ರಾಗಿಗುಡ್ಡದ ಬಳಿ ಗೋಶಾಲೆ ನಿರ್ಮಾಣಕ್ಕೆ ಸ್ಥಳೀಯರ ವಿರೋಧ

Public TV
2 Min Read

ಶಿವಮೊಗ್ಗ: ಮಹಾನಗರ ಪಾಲಿಕೆ ವತಿಯಿಂದ ನಿರ್ಮಿಸಲಾಗುತ್ತಿರುವ ಸರ್ಕಾರಿ ಗೋಶಾಲೆ ನಿರ್ಮಾಣಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದಾರೆ. ಆದರೆ ಪಾಲಿಕೆಯ ಮೇಯರ್, ಸ್ಥಳೀಯರ ವಿರೋಧದ ನಡುವೆಯೂ ಅದೇ ಸ್ಥಳದಲ್ಲೇ ಗೋಶಾಲೆ ನಿರ್ಮಿಸುತ್ತೇವೆ ಎಂದು ಕಠುವಾಗಿ ನುಡಿದರು.

ಶಿವಮೊಗ್ಗ ನಗರ ಪ್ರದೇಶದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಜೊತೆಗೆ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆಗಳನ್ನು ಅಗೆದು ಹಾಕಲಾಗಿದೆ. ಪರಿಣಾಮ ನಗರದ ಪ್ರಮುಖ ರಸ್ತೆಗಳೇ ಬಿಡಾಡಿ ದನಗಳ ಆವಾಸ ಸ್ಥಾನವಾಗಿದೆ. ಇದನ್ನೂ ಓದಿ: ಕಾಲೇಜುಗಳಿಗೆ ಹಣ ಬಿಡುಗಡೆ ಮಾಡಿ – ದೆಹಲಿ ಸರ್ಕಾರದ ವಿರುದ್ಧ ತಿರುಗಿಬಿದ್ದ ಶಿಕ್ಷಕರು

ರಸ್ತೆಯಲ್ಲಿ ಜಾನುವಾರುಗಳು ಅಡ್ಡಾದಿಡ್ಡಿ ಓಡಾಡುವುದರಿಂದ ಅಪಘಾತಗಳು ಸಹ ನಡೆಯುತ್ತಿವೆ. ಒಂದೆಡೆ ಮಹಾನಗರ ಪಾಲಿಕೆ ಬಿಡಾಡಿ ದನಗಳ ರಕ್ಷಿಸಲು ಹಾಗೂ ಬಿಡಾಡಿ ದನಗಳಿಂದ ಸಂಭವಿಸುತ್ತಿದ್ದ ಅಪಘಾತ ತಪ್ಪಿಸಲು ಮಹಾನಗರ ಪಾಲಿಕೆ ನಗರದ ಹೊರ ವಲಯದ ರಾಗಿಗುಡ್ಡದ ಸಮೀಪ ಗೋಶಾಲೆ ನಿರ್ಮಿಸಲು ಮುಂದಾಗಿದೆ. ಆದರೆ ಮಹಾನಗರ ಪಾಲಿಕೆಯ ಗೋಶಾಲೆ ನಿರ್ಮಾಣಕ್ಕೆ ಸ್ಥಳೀಯ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ರಾಗಿಗುಡ್ಡದ ಸಮೀಪ ಜಿಲ್ಲಾಧಿಕಾರಿ ಅವರು ಗೋಶಾಲೆ ನಿರ್ಮಾಣಕ್ಕೆ ಐದು ಎಕರೆ ಜಮೀನು ಮಂಜೂರು ಮಾಡಿ ಪಾಲಿಕೆಗೆ ಹಸ್ತಾಂತರಿಸಿದ್ದಾರೆ. ಆದರೆ ಈ ಜಮೀನು ವಿವಾದದಲ್ಲಿದ್ದು, ನ್ಯಾಯಾಲಯದಲ್ಲಿ ಕೇಸ್ ನಡೆಯುತ್ತಿದೆ. ಜೊತೆಗೆ ಈ ಪ್ರದೇಶದಲ್ಲಿ ಗೋಶಾಲೆ ನಿರ್ಮಾಣವಾದರೆ ಇಲ್ಲಿನ ನಿವಾಸಿಗಳಿಗೆ ತೊಂದರೆ ಆಗುತ್ತದೆ. ಅಲ್ಲದೇ ಮುಂದೆ ಕೋಮುಗಲಭೆ ಉಂಟಾಗುವ ಸಂಭವ ಸಹ ಇದೆ. ಪಾಲಿಕೆ ನಿರ್ಮಾಣ ಮಾಡುತ್ತಿರುವ ಗೋಶಾಲೆ ನಗರ ಪ್ರದೇಶದಿಂದ 5 ಕಿ.ಮೀ ದೂರದಲ್ಲಿ ಇರಬೇಕು. ಜನ ವಸತಿ ಪ್ರದೇಶದಲ್ಲಿ ಇರಬಾರದು ಎಂಬ ನಿಯಮವನ್ನು ಉಲ್ಲಂಘಿಸಿ ಗೋಶಾಲೆ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿನ್ನೆಲೆ ಯಾವುದೇ ಕಾರಣಕ್ಕು ಈ ಸ್ಥಳದಲ್ಲಿ ಗೋಶಾಲೆ ನಿರ್ಮಿಸದಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಈ ನಡುವೆ ಪಾಲಿಕೆ ಮೇಯರ್, ನಾವು ಇದೇ ಸ್ಥಳದಲ್ಲಿ ಗೋಶಾಲೆ ನಿರ್ಮಿಸಲು ತೀರ್ಮಾನಿಸಿದ್ದೇವೆ. ಈ ಜಮೀನಿನ ಮೇಲೆ ಯಾವುದೇ ವಿವಾದ ಇಲ್ಲ. ಇದು ಸರ್ಕಾರಿ ಭೂಮಿಯಾಗಿದೆ. ಕೆಲವು ಪಟ್ಟಾಭದ್ರ ಹಿತಾಸಕ್ತಿಗಳು ಕೋಟ್ಯಾಂತರ ರೂ. ಮೌಲ್ಯದ ಭೂಮಿ ಕಬಳಿಸುವ ಸಲುವಾಗಿ ಈ ರೀತಿ ಹುನ್ನಾರ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಿಟ್‌ಕ್ಯಾಟ್ ರ‍್ಯಾಪರ್‌ನಲ್ಲಿ ಲಾರ್ಡ್ ಪುರಿ ಜಗನ್ನಾಥ ಫೋಟೋ – ಪ್ಯಾಕ್‌ಗಳನ್ನು ಹಿಂತೆಗೆದುಕೊಂಡ ನೆಸ್ಲೆ ಇಂಡಿಯಾ

ಕೆಲವರು ಸ್ಥಳೀಯರನ್ನು ಎತ್ತಿಕಟ್ಟಿ ಗಲಭೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಏನೇ ಅಡ್ಡಿ ಆತಂಕ ಎದುರಾದರೂ ಇದೇ ಸ್ಥಳದಲ್ಲಿ ಗೋಶಾಲೆ ನಿರ್ಮಾಣ ಮಾಡುತ್ತೇವೆ ಎಂದರು.

ಒಟ್ಟಿನಲ್ಲಿ ಗೋಶಾಲೆ ನಿರ್ಮಾಣದ ಹೆಸರಿನಲ್ಲಿ ರಾಜಕಾರಣ ಬೆರೆತು ಹೋಗಿರುವುದಂತು ಸತ್ಯ. ಗೋಶಾಲೆ ನಿರ್ಮಾಣ ಕೈಬಿಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಪಾಲಿಕೆ ಇದೇ ಸ್ಥಳದಲ್ಲಿ ಗೋಶಾಲೆ ನಿರ್ಮಾಣ ಮಾಡುತ್ತೇವೆ ಎಂಬ ಹಠಕ್ಕೆ ಬಿದ್ದಿದೆ. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *