ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಆಯ್ಕೆ ಪ್ರಶ್ನಿಸಿ ಅರ್ಜಿ – ಮಾ.25ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ

Public TV
2 Min Read

ನವದೆಹಲಿ: ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ (MK Pranesh) ಮತ್ತು ಗಾಯತ್ರಿ ಶಾಂತೇಗೌಡರ ನಡುವಿನ ಚುನಾವಣಾ ಅರ್ಜಿಯನ್ನು ಸುಪ್ರೀಂಕೋರ್ಟ್ (Supreme Court) ವಿಚಾರಣೆ ನಡೆಸಿತು. ಬಳಿಕ ಕೇಂದ್ರ ಸರ್ಕಾರ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದ್ದು, ಮಾರ್ಚ್ 25ರಂದು ವಿಚಾರಣೆ ಮುಂದೂವರಿಸುವುದಾಗಿ ಪೀಠ ಹೇಳಿದೆ.

ಪ್ರಕರಣದ ವಿಚಾರಣೆ ವೇಳೆ, ಹಿಂದಿನ ಆದೇಶದಂತೆ ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆದ ಮತ ಮರುಎಣಿಕೆಯ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ನ್ಯಾಯಾಲಯಕ್ಕೆ ಸಲ್ಲಿಸಿದರು. ಬಳಿಕ ವಾದ ಆಲಿಸಿದ ಸುಪ್ರೀಂಕೋರ್ಟ್, ಪ್ರಕರಣದಲ್ಲಿ ಪುರಸಭೆ, ಪಟ್ಟಣ ಪಂಚಾಯಿತಿಯ 12 ಮಂದಿ ನಾಮನಿರ್ದೇಶನ ಸದಸ್ಯರು ಮತಗಳನ್ನು ಪರಿಗಣಿಸುವ ಬಗ್ಗೆ ಆಯೋಗದಿಂದ ಮಾಹಿತಿ ಕೇಳಿತು.ಇದನ್ನೂ ಓದಿ: ಸ್ವ ಇಚ್ಛೆಯಿಂದ ಗ್ಯಾರಂಟಿ ಬಿಟ್ಟುಕೊಡುವ ಜನರಿಗಾಗಿ ವ್ಯವಸ್ಥೆ ಮಾಡುವ ಬಗ್ಗೆ ಚಿಂತನೆ: ಹೆಚ್.ಎಂ.ರೇವಣ್ಣ

2021ರ ಡಿಸೆಂಬರ್ 10ರಂದು ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ನಡೆದಿತ್ತು. ಆರು ಮತಗಳಿಂದ ಬಿಜೆಪಿ ಅಭ್ಯರ್ಥಿ ಎಂ.ಕೆ ಪ್ರಾಣೇಶ್ ಗೆಲುವು ಸಾಧಿಸಿದ್ದರು. ಮತ ಎಣಿಕೆ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಮರು ಮತ ಎಣಿಕೆಗೆ ಮನವಿ ಸಲ್ಲಿಸಿದ್ದರು. ಆದರೆ, ಮರು ಮತ ಎಣಿಕೆಗೆ ಅವಕಾಶ ನೀಡದೆ ಫಲಿತಾಂಶ ಘೋಷಣೆ ಮಾಡಲಾಗಿತ್ತು

ಈ ಹಿನ್ನೆಲೆಯಲ್ಲಿ ಗಾಯತ್ರಿ ಶಾಂತೇಗೌಡ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಈ ಹಿಂದೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನಾಮನಿರ್ದೇಶನ ಸದಸ್ಯರ ಮತಗಳನ್ನು ಹೊರತುಪಡಿಸಿ ಮರು ಮತ ಎಣಿಕೆ ನಡೆಸುವಂತೆ ಆದೇಶ ನೀಡಿತ್ತು, ಮಾರ್ಚ್ 4ರ ಒಳಗೆ ಮರು ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಅಂತೆಯೇ ಇಂದು ಮತ ಎಣಿಕೆ ನಡೆಸಿದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿದೆ.

ಈ ಬಗ್ಗೆ ನವದೆಹಲಿಯಲ್ಲಿ ಮಾತನಾಡಿದ ಉಪಸಭಾಪತಿ ಎಂ.ಕೆ ಪ್ರಾಣೇಶ್, ವಿಚಾರಣೆಯನ್ನು ಸುಪ್ರೀಂಕೋರ್ಟ್ ಮಾರ್ಚ್ 25ಕ್ಕೆ ಮುಂದೂಡಿದೆ, ವಿಚಾರಣೆಯನ್ನು ಮುಂದೂಡಿರುವ ಉದ್ದೇಶ ಗೊತ್ತಿಲ್ಲ, ಮುಂದುವರೆಯುತ್ತೇನೆ ಎನ್ನುವ ಪೂರ್ಣ ವಿಶ್ವಾಸ ನನಗೆ ಇದೆ, ಸುಪ್ರೀಂಕೋರ್ಟ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ನೋಡಬೇಕು, ಕೋರ್ಟ್ ನಿರ್ಧಾರವೇ ಅಂತಿಮವಾಗಲಿದೆ ಎಂದರು.ಇದನ್ನೂ ಓದಿ: ನಿಮಗೂ ವಯಸ್ಸಾಗಿದೆ, ಅಧ್ಯಕ್ಷರ ಅವಧಿ ಮುಗಿಯೋದ್ರಲ್ಲಿ ದಲಿತ ಸಿಎಂ ಮಾಡಿ – ಖರ್ಗೆಗೆ ಕಾರಜೋಳ ಸವಾಲ್

Share This Article