ಹುಲಿ ಹಿಡಿಯಲು ವಿಫಲ – ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಬೋನಿಗೆ ಕೂಡಿ ಹಾಕಿದ ಜನ

Public TV
1 Min Read

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನಲ್ಲಿ ಅರಣ್ಯ ಪ್ರದೇಶ ಹೆಚ್ಚಿದೆ. ಅರಣ್ಯದ ಅಂಚಿನ ಗ್ರಾಮಗಳಿಗೆ ಹುಲಿ, ಚಿರತೆಗಳು ನುಗ್ಗಿ ಜನ – ಜಾನುವಾರುಗಳ ಮೇಲೆ ದಾಳಿ ಮಾಡುವುದು ಸಾಮಾನ್ಯವಾಗಿದೆ. ಜೀವ ಭಯದಲ್ಲಿರುವ ಜನರಿಗೆ ಅರಣ್ಯ ಇಲಾಖೆ ನೆರವು ನೀಡುತ್ತಿಲ್ಲ ಎಂದು ಆರೋಪಿಸಿ, ಹುಲಿ ಹಿಡಿಯಲು ಇಟ್ಟಿದ್ದ ಬೋನಿನಲ್ಲಿ ಸಿಬ್ಬಂದಿ ಕೂಡಿ ಹಾಕಿದ ಘಟನೆ ತಾಲೂಕಿನ ಬೊಮ್ಮಲಾಪುರದಲ್ಲಿ ನಡೆದಿದೆ.

ಹುಲಿ, ಚಿರತೆ ದಾಳಿಗೆ ಬೇಸತ್ತ ರೈತರು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಆಕ್ರೋಶ ವ್ಯಕ್ತಪಡಿಸಿ, ಸ್ಥಳಕ್ಕೆ ಹುಲಿ ಹಿಡಿಯಲು ಎಂದು ಬಂದಿದ್ದ ಅರಣ್ಯ ಇಲಾಖೆ ಸಿಬ್ಬಂದಿಯನ್ನ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಾಣ ಭಯದಲ್ಲಿ ಜೀವ ನಡೆಸುತ್ತಿರುವ ನಮಗೆ ರಕ್ಷಣೆ ನೀಡುತ್ತಿಲ್ಲ ಎಂದು ಜಮೀನಿನಲ್ಲಿ ಇದ್ದ ಬೋನಿನಲ್ಲಿ ಸಿಬ್ಬಂದಿ ಕೂಡಿ ಹಾಕಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ 2 ತಿಂಗಳಿನಿಂದ ಗ್ರಾಮದ ಹೊರವಲಯದಲ್ಲಿ ಹುಲಿ ಹಾಗೂ ಚಿರತೆ ಕಾಣಿಸಿಕೊಳ್ಳುತ್ತಿವೆ. ಈ ಬಗ್ಗೆ ಜನರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅದರಂತೆ, ಬೊಮ್ಮಲಾಪುರ ಗ್ರಾಮದ ಗಂಗಪ್ಪ ಎಂಬವರ ಜಮೀನಿನಲ್ಲಿ ಬೋನು ಇಡಲಾಗಿದೆ. ಮಂಗಳವಾರ ಹುಲಿ ಮತ್ತೆ ಕಾಣಿಸಿಕೊಂಡಿದ್ದು, ಈ ಬಗ್ಗೆ ಜನರು ಅರಣ್ಯ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದಾರೆ.

ಜಾನುವಾರುಗಳ ಮೇಲೆ ದಾಳಿ:
ತಿಂಗಳಿನಿಂದ ಗ್ರಾಮದ ಸುತ್ತಲೂ ಓಡಾಡುತ್ತಿರುವ ಹುಲಿ ಜಾನುವಾರುಗಳ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು. ರೈತರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ಬೋನ್ ಇರಿಸಿತ್ತು. ನಂತರ ಅರಣ್ಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಇತ್ತ ಸುಳಿಯದೇ ಇರುವುದು ರೈತರು ಪಿತ್ತ ನೆತ್ತಿಗೇರಿಸಿತ್ತು.

ಅರಣ್ಯ ಇಲಾಖೆ ಸಿಬ್ಬಂದಿಯನ್ನ ಬೋನ್​​ನಲ್ಲಿ ಇರಿಸಿದ ಬಗ್ಗೆ ಮಾಹಿತಿ ಪಡೆದ ಗುಂಡ್ಲುಪೇಟೆ ವಲಯದ ಎಸಿಎಫ್ ಸುರೇಶ್ ಹಾಗೂ ಬಂಡೀಪುರ ವಲಯದ ಎಸಿಎಫ್ ನವೀನ್ ಕುಮಾರ್ ಸ್ಥಳಕ್ಕೆ ಭೇಟಿ‌ ನೀಡಿದ್ದಾರೆ. ಈ ವೇಳೆ, ರೈತರು ಹಾಗೂ ಅರಣ್ಯಾಧಿಕಾರಿಗಳ ನಡುವೆ ಮಾತಿನ‌ ಚಕಮಕಿ ನಡೆಯಿತು. ಕಾಡುಪ್ರಾಣಿಗಳ ಭೀತಿಯಲ್ಲಿ ನಾವು ಜೀವನ ನಡೆಸುತ್ತಿದ್ದೇವೆ. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ಬಳಿಕ ಸಿಬ್ಬಂದಿಯನ್ನ ಬೋನಿನಿಂದ ಹೊರ ಬಿಡುವಂತೆ ಅರಣ್ಯ ಇಲಾಖೆ ಸಿಬ್ಬಂದಿ ಮನವೊಲಿಸಿದರು.

Share This Article