ತಂದೆಗೆ ಸಾರಾಯಿ ಕುಡಿಸಿ ಅವರ ಮುಂದೆಯೇ ಮಗಳನ್ನ ಅತ್ಯಾಚಾರಗೈದ ಕಾಮ ಪಿಶಾಚಿ

Public TV
1 Min Read

ಚಿತ್ರದುರ್ಗ: ತಂದೆಗೆ ಮದ್ಯಪಾನ ಮಾಡಿಸಿ ಅವರ ಮುಂದೆಯೇ ವ್ಯಕ್ತಿಯೊಬ್ಬ ವಿವಾಹಿತ ಮಗಳ ಮೇಲೆ ಅತ್ಯಾಚಾರ ಎಸಗಿರುವ ಅವಮಾನವೀಯ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮೇಕಾನಹಟ್ಟಿ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ರಾಮಚಂದ್ರ ಎಂಬಾತನೇ ಅತ್ಯಾಚಾರಗೈದ ಆರೋಪಿ. ಮಂಗಳವಾರ ರಾತ್ರಿ ಯುವತಿಯ ತಂದೆ ದ್ಯಾಮಾನಾಯ್ಕ್ ರಿಗೆ ಕಂಠಪೂರ್ತಿ ಕುಡಿಸಿದ್ದಾನೆ. ರಾತ್ರಿ ಸುಮಾರು 1 ಗಂಟೆಯ ವೇಳೆಗೆ ಯುವತಿ ಮನೆಗೆ ರಾಮಚಂದ್ರ ಬಂದಿದ್ದು, ಮನೆಯಲ್ಲಿದ್ದ ಯುವತಿಯ ತಾಯಿ ಬಾಗಿಲನ್ನು ತೆಗೆದಿದ್ದಾರೆ. ಈ ವೇಳೆ ಯುವತಿಯ ತಾಯಿಗೆ ಬಲವಾಗಿ ಹೊಡೆದಿದ್ದರಿಂದ ಆಕೆ ಪ್ರಜ್ಞೆ ತಪ್ಪಿದ್ದಾರೆ. ಮನೆಯಲ್ಲಿ ಒಂಟಿಯಾಗಿದ್ದ ಯುವತಿಯ ಮೇಲೆ ರಾಮಚಂದ್ರ ಅತ್ಯಾಚಾರ ಎಸೆಗಿದ್ದಾನೆ.

ಯುವತಿಯ ತಂದೆ ದ್ಯಾಮಾನಾಯ್ಕ್

ಅತ್ಯಾಚಾರದ ವೇಳೆಯಲ್ಲಿ ಮಗಳ ಕಿರುಚಾಟ ಕೇಳಿ ಎಚ್ಚರಗೊಂಡ ದ್ಯಾಮಾನಾಯ್ಕ್ ಅವರ ಮೇಲೆಯೂ ರಾಮಚಂದ್ರ ಹಲ್ಲೆ ಮಾಡಿದ್ದಾನೆ. ಪಕ್ಕದಲ್ಲಿಯೇ ಪ್ರಜ್ಞೆತಪ್ಪಿ ಬಿದ್ದಿದ್ದ ತಾಯಿ ಕೂಡ ಎಚ್ಚರಗೊಂಡಿದ್ದಾರೆ. ಅತ್ಯಾಚಾರದ ಬಳಿಕ ರಾಮಚಂದ್ರ, ವಿಷಯವನ್ನು ಯಾರಿಗಾದ್ರೂ ತಿಳಿಸದ್ರೆ ಕೊಲ್ಲುವುದಾಗಿ ಯುವತಿ ಹಾಗು ಆಕೆಯ ಮನೆಯವರಿಗೆ ಬೆದರಿಕೆ ಹಾಕಿ ಹೋಗಿದ್ದನು.

ಮಂಗಳವಾರ ರಾತ್ರಿ ವಿಪರೀತ ಕುಡಿದಿದ್ದ ದ್ಯಾಮಾನಾಯ್ಕ್ ಬೆಳಗ್ಗೆ ರಕ್ತದ ವಾಂತಿ ಮಾಡಿಕೊಂಡಿದ್ದಾರೆ. ದ್ಯಾಮಾನಾಯ್ಕ್‍ರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮಧ್ಯಾಹ್ನ ಸಾವನ್ನಪ್ಪಿದ್ದಾರೆ. ಈ ವೇಳೆ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಯುವತಿಗೆ ಈಗಾಗಲೇ ಮದುವೆಯಾಗಿದ್ದು, ಒಂದೂವರೆ ವರ್ಷದ ಹೆಣ್ಣು ಮಗುವಿದೆ. ಗಂಡನಿಂದ ಬೇರೆಯಾದ ಯುವತಿ ತವರು ಮನೆಯಲ್ಲಿ ಬಂದು ನೆಲೆಸಿದ್ದರು.

ಈ ಸಂಬಂಧ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ರಾಮಚಂದ್ರನನ್ನ ಬಂಧಿಸಿದ್ದಾರೆ.

ಯುವತಿಗೆ ಹೊಳಲಕ್ಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮೂಲತಃ ವಿಜಯಪುರ ಜಿಲ್ಲೆಯ ಸವಳೂರು ತಾಂಡಾದ ನಿವಾಸಿಯಾಗಿರುವ ದ್ಯಾಮಾನಾಯ್ಕ್ ಕೆಲವು ವರ್ಷಗಳ ಹಿಂದೆ ಕುಟುಂಬ ಸಮೇತರಾಗಿ ಬಂಡೆ ಒಡೆಯುವ ಕೆಲಸಕ್ಕಾಗಿ ಮೇಕಾನಹಟ್ಟಿ ಗ್ರಾಮಕ್ಕೆ ಬಂದು ನೆಲೆಸಿದ್ದರು ಎಂದು ತಿಳಿದುಬಂದಿದೆ.

 

Share This Article
Leave a Comment

Leave a Reply

Your email address will not be published. Required fields are marked *