ರಾಯಚೂರಲ್ಲಿ ಎಲ್ಲರಿಗೂ ಲಭ್ಯವಿಲ್ಲ ಪೆಟ್ರೋಲ್ – ಬೆಳಗ್ಗೆ 7ರಿಂದ ಮಧ್ಯಾಹ್ನ 2ರವರೆಗೆ ಮಾತ್ರ ಬಂಕ್ ಓಪನ್

Public TV
1 Min Read

ರಾಯಚೂರು: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿದ್ದರೂ ಜನ ಅನಾವಶ್ಯಕವಾಗಿ ಹೊರಗಡೆ ಓಡಾಡುತ್ತಲೇ ಇದ್ದಾರೆ. ಹೀಗಾಗಿ ರಾಯಚೂರು ಜಿಲ್ಲಾಡಳಿತ ಹೊಸ ತಂತ್ರಕ್ಕೆ ಮುಂದಾಗಿದೆ. ಪೆಟ್ರೋಲ್ ಬಂಕ್‍ಗಳಲ್ಲಿ ಹೊಸ ನಿಯಮಗಳನ್ನ ಜಾರಿಗೆ ತರಲಾಗಿದೆ.

ಕೊರೊನಾ ವೈರಸ್ ಸೋಂಕು ತಡೆಯುವ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು, ಕೆಲಸಗಾರರು, ಸ್ವಯಂ ಸೇವಕರಿಗೆ ಮಾತ್ರ ಪೆಟ್ರೋಲ್ ಹಾಕಬೇಕು. ತುರ್ತು ಪರಸ್ಥಿತಿಯನ್ನು ಮಾತ್ರ ಪರಿಗಣಿಸಬೇಕು. ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಪೆಟ್ರೋಲ್ ಬಂಕ್ ತೆರೆಯಬೇಕು ಎಂದು ನಿಯಮ ಜಾರಿಗೆ ತರಲಾಗಿದೆ. ಅಲ್ಲದೆ ಬಾಟಲಿಗಳಲ್ಲಿ ಪೆಟ್ರೋಲ್ ಹಾಕಬಾರದು ಎಂಬ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಬೈಕ್‍ವೊಂದಕ್ಕೆ 200 ರೂಪಾಯಿ ಪೆಟ್ರೋಲ್ ಹಾಗೂ ವಾಹನಗಳಿಗೆ 500 ರೂಪಾಯಿವರೆಗೆ ಮಾತ್ರ ಡಿಸೇಲ್ ಅಥವಾ ಪೆಟ್ರೋಲ್ ಹಾಕಲು ಸೂಚಿಸಲಾಗಿದೆ. ಜಿಲ್ಲಾಡಳಿತ ಪೆಟ್ರೋಲ್ ಬಂಕ್ ಮಾಲೀಕರೊಂದಿಗೆ ನಡೆಸಿದ ಸಭೆಯಲ್ಲಿ ಈ ಕ್ರಮಗಳಿಗೆ ಮಾಲೀಕರು ಒಪ್ಪಿಕೊಂಡಿದ್ದು, ಇಂದಿನಿಂದ ಪೆಟ್ರೋಲ್ ಎಲ್ಲರಿಗೂ ಲಭ್ಯವಿಲ್ಲ. ತುರ್ತು ಪರಸ್ಥಿತಿ, ರೈತರ ವಾಹನಗಳಿಗೆ ಮಾತ್ರ ವಿನಾಯಿತಿ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿಲ್ಲ. ಹೀಗಾಗಿ ಮುಂದೆಯೂ ಕಾಣಿಸಿಕೊಳ್ಳದ ಹಾಗೇ ತಡೆಯಲು ಕಟ್ಟುನಿಟ್ಟಿನ ಕ್ರಮಗಳ ಅಗತ್ಯ ಇರುವುದರಿಂದ ಜಿಲ್ಲಾಡಳಿತ ಪೆಟ್ರೋಲ್ ಬಂಕ್‍ಗಳ ಮೇಲೆ ನಿರ್ಭಂದ ಹೇರಿದೆ.

Share This Article
Leave a Comment

Leave a Reply

Your email address will not be published. Required fields are marked *