ರಾಯಚೂರು: ಪ್ರೀತಿಸಿದವಳಿಗೆ ಕೈಕೊಟ್ಟು ಇನ್ನೊಂದು ಮದುವೆ ಸಿದ್ಧತೆ ನಡೆಸಿದ್ದ ಯುವಕನಿಗೆ ಸಾರ್ವಜನಿಕರೆ ಮದುವೆ ಮಾಡಿಸಿರುವ ಘಟನೆ ರಾಯಚೂರು ಲಿಂಗಸುಗೂರು ತಾಲೂಕಿನ ಮುದಗಲ್‍ನಲ್ಲಿ ನಡೆದಿದೆ.
ಮುದಗಲ್ ಬಳಿಯ ತೊಡಕಿ ಗ್ರಾಮದ ಯುವಕ ತಾಯಪ್ಪ ಅದೇ ಗ್ರಾಮದ ಮಂಜುಳಾಳನ್ನ ಪ್ರೀತಿಸಿ ಒಂದು ಮಗುವಿನ ತಾಯಿ ಮಾಡಿದ್ದ. ಹೀಗಾಗಿ ಒಂದು ವಾರದ ಕೆಳಗಷ್ಟೇ ಮಂಜುಳಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಮದುವೆಯಾಗುವುದಾಗಿ ನಂಬಿಸಿ ಹುಡುಗಿ ಮನೆಯವರಿಗೂ ಮದುವೆ ಬಗ್ಗೆ ವಿಶ್ವಾಸ ಮೂಡಿಸಿದ್ದ. ಆದರೆ ಇತ್ತೀಚಿಗೆ ಮಂಜುಳಾಳಿಂದ ದೂರವಾಗಿದ್ದ ತಾಯಪ್ಪ ತನ್ನ ಸೋದರ ಮಾವನ ಮಗಳನ್ನ ಮದುವೆಯಾಗಲು ಸಿದ್ಧತೆ ನಡೆಸಿದ್ದ. ಇದನ್ನರಿತ ಮಂಜುಳಾ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದರು. ಕೊನೆಗೆ ಇವರಿಬ್ಬರ ಪ್ರೇಮ ಪ್ರಕರಣ ತಿಳಿದ ಸಾರ್ವಜನಿಕರು ಮಹಿಳಾ ಸಂಘಟನೆ ಸಹಾಯದಿಂದ ಮುದಗಲ್‍ನ ನೀಲಕಂಠೇಶ್ವರ ದೇವಸ್ಥಾನದಲ್ಲಿ ಮದುವೆ ಮಾಡಿಸಿದ್ದಾರೆ.
ಯುವಕ ತಾಯಪ್ಪನ ತಾಯಿ ಮದುವೆಗೆ ಮೊದಲೆಲ್ಲಾ ವಿರೋಧ ವ್ಯಕ್ತಪಡಿಸಿದರೂ ಕೊನೆಗೆ ಮದುವೆಯನ್ನ ಒಪ್ಪಿಕೊಂಡು ಸೊಸೆಯನ್ನ ಮನೆಗೆ ಸೇರಿಸಿದ್ದಾರೆ. ಸದ್ಯ ಮಂಜುಳಾ ಹಾಗೂ ಮಗು ತವರು ಮನೆಯಲ್ಲೇ ಇದ್ದಾರೆ. ಐದು ವರ್ಷದ ಕೆಳಗೆ ಇಷ್ಟವಿಲ್ಲದ ಮದುವೆಯಾಗಿದ್ದ ಮಂಜುಳಾ ತನ್ನ ಪತಿಯೊಂದಿಗೆ ತೆರಳದೆ ತವರು ಮನೆಯಲ್ಲೇ ಉಳಿದುಕೊಂಡಿದ್ದಳು. ಬಳಿಕ ತಾಯಪ್ಪನ ಜೊತೆ ಸ್ನೇಹ ಬೆಳೆದು ತಾಯಿಯಾಗಿದ್ದಾರೆ.