ಕಾಶ್ಮೀರದಲ್ಲಿ ಕಾರ್ ಬ್ಲಾಸ್ಟ್ ಕೇಸ್ – ಪಿಎಚ್‍ಡಿ ಪದವೀಧರ ಸೇರಿ 6 ಉಗ್ರರ ಬಂಧನ!

Public TV
2 Min Read

ಶ್ರೀನಗರ: ಕಳೆದ ಮಾರ್ಚ್ 31 ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿ ಬನಿಹಾಲ್ ಬಳಿ ನಡೆದ ಕಾರ್ ಸ್ಫೋಟಕ್ಕೆ ಸಂಬಂಧಿಸಿದಂತೆ ಜೈಷ್-ಇ-ಮೊಹಮ್ಮದ್ ಹಾಗೂ ಹಿಜ್‍ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ 6 ಮಂದಿ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಫೆ.14ರಂದು ಪುಲ್ವಾಮದಲ್ಲಿ 30 ಸಿಆರ್​ಪಿಎಫ್​​  ಯೋಧರು ಹುತಾತ್ಮರಾದ ನೋವು ಮಾಸುವ ಮುನ್ನವೇ ಪುಲ್ವಾಮ ದಾಳಿ ರೀತಿಯಲ್ಲೇ ಬನಿಹಾಲ್ ಬಳಿ ಭಾರತೀಯ ಯೋಧರ ಕಾಂವಾಯ್ ಸಾಗುತ್ತಿದ್ದ ದಾರಿಯಲ್ಲಿ ಕಾರು ಬ್ಲಾಸ್ಟ್ ಆಗಿತ್ತು. ಈ ಬಗ್ಗೆ ತನಿಖೆ ಕೈಕೊಂಡಿದ್ದ ಪೊಲೀಸರು ಕೊನೆಗೂ ಪ್ರಕರಣದಲ್ಲಿ ಶಾಮಿಲಾಗಿದ್ದ 6 ಮಂದಿ ಉಗ್ರರನ್ನು ಬಂಧಿಸಿದ್ದಾರೆ. ಈ ಉಗ್ರರಲ್ಲಿ ಓರ್ವ ಪಿಎಚ್‍ಡಿ ಪದವೀಧರನನ್ನು ಪೊಲೀಸರು ಬಂಧಿಸಿದ್ದಾರೆ.

ಪಾಕ್ ಉಗ್ರ ಮುನ್ನಾ ಬಿಹಾರಿ ನೇತೃತ್ವದಲ್ಲಿ ಜೈಷ್-ಇ-ಮೊಹಮ್ಮದ್ ಹಾಗೂ ಹಿಜ್‍ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ಉಗ್ರರು ಈ ದಾಳಿ ನಡೆಸಿದ್ದರು. ಆದ್ರೆ ಪುಲ್ವಾಮಾ ದಾಳಿ ಯಶಸ್ವಿಯಾದಂತೆ ಈ ಕಾರ್ ಸ್ಫೋಟದ ದಾಳಿ ಯಶಸ್ವಿಯಾಗಿರಲಿಲ್ಲ. ಈ ದಾಳಿಯಲ್ಲಿ ಶಾಮೀಲಾಗಿದ್ದ ಪಿಎಚ್‍ಡಿ ಪದವೀಧರನನ್ನು ಹಿಲಾಲ್ ಅಹ್ಮದ್ ಮಾಂತೋ ಎಂದು ಗುರುತಿಸಲಾಗಿದ್ದು, ಈತನನ್ನು ಪಂಜಾಬ್‍ನ ಕೇಂದ್ರ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಜೊತೆ ಸಂಶೋಧನೆ ಮಾಡುತ್ತಿದ್ದ ವೇಳೆ ಸೆರೆಹಿಡಿಯಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

ಯುವಕರಿಗೆ ಧರ್ಮದ ಬಗ್ಗೆ ಪ್ರಚೋದನಕಾರಿ ಮಾತುಗಳ ಮೂಲಕ ಸೆಳೆದು, ಅವರನ್ನು ಜಮತ್-ಉಲ್-ತಲ್ಬಾದಲ್ಲಿ ಸೇರಿಸಿಕೊಂಡು ಉಗ್ರ ತರಬೇತಿಯನ್ನು ನೀಡಲಾಗುತ್ತದೆ. ಯುವಕರ ಮನ ಪರಿವರ್ತಿಸಿ ಅವರನ್ನು ಭಯೋತ್ಪಾದನೆ ಮಾಡುವಂತೆ ಎತ್ತಿಕಟ್ಟುತ್ತಿದ್ದಾರೆ ಎಂದು ಪೊಲೀಸರು ಹೇಳಿದರು.

ವಶೀಮ್ ಅಲಿಯಾಸ್ ಡಾಕ್ಟರ್, ಉಮರ್ ಶಫಿ, ಶೋಫಿಯಾನ್ ನಿವಾಸಿ ಅಕಿಬ್ ಷಾ, ಶಾಹಿದ್ ವಾನಿ ಅಥವಾ ವ್ಯಾಟ್ಸನ್ ಮತ್ತು ಒವಾಯಿಸ್ ಅಮೀನ್ ಎಂಬ 5 ಮಂದಿ ಉಗ್ರರ ಜೊತೆಗೆ ಹಿಲಾಲ್ ಅಹ್ಮದ್ ಮಾಂತೋನನ್ನು ಪೊಲೀಸರು ಬಂಧಿಸಿ ಈಗ ವಿಚಾರಣೆ ನಡೆಸುತ್ತಿದ್ದಾರೆ.

ಓವೈಸ್ ಅಮಿನ್ ಒಬ್ಬ ಬಿಬಿಎ ವಿದ್ಯಾರ್ಥಿಯಾಗಿದ್ದು, ಹುಂಡೈ ಸ್ಯಾಂಟ್ರೋ ಕಾರನ್ನು ಚಲಾಯಿಸಿಕೊಂಡು ಬಂದಿದ್ದ. ಆತನನ್ನು ಏಪ್ರಿಲ್ 1 ರಂದು ಬನಿಹಾಲಿಯಲ್ಲಿ ಬಂಧಿಸಲಾಯಿತು. ಚಾಲಕ ಮತ್ತು ಉಮರ್ ಶಫಿ, ಅಕಿಬ್ ಷಾ ರೇಯ್ಸ್ ಖಾನ್ನ ಅವರ ಬಳಿ ಕೆಲಸ ಮಾಡುತ್ತಿದ್ದರು. ಬಳಿಕ 2018ರಲ್ಲಿ ಹಿಜ್‍ಬುಲ್ ಸೇರಿ ಅವರೆಲ್ಲ ಭಯೋತ್ಪಾದಕರಾಗಿದ್ದರು. ಅಲ್ಲದೆ ಉಮರ್ ಶಫಿ ಶ್ರೀನಗರದಲ್ಲಿ ಬಿಸಿಎ ವಿದ್ಯಾರ್ಥಿಯಾಗಿದ್ದಾನೆ.

ಕಾರ್ ಗೆ ಎರಡು ಎಲ್‍ಪಿಜಿ ಸಿಲಿಂಡರ್ ಗಳನ್ನು ಅಳವಡಿಕೆ ಮಾಡಲಾಗಿತ್ತು, ಅಲ್ಲದೆ ಪೆಟ್ರೋಲ್, ಜೆರ್ರಿ ಕ್ಯಾನ್, ಜಿಲೆಟಿನ್ ಕಡ್ಡಿ, ಯುರಿಯಾ ಮತ್ತು ಗಂಧಕವನ್ನು ಕೂಡಾ ಬಳಸಲಾಗಿತ್ತು. ಕಾರ್ ಮಾಲೀಕ ಹಾಗೂ ದಾಳಿಯ ರೂವಾರಿ ಇನ್ನೂ ಪತ್ತೆಯಾಗಿಲ್ಲ. ಅಲ್ಲದೇ ಜಿಲೆಟಿನ್ ಕಡ್ಡಿಯ ಮೂಲ ಕೂಡ ಬಹಿರಂಗಗೊಂಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *