ಕಾಂತಾರ ಚಿತ್ರದ ಕಥೆ ನೆನಪಿಸಿದ ಬಂಟ್ವಾಳದ ಪೆರ್ನೆ!

Public TV
2 Min Read

ಮಂಗಳೂರು: ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ನಿರ್ದೇಶನದಲ್ಲಿ ಮೂಡಿಬಂದ ಕಾಂತಾರ ಸಿನಿಮಾ ಕರಾವಳಿಯ ಸಂಸ್ಕೃತಿಯನ್ನು ಜಗತ್ತಿಗೇ ಪರಿಚಯಿಸಿದೆ. ಜೊತೆಗೆ ಕರಾವಳಿಯ ಮಣ್ಣಿನಲ್ಲಿ ಹಾಸುಹೊಕ್ಕಾಗಿರುವ ದೈವಾರಾಧನೆಯ ಮಹತ್ವ, ಕಾರಣಿಕ ಶಕ್ತಿಯನ್ನು ತೋರ್ಪಡಿಸಿದೆ. ಇಂತಹ ಕಾರಣಿಕ ಶಕ್ತಿಯ ಅಲಿಖಿತ ನಿದರ್ಶನಗಳು ಕರಾವಳಿಯಲ್ಲಿ ಅದೆಷ್ಟೋ ಇದ್ದು, ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ (Bantwal) ತಾಲೂಕಿನ ಪೆರ್ನೆ ಎನ್ನುವ ಗ್ರಾಮದಲ್ಲಿ ಆಗಿರುವ ಬೆಳವಣಿಗೆ ದೈವಗಳ ಕಾರಣಿಕ ಶಕ್ತಿಗೆ ಮತ್ತೊಂದು ಜ್ವಲಂತ ಸಾಕ್ಷಿಯಾಗಿದೆ.

ಕಾಂತಾರ (Kantara) ಸಿನಿಮಾ ಇಡೀ ಜಗತ್ತು ತುಳುನಾಡಿನ ಮಣ್ಣಿನ ಸತ್ಯಗಳೆಡೆಗೆ ಶಿರಬಾಗಿ ನಮಿಸುವಂತೆ ಮಾಡಿದೆ. ಕರಾವಳಿ ಭಾಗದ ಭಾರೀ ನಂಬಿಕೆಗೆ ಪಾತ್ರವಾಗಿರುವ ದೈವಗಳ ಕಾರಣಿಕವನ್ನು ಮೂಲಕಥೆಯನ್ನಾಗಿ ನಿರ್ಮಿಸಲಾಗಿರುವ ಈ ಕಥೆ ತನ್ನನ್ನು ಮರೆತು ಮೆರದವರನ್ನು ದೈವ ಯಾವ ರೀತಿ ಧರ್ಮದಲ್ಲಿ ನಡೆಯುವಂತೆ ಮಾಡಿತು ಎನ್ನುವುದನ್ನು ತಿಳಿಸಿ ಕೊಟ್ಟಿದೆ. ಇಂತಹ ಸಾವಿರಾರು ನಿದರ್ಶನಗಳ ಪೈಕಿ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರ್ನೆ (Perne) ಎನ್ನುವ ಗ್ರಾಮದಲ್ಲಿ ನಡೆದಿರುವ ಘಟನೆಯು ಕೂಡ ದೈವಗಳ ಕಾರಣಿಕತೆಗೆ ಕನ್ನಡಿ ಹಿಡಿಯುತ್ತಿದೆ.

ಪೆರ್ನೆ ಹಾಗೂ ಬಿಳಿಯೂರು ಗ್ರಾಮಗಳಲ್ಲಿ ಕಳೆದ ಕೆಲವು ವರ್ಷಗಳಿಂದೀಚೆಗೆ ಹೆಚ್ಚಾದ ಜನರ ಅಪಮೃತ್ಯುಗಳು, ತುಳುನಾಡಿನ ನಂಬಿಕೆಯ ಮೂಲಧಾರವಾದ ನಾಗಗಳ ಸಾವು ಜನರನ್ನು ವಿಚಲಿತರನ್ನಾಗಿ ಮಾಡಿತ್ತು. ಪೆರ್ನೆಯಲ್ಲಿ 2013ರಲ್ಲಿ ಗ್ಯಾಸ್ ಟ್ಯಾಂಕರ್ (Gas Tanker) ಪಲ್ಟಿಯಾಗಿ ನಡೆದ ದುರ್ಘಟನೆಯಲ್ಲಿ ಈ ಗ್ರಾಮಕ್ಕೆ ಸೇರಿದ 11 ಜನ ಸಾವನ್ನಪ್ಪಿದ್ದರು. ಅಲ್ಲದೆ ಬಾವಿಗೆ ಬಿದ್ದು ಸಾವು, ಆತ್ಮಹತ್ಯೆ, ಅಫಘಾತದಂತಹ ಹಲವು ಘಟನೆಗಳು ಇಲ್ಲಿ ನಿರಂತರವಾಗಿ ನಡೆಯಲಾರಂಭಿಸಿತ್ತು. ಇದನ್ನೂ ಓದಿ: ರಿಷಬ್ ನಟನೆಯ `ಕಾಂತಾರ’ ಸಿನಿಮಾ ನೋಡಿ ಕಿಚ್ಚನ ರಿಯಾಕ್ಷನ್

ಈ ನಡುವೆ ಕಳೆದ ಆರು ತಿಂಗಳ ಒಳಗೆ ಪೆರ್ನೆ ಹಾಗೂ ಬಿಳಿಯೂರು ಗ್ರಾಮಗಳಲ್ಲಿ 14 ನಾಗರ ಹಾವುಗಳು ಆಕಸ್ಮಿಕವಾಗಿ ಸಾವಿಗೀಡಾಗಿರುವುದು ಇಲ್ಲಿನ ಜನರ ನಿದ್ದೆಗೆಡಿಸಿತ್ತು. ನಾಗ, ದೈವ, ದೇವರುಗಳಿಗೆ ಸಂಬಂಧಪಟ್ಟ ವಿಚಾರಗಳನ್ನು ಅತ್ಯಂತ ನಿಖರವಾಗಿ ಹೇಳಬಲ್ಲ ಅಷ್ಟಮಂಗಲ ಪ್ರಶ್ನೆಯನ್ನು ಕೇಳಿ ನಾಗಗಳ ಸಾವಿನ ರಹಸ್ಯ ತಿಳಿಯಲು ಹೊರಟ ಈ ಊರಿನ ಜನರಿಗೆ ಅಚ್ಚರಿಯ ಹಾಗೂ ವಿಸ್ಮಯಕಾರಿಯಾದ ಕೆಲವು ಅಂಶಗಳು ತಿಳಿದುಬಂದವು ಎನ್ನುತ್ತಾರೆ ಸ್ಥಳೀಯರಾದ ಪ್ರಸನ್ನ ಪೆರ್ನೆಕೋಡಿ.

ಖ್ಯಾತ ಜೋತಿಷ್ಯಿ ಕೆ.ವಿ.ಗಣೇಶ್ ಭಟ್ ಮುಳಿಯ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆಯನ್ನು ಇಡುತ್ತಾರೆ. ಇಲ್ಲಿ ಗ್ರಾಮದಲ್ಲಿ ಅದ್ದೂರಿಯಾಗಿ ಉತ್ಸವಾದಿಗಳು ನಡೆಯುತ್ತಿದ್ದ 500 ವರ್ಷಗಳ ಇತಿಹಾಸ ಹೊಂದಿರುವ ದೈವಸ್ಥಾನವೊಂದು ಕಾಡಿನೊಳಗೆ ಪಾಳು ಬಿದ್ದಿದೆ. ಇದಕ್ಕೆ ಸಂಬಂಧಪಟ್ಟ ಭಂಡಾರದ ಮನೆಯೂ ನೆಲಸಮವಾಗಿದೆ. ಆ ಮನೆಯಲ್ಲಿದ್ದ ದೈವದ ಮೂರ್ತಿಗಳೂ ಕೂಡಾ ಮಣ್ಣಿನಡಿಗೆ ಸೇರಿವೆ. ಈ ದೈವಸ್ಥಾನದ ಪುನರುತ್ಥಾನವೇ ಗ್ರಾಮದ ಪುನರುತ್ಥಾನಕ್ಕೆ ಕಾರಣವಾಗಬಹುದು ಎನ್ನುವ ವಿಚಾರ ತಿಳಿದುಬಂತು. ಜೊತೆಗೆ ಭಂಡಾರದ ಮನೆಯಲ್ಲಿ ಸಿಕ್ಕಿದ ದೈವಗಳು ಪೆರ್ನೆ ಹಾಗೂ ಬಿಳಿಯೂರು ಗ್ರಾಮಕ್ಕೆ ಸಂಬಂಧಪಟ್ಟಿದ್ದು ಎನ್ನುವುದು ಕೂಡ ಗೊತ್ತಾಯಿತು. ಇದೀಗ ಈ ದೈವಗಳ ಆರಾಧನೆಗೆ ಈ ಊರಿನ ಜನ ನಿರ್ಧರಿಸಿದ್ದಾರೆ. ತನ್ನನ್ನು ಮರೆತ ಜನರಿಗೆ ತನ್ನ ಇರುವಿಕೆಯನ್ನು ಪ್ರಸ್ತುತಪಡಿಸಿದ ದೈವದ ಸೇಡು ಇದೀಗ ಆ ಊರಿನ ಜನರಲ್ಲಿ ದೈವ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇದನ್ನೂ ಓದಿ: ಒಂದು ವಾರಕ್ಕೆ ‘ಕಾಂತಾರ’ದ ಕಲೆಕ್ಷನ್ 50 ಕೋಟಿ: ಸಿನಿ ಪಂಡಿತರ ಅಚ್ಚರಿಯ ಲೆಕ್ಕಾಚಾರ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *