ಕೆಲ್ಸ ಮಾಡಿ, ಇಲ್ದೇ ಇದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ : ಅಶ್ವಿನಿ ವೈಷ್ಣವ್‌ ಲಾಸ್ಟ್‌ ವಾರ್ನಿಂಗ್‌

Public TV
1 Min Read

ನವದೆಹಲಿ: ಕೇಂದ್ರ ಸರ್ಕಾರ ಸಹಕಾರ ನೀಡುತ್ತಿದ್ದರೂ ಮುಂದಿನ 24 ತಿಂಗಳಿನಲ್ಲಿ ಸರಿಯಾಗಿ ಕೆಲಸ ಮಾಡದೇ ಇದ್ದರೆ ಬಿಎಸ್‌ಎನ್‌ಎಲ್‌ ಉದ್ಯೋಗಿಗಳು ಸ್ವಯಂ ನಿವೃತ್ತಿ ತೆಗೆದುಕೊಂಡು ಮನೆಗೆ ಹೋಗುತ್ತಾರೆ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್‌ ಎಚ್ಚರಿಕೆ ನೀಡಿದ್ದಾರೆ.

ಮುಖ್ಯ ಜನರಲ್ ಮ್ಯಾನೇಜರ್‌ಗಳೊಂದಿಗಿನ ಸಭೆಯಲ್ಲಿ ವೈಷ್ಣವ್‌, ಸರ್ಕಾರ ಬಿಎಸ್‌ಎನ್‌ಎಲ್‌ ಹಿಂದೆ ಬಂಡೆಯಾಗಿ ನಿಂತಿದ್ದು, ಕೆಲಸ ಮಾಡುತ್ತಿರುವ 62 ಸಾವಿರ ಉದ್ಯೋಗಿಗಳಿಂದ ಅದೇ ಮಟ್ಟದ ಬದ್ಧತೆಯನ್ನು ನಿರೀಕ್ಷಿಸುತ್ತಿದೆ. ನಾನು ಪ್ರತಿ ತಿಂಗಳು ಕಾರ್ಯಕ್ಷಮತೆಯ ಫಲಿತಾಂಶವನ್ನು ಪರಿಶೀಲಿಸುತ್ತೇನೆ. ಕೆಲಸ ಮಾಡದಿರುವವರು ವಿಆರ್‌ಎಸ್ ತೆಗೆದುಕೊಂಡು ಮನೆಗೆ ಹೋಗಬಹುದು ಎಂದು ಖಡಕ್‌ ಆಗಿಯೇ ಹೇಳಿದ್ದಾರೆ.

ಸಭೆಯಲ್ಲಿ ಉದ್ಯೋಗಿಗಳಿಗೆ perform or perish ಆಯ್ಕೆ ನೀಡಿದ ಸಚಿವರು, ವಿಆರ್‌ಎಸ್‌ ತೆಗೆದುಕೊಳ್ಳಲು ಹಿಂಜರಿಯುವವರಿಗೆ 56(ಜೆ) ನಿಯಮ ಪ್ರಯೋಗಿಸಿ ಕಡ್ಡಾಯ ನಿವೃತ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕಳಪೆ ಕಾರ್ಯಕ್ಷಮತೆಯ ಆಧಾರದ ಮೇಲೆ ಭಾರತೀಯ ರೈಲ್ವೆಯ ಸುಮಾರು 70 ಅಧಿಕಾರಿಗಳಿಗೆ ಕೆಲಸ ತೊರೆಯುವಂತೆ ಸೂಚಿಸಲಾಗಿದೆ ಎಂದು ಉಲ್ಲೇಖಿಸಿದರು. ಬಿಎಸ್‌ಎನ್‌ಎಲ್‌ಗೆ 1.64 ಲಕ್ಷ ಕೋಟಿ ರೂ. ಪ್ಯಾಕೇಜ್‌ ಘೋಷಣೆ ಮಾಡಿದ ಬೆನ್ನಲ್ಲೇ ಕೇಂದ್ರ ಈಗ ಉದ್ಯೋಗಿಗಳಿಗೆ ಖಡಕ್‌ ಸಂದೇಶವನ್ನು ರವಾನಿಸಿದೆ. ಇದನ್ನೂ ಓದಿ: 4Gಗಿಂತ 5G ಎಷ್ಟು ಭಿನ್ನ, ಪರಿಣಾಮಕಾರಿ? ಇಲ್ಲಿದೆ ಮಾಹಿತಿ

ಪ್ರಧಾನಿ ನರೇಂದ್ರ ಮೋದಿಯವರು ಪುನರುಜ್ಜೀವನದ ಪ್ಯಾಕೇಜ್ ನೀಡಿದಂತೆ ಯಾವುದೇ ಸರ್ಕಾರವು ಅಂತಹ ಅಪಾಯವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ನಾವು ಅಂತಹ ದೊಡ್ಡ ಪ್ಯಾಕೇಜ್ ಅನ್ನು ಅನುಮತಿಸುವಾಗ ಹಣಕಾಸು, ಆದಾಯ, ಬ್ಯಾಲೆನ್ಸ್ ಶೀಟ್‌ ಅಂಶಗಳನ್ನು ಪರಿಗಣಿಸಿದ್ದೇವೆ. ಈ ಕಾರಣದಿಂದ ಬಿಎಸ್‌ಎನ್‌ಎಲ್‌ ಉದ್ಯೋಗಿಗಳ ಮೇಲೆ ದೊಡ್ಡ ಜವಾಬ್ದಾರಿಯಿದೆ ಎಂದು ವೈಷ್ಣವ್‌ ತಿಳಿಸಿದರು.

ನಾವು ಈಗ ಪ್ರತಿಯೊಬ್ಬ ಉದ್ಯೋಗಿಯಿಂದ ಗುಣಮಟ್ಟದ ಕಾರ್ಯಕ್ಷಮತೆಯನ್ನು ಬಯಸುತ್ತೇವೆ. ಕಚೇರಿಗಳು ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿ ಇರಬೇಕು. ತಕ್ಷಣ ಗ್ರಾಹಕರ ಕರೆಗಳನ್ನು ಸ್ವೀಕರಿಸಬೇಕು. ಖಾಸಗಿ ಟೆಲಿಕಾಂ ಕಂಪನಿಗಳಿಗಿಂತ 100 ಪಟ್ಟು ಉತ್ತಮ ಸೇವೆಯನ್ನು ನೀಡಬೇಕು ಎಂದು ಸೂಚಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *