ಧಾರವಾಡ: ಕಲಘಟಗಿ ಬಿಜೆಪಿ ಶಾಸಕ ಸಿ.ಎಂ ನಿಂಬಣ್ಣವರ್ ಅವರನ್ನು ಪ್ರವಾಹಕ್ಕೆ ಸಿಲುಕಿಕೊಂಡಿರುವ ಅಳ್ನಾವರ ತಾಲೂಕಿನ ಬೆಣಚಿ ಗ್ರಾಮದ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರವಾಹ ಆಗಿ ಒಂದು ವಾರವಾದರೂ ಶಾಸಕರು ಸ್ಥಳಕ್ಕೆ ಭೇಟಿ ನೀಡಿರಲಿಲ್ಲ. ಇಂದು ಸ್ಥಳಕ್ಕೆ ಭೇಟಿ ನೀಡಿದ ಕಾರಣ, ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಶಾಸಕ ಬರೋದು ಬಿಡೋದು ನನಗೆ ಬಿಟ್ಟ ವಿಚಾರ ಎಂದು ಸಂತ್ರಸ್ತರಿಗೆ ಅವಾಜ್ ಹಾಕಿದ್ದಾರೆ.
ಸ್ಥಳಕ್ಕೆ ಬಂದ ಶಾಸಕರನ್ನು ಸಾರ್ವಜನಿಕರು, “ಭೀಕರ ಮಳೆ ನೆರೆ ಹಾವಳಿ ಬಂದು ಒಂದು ವಾರ ಆಯ್ತು. ನೀವು ಈಗ ಯಾಕೆ ಬಂದ್ರಿ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಚುನಾವಣೆ ಆದ ಮೇಲೆ ಒಮ್ಮೆಯೂ ನಮ್ಮ ಗ್ರಾಮಕ್ಕೆ ಭೇಟಿ ನೀಡಿಲ್ಲ. ಆದರೆ ಈಗ ಎಲ್ಲಾ ಮುಗಿದ ಮೇಲೆ ಬಂದಿದ್ದೀರಿ” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ ನೆರೆ ಸಂತ್ರಸ್ಥರು ಗರಂ ಆಗುತ್ತಿದ್ದಂತೆ ಶಾಸಕ ತಮ್ಮ ಬೆಂಬಲಿಗರ ಜೊತೆ ವಾಪಸ್ ಆಗಿದ್ದಾರೆ.