದು ನಾಚಿಕೆಗೇಡಿನ ಸಂಗತಿ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಭಿಕ್ಷೆ ಬೇಡುವ ಮಕ್ಕಳಿಗಾಗಿ ಶಾಲೆ ತೆರೆದ ಪೊಲೀಸರು – 450 ಮಕ್ಕಳಿಗೆ ವಿದ್ಯಾಭ್ಯಾಸ

ಬಾಲಕಿ ತನ್ನ ಶಿಕ್ಷಣದ ಹಕ್ಕಿನಿಂದ ವಂಚಿತಳಾಗದಂತೆ ನೋಡಿಕೊಳ್ಳಲು ವೆಂಕಟ್ ರೆಡ್ಡಿ ತನ್ನ ಸಂಸ್ಥೆ ಮತ್ತು ಸ್ಥಳೀಯ ಸ್ವಯಂಸೇವಕರನ್ನು ಸಂಪರ್ಕಿಸಿದ್ದಾರೆ. ಸದ್ಯ ಬಾಲಕಿ ಈಗ ಅದೇ ಶಾಲೆಯಲ್ಲಿ ದಾಖಲಾಗಿ ಶಿಕ್ಷಣ ಪಡೆಯುತ್ತಿದ್ದಾಳೆ. ಬಳಿಕ ವೆಂಕಟ್ ಅವರು ದಿವ್ಯಾ ತನ್ನ ಪೋಷಕರೊಂದಿಗೆ ಮೊದಲನೇ ದಿನ ಶಾಲೆಗೆ ಹೋದ ಫೋಟೋವನ್ನು ಕ್ಲಿಕ್ಕಿಸಿ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ದಿವ್ಯಾ ಶಾಲಾ ಯೂನಿಫಾರಂ ಧರಿಸಿದ್ದಳು.

ಈ ಪೋಸ್ಟ್ ನೋಡಿ ಹಲವು ಮಂದಿ ವೆಂಕಟ್ ರೆಡ್ಡಿ ಹಾಗೂ ಫೋಟೋ ಕ್ಲಿಕ್ಕಿಸಿದ ಪತ್ರಕರ್ತನ ಬಗ್ಗೆ ಮೆಚ್ಚುಗೆಯ ಮಾತುಗಳನಾಡುತ್ತಿದ್ದಾರೆ. ದಿವ್ಯಾ ಗುಡಿಸುವವನ ಮಗಳಾಗಿದ್ದು, ಶಾಲೆಯ ಹತ್ತಿರದಲ್ಲಿಯೇ ಇರುವ ಸ್ಲಂನಲ್ಲಿ ವಾಸಿಸುತ್ತಿದ್ದಳು. ಪೋಷಕರು ಆಕೆಯನ್ನು ಮನೆಯಲ್ಲಿಯೇ ಬಿಟ್ಟು ಕೆಲಸಕ್ಕೆ ಹೋದಾಗ ದಿವ್ಯಾ ಊಟ ಸಿಗಬಹುದೆಂಬ ಭರವಸೆಯಿಂದ ಪ್ರತಿದಿನ ಶಾಲೆಯ ಬಳಿ ಹೋಗುತ್ತಿದ್ದಳು.

Share This Article
Leave a Comment

Leave a Reply

Your email address will not be published. Required fields are marked *