ಉತ್ತರಪ್ರದೇಶ ವಿಧಾನಸಭೆಯಲ್ಲಿ ಸಿಕ್ಕ ಸ್ಫೋಟಕದ ವಿಶೇಷತೆ ಏನು? ಪತ್ತೆ ಕಷ್ಟ ಯಾಕೆ? ಇಲ್ಲಿದೆ ಸಂಪೂರ್ಣ ಮಾಹಿತಿ

Public TV
3 Min Read

ಲಕ್ನೋ: ಉತ್ತರಪ್ರದೇಶದ ವಿಧಾನಸಭೆಯಲ್ಲಿ ಬುಧವಾರ ಬಿಳಿ ಬಣ್ಣದ ಪುಡಿಯುಳ್ಳ ಪೊಟ್ಟಣವೊಂದು ಸಿಕ್ಕಿದ್ದು, ಬಳಿಕ ಅದು ಸ್ಫೋಟಕ ಎಂದು ತಿಳಿದುಬಂದಿತ್ತು. ಸುಮಾರು 150 ಗ್ರಾಂನ ಈ ಪ್ಯಾಕೆಟ್ ಶಾಸಕರೊಬ್ಬರ ಸೀಟ್ ಕೆಳಗೆ ಸಿಕ್ಕಿತ್ತು. ಇದನ್ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದ ನಂತರ ಪ್ಯಾಕೆಟ್‍ನಲ್ಲಿ ಸಿಕ್ಕ ಪುಡಿ ಪ್ಲಾಸ್ಟಿಕ್ ಸ್ಫೋಟಕವಾದ ಪಿಇಟಿಎನ್ ಎಂದು ತಿಳಿದುಬಂದಿದೆ.

ಏನಿದು ಪಿಇಟಿಎನ್?
PETN ನ ವಿಸ್ತೃತ ರೂಪ ಪೆಂಟಾ ಎರಿತ್ರಿಟೊಲ್ ಟೆಟ್ರಾ ನೈಟ್ರೇಟ್. ಇದನ್ನ PENT, PENTA, TEN, ಕಾರ್ಪೆಂಟ್, ಪೆಂತ್ರೈಟ್ ಅಂತಲೂ ಕರೀತಾರೆ. ಇದು ಅತ್ಯಂತ ಅಪಾಯಕಾರಿ ಹಾಗೂ ಶಕ್ತಿಶಾಲಿಯಾದ ಪ್ಲಾಸ್ಟಿಕ್ ಸ್ಫೋಟಕ. ಇದು ನೈಟ್ರೋಗ್ಲಿಸರಿನ್ ಫ್ಯಾಮಿಲಿಗೆ ಸೇರಿದ್ದು, ಕಾಳಸಂತೆಯಲ್ಲಿ ದೊರೆಯುತ್ತದೆ. ಬಣ್ಣವಿಲ್ಲದ ಹರಳಿನಂತೆ ಕಾಣುವ ಈ ವಸ್ತುವನ್ನ ಸುಲಭವಾಗಿ ಪತ್ತೆ ಮಾಡಲು ಸಾಧ್ಯವಿಲ್ಲದ ಕಾರಣ ಉಗ್ರರು ಹೆಚ್ಚಾಗಿ ಇದನ್ನ ಬಳಸುತ್ತಾರೆ.

ಡಿಟೆಕ್ಟರ್‍ನಲ್ಲಿ ಪಾಸ್ ಆಗುತ್ತೆ!
ಬಹುತೇಕ ಸ್ಫೋಟಕ ಡಿಟೆಕ್ಟರ್‍ಗಳು ಮೆಟಲ್ ಡಿಟೆಕ್ಟರ್‍ಗಳನ್ನ ಬಳಸುತ್ತವೆ. ಆದ್ರೆ ಪಿಇಟಿಎನ್ ನನ್ನು ಯಾವುದೇ ವಿದ್ಯುತ್ ಉಪಕರಣ ಅಥವಾ ಸೀಲ್ ಮಾಡಿದ ಬಾಕ್ಸ್ ನಲ್ಲಿ ಇಟ್ಟು ಭದ್ರತಾ ತಪಾಸಣೆಯಲ್ಲಿ ಸಿಕ್ಕಿಬೀಳದಂತೆ ಪಾರಾಗಬಹುದು.

ಎಲ್ಲೆಲ್ಲಿ ಬಳಕೆಯಾಗುತ್ತೆ?
2010ರ ದಿ ಗಾರ್ಡಿಯನ್‍ನ ವರದಿಯ ಪ್ರಕಾರ, ಇದನ್ನ ಪೌಡರ್ ರೂಪದಲ್ಲಿ ಅಥವಾ ತೆಳುವಾದ ಪ್ಲಾಸ್ಟಿಕ್ ಶೀಟ್‍ನ ರೂಪದಲ್ಲಿ ಖರೀದಿಸಬಹುದಾಗಿದ್ದು, ಹಲವು ದೇಶಗಳಲ್ಲಿ ಪಿಇಟಿಎನ್ ಖರೀದಿಗೆ ತೀವ್ರ ನಿರ್ಬಂಧವಿದೆ. ಇದನ್ನ ಸೇನೆ ಹಾಗೂ ಗಣಿಗಾರಿಕೆಯಲ್ಲಿ ಅಧಿಕೃತವಾಗಿ ಬಳಸಲಾಗುತ್ತದೆ. ರಾಸಾಯನಿಕಗಳ ಜೊತೆ ಪಿಇಟಿಎನ್ ಬೆರೆಸಿ ಸೆಮ್‍ಟೆಕ್ಸ್ ತಯಾರಿಸಬಹುದು, ಸೆಮ್‍ಟೆಕ್ಸ್ ಕೂಡ ವಾಸನೆಯಿರದ ಒಂದು ಪ್ಲಾಸ್ಟಿಕ್ ಸ್ಫೋಟಕ.

ಪಿಇಟಿಎನ್ ಹೇಗೆ ಕೆಲಸ ಮಾಡುತ್ತದೆ?
ಪಿಇಟಿಎನ್ ಸ್ಫೋಟಿಸಲು ಹೀಟ್ ಅಥವಾ ಶಾಕ್‍ವೇವ್ ಉತ್ಪಾದನೆಯಾಗಲು ಎರಡನೇ ಸ್ಫೋಟಕ ವ್ಯವಸ್ಥೆಯನ್ನ ಬಳಸಬೇಕು. ಕೊಲರಾಡೋದ ಸ್ಫೋಟಕ ತಜ್ಞ ಜೇಮ್ಸ್ ಕ್ರಿಪ್ಪಿನ್ 2009ರಲ್ಲಿ ನೀಡಿದ ಸಂದರ್ಶನವೊಂದರ ಪ್ರಕಾರ ಈ ವಸ್ತುವನ್ನ ನಿಭಾಯಿಸುವುದು ಸುರಕ್ಷಿತವಾಗಿದ್ದು, ಇದನ್ನು ಸ್ಫೋಟಿಸಲು ಪ್ರಾಥಮಿಕ ಸ್ಫೋಟಕದ ಅಗತ್ಯವಿದೆ ಎಂದು ಹೇಳಿದ್ದರು. ಈ ಸಾಧನವನ್ನ ನಿಷ್ಕ್ರಿಯ ಯಗೊಳಿಸಲು ಪ್ಲಾಸ್ಟಿಕ್ ಕ್ಯಾಪ್‍ನ ಅಗತ್ಯವಿರುತ್ತದೆ.

ಈ ಹಿಂದೆ ಎಲ್ಲಿ ಬಳಸಲಾಗಿತ್ತು?
ಈ ಹಿಂದೆ ಅನೇಕ ಬಾಂಬ್ ಸ್ಫೋಟದ ಸಂದರ್ಭಗಳಲ್ಲಿ ಪಿಇಟಿಎನ್ ಬಳಸಲಾಗಿದೆ. ಇವುಗಳಲ್ಲಿ ಕೆಲವು ಕೆಲಸ ಮಡಿಲ್ಲ. 1983ರಲ್ಲಿ ಬರ್ಲಿನ್‍ನ ಫ್ರೆಂಚ್ ಸಾಂಸ್ಕೃತಿಕ ಕೇಂದ್ರದ ಮೇಲೆ ದಾಳಿ ನಡೆದಾಗ ಪಿಇಟಿಎನ್ ಬಳಸಲಾಗಿತ್ತು. 2001ರಲ್ಲಿ ಶೂ ಬಾಂಬರ್ ರಿಚರ್ಡ್ ರೀಡ್ ಅಮೆರಿಕ ವಿಮಾನಯಾನ ಸಂಸ್ಥೆಯ ವಿಮಾನವನ್ನ ಉಡಾಯಿಸಲು ಪಿಇಟಿಎನ್ ಬಳಸಿದ್ದ. ಆದ್ರೆ ಆತ ಅದನ್ನು ಸ್ಫೋಟಿಸಲು ಸಾಧ್ಯವಾಗಿರಲಿಲ್ಲ.

2009ರಲ್ಲಿ ಉಮರ್ ಫರೂಕ್ ಅಬ್ದುಲ್ ಎಂಬ ವ್ಯಕ್ತಿ ವಿಮಾನ ಸ್ಫೋಟ ಯತ್ನ ವಿಫಲವಾಗಿ ತನ್ನ ಪ್ಯಾಂಟ್‍ನೊಳಗೆ ಅಡಗಿಸಿಡಲಾಗಿದ್ದ ಪಿಇಟಿಎನ್ ನಿಶ್ಕ್ರಿಯಗೊಳಿಸಲು ಪ್ರಯತ್ನಿಸಿದ್ದ. 2010ರಲ್ಲಿ ಸೌದಿ ಅರೇಬಿಯಾದ ಉಪ ಆಂತರಿಕ ಸಚಿವರನ್ನ ದೇಹದಲ್ಲಿ ಪಿಇಟಿಎನ್ ಬಾಂಬ್ ಇಟ್ಟು ಸ್ಫೋಟಿಸಲು ಅಬ್ದುಲ್ಲಾ ಹಸನ್ ಎಂಬವನು ಯತ್ನಿಸಿದ್ದ. ಅಲ್ಲದೆ 2010ರಲ್ಲಿ ಲಂಡನ್ ಹಾಗೂ ದುಬೈನಲ್ಲಿ ಕಾರ್ಗೋ ವಿಮಾನ ಸ್ಫೋಟ ಯತ್ನದಲ್ಲಿ ಪಿಇಟಿಎನ್ ಬಳಸಲಾಗಿತ್ತು. ಜಗತ್ತಿನ ವಿವಿಧ ಭಾಗಗಳಲ್ಲಿ ಮತ್ರವಲ್ಲದೇ 2011ರಲ್ಲಿ ದೆಹಲಿ ಹೈ ಕೋರ್ಟ್ ಸ್ಫೋಟದ ಸಂದರ್ಭದಲ್ಲಿ ಪಿಇಟಿಎನ್ ಬಳಸಲಾಗಿತ್ತು ಎಂದು ತಿಳಿದುಬಂದಿತ್ತು. ಈ ಘಟನೆಯಲ್ಲಿ 17 ಮಂದಿ ಸಾವನ್ನಪ್ಪಿದ್ದರು.

ಪಿಇಟಿಎನ್ ಡಿಟೆಕ್ಟ್ ಮಾಡೋದು ಹೇಗೆ?
ಕೆಲವು ವಿಮಾನ ನಿಲ್ದಾಣ ಭದ್ರತಾ ಅಧಿಕಾರಿಗಳು ಪ್ರಯಾಣಿಕರನ್ನು ತಪಾಸಣೆ ಮಾಡಲು ಹೆಚ್ಚುವರಿ ಭದ್ರತಾ ತಪಾಸಣೆಯ ವಿಧಾನಗಳನ್ನ ಅನುಸರಿಸುತ್ತಿದ್ದಾರೆ. ಕೆಲವು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಖಾಸಗಿ ವಸ್ತುಗಳು ಹಾಗೂ ಬಟ್ಟೆಗಳನ್ನೂ ಕೂಡ ತಪಾಸಣೆ ಮಾಡಲಾಗುತ್ತದೆ. ಆದ್ರೆ ಈ ವಿಧಾನದಿಂದ ಪಿಇಟಿಎನ್ ಸಾಗಿಸುತ್ತಿರುವ ವ್ಯಕ್ತಿಯನ್ನು ಪತ್ತೆ ಮಾಡಬಹುದು ಎಂಬುದರ ಬಗ್ಗೆ ಗ್ಯಾರಂಟಿ ಇಲ್ಲ.

Share This Article
Leave a Comment

Leave a Reply

Your email address will not be published. Required fields are marked *