ಇಳಕಲ್ ಜೋಗಿಯನ್ನು ಮರಳಿ ಕುಟುಂಬಕ್ಕೆ ಸೇರಿಸ್ತು ಫೇಸ್‍ಬುಕ್ ವೈರಲ್ ವಿಡಿಯೋ!

Public TV
1 Min Read

ಬಾಗಲಕೋಟೆ: ಐದು ವರ್ಷದಿಂದ ದೂರ ಇದ್ದ ಮಾನಸಿಕ ಅಸ್ವಸ್ಥನೊಬ್ಬ ಫೇಸ್‍ಬುಕ್ ವಿಡಿಯೋದ ಮೂಲಕ ಮರಳಿ ಕುಟುಂಬವನ್ನು ಸೇರಿದ್ದಾನೆ. ಇಳಕಲ್ ಜೋಗಿ ಎಂದೇ ಹೆಸರಾಗಿದ್ದ ನರಸಿಂಹನನ್ನು ಸಾಮಾಜಿಕ ಜಾಲತಾಣದ ವೈರಲ್ ವಿಡಿಯೋ ಮೂಲಕ ಗಮನಿಸಿದ ಕುಟುಂಬಸ್ಥರು ಮನೆಗೆ ಕರೆದೊಯ್ದಿದ್ದಾರೆ.

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಗೋವಿನಕೋವಿ ಗ್ರಾಮದ ನರಸಿಂಹ ಕಳೆದ ಐದು ವರ್ಷದಿಂದ ನಾಪತ್ತೆಯಾಗಿದ್ದ. ಮನೆಯವರೆಲ್ಲರೂ ಹುಡುಕಿ ಸುಸ್ತಾಗಿದ್ದರು. ಮಾನಸಿಕ ಅಸ್ವಸ್ಥನಾಗಿದ್ದರೂ ನರಸಿಂಹ ಇಳಕಲ್ ನಗರದಲ್ಲಿ ಸರ್ವ ವಿಜಯ ಸಂಸ್ಥೆಯವರು ನೆಟ್ಟ ನೂರಾರು ಗಿಡಗಳಿಗೆ ಪ್ರತಿ ನಿತ್ಯ ತಪ್ಪದೇ ಬಕೆಟ್ ಹಿಡಿದು ನೀರು ಹಾಕುತ್ತಿದ್ದ.

ತಲೆ ತುಂಬ ಕೂದಲು ಬಿಟ್ಟುಕೊಂಡು ಹುಚ್ಚನಂತಾಗಿದ್ದ ನರಸಿಂಹನನ್ನು ಎಲ್ಲರೂ ಇಳಕಲ್ ಜೋಗಿ ಎಂದೇ ಕರೆಯುತ್ತಿದ್ದರು. ಮಾನಸಿಕ ಅಸ್ವಸ್ಥನಾಗಿದ್ದರೂ ಈತನ ಗಿಡದ ಮೇಲಿನ ಪ್ರೀತಿ ಎಲ್ಲರ ಮನಮಿಡಿಯುವಂತೆ ಮಾಡಿತ್ತು. ಕೊನೆಗೆ ಗಿಡಕ್ಕೆ ನೀರು ಹಾಕೋದನ್ನು ವಿಡಿಯೋ ಮಾಡಿದ ಸ್ಥಳೀಯರು ಅದಕ್ಕೆ ಒಳಿತು ಮಾಡು ಮನಸಾ ಎಂಬ ಹಾಡನ್ನು ಅಳವಡಿಸಿ ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ಸಾಕಷ್ಟು ಜನರಿಂದ ಶೇರ್, ಲೈಕ್ಸ್, ಕಮೆಂಟ್ ಪಡೆಯುತ್ತಾ ನರಸಿಂಹನ ಕುಟುಂಬದ ಗಮನಕ್ಕೂ ಬಂದಿದೆ. ಕೂಡಲೇ ಕುಟುಂಬಸ್ಥರು ಇಳಕಲ್ ನಗರಕ್ಕೆ ಭೇಟಿ ನೀಡಿದ್ದಾರೆ.

ಈ ವೇಳೆ ಸ್ಥಳೀಯರು ತಲೆ ತುಂಬ ಕೂದಲು ಬಿಟ್ಟಿದ್ದ ಆತನಿಗೆ ಕ್ಷೌರ ಮಾಡಿಸಿ, ಸ್ನಾನಮಾಡಿಸಿ ಹೊಸ ಟಿ-ಶರ್ಟ್ ಹಾಕಿಸಿ ಮನೆಗೆ ಕಳಿಸಿ ಕೊಟ್ಟಿದ್ದಾರೆ. ಫೇಸ್‍ಬುಕ್ ನಿಂದ ಓರ್ವ ವ್ಯಕ್ತಿ ಮರಳಿ ಮನೆ ಸೇರಿದ್ದು, ಕುಟುಂಬಸ್ಥರಿಂದ ಅಗಲಿದ ನರಸಿಂಹ ಮತ್ತೆ ಮನೆಯವರ ಜೊತೆ ಒಂದಾದ ಘಟನೆ ಎಲ್ಲರ ಮನ ಕಲಕುವಂತೆ ಮಾಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *