ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದ ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನಗಳನ್ನು ಕೂಡ ಬಂದ್ ಮಾಡಲಾಗಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣದ ಒಂದು ಪೋಸ್ಟ್ ಜನ ಮರುಳೋ ಜಾತ್ರೆ ಮರುಳೋ ಎನ್ನುವಂತೆ ಮಾಡಿದೆ.
ಮಂಜುನಾಥನ ಸನ್ನಿಧಿ ಧರ್ಮಸ್ಥಳದಲ್ಲಿ ದೀಪ ಆರಿದೆ. ಇದರಿಂದ ನಾಡಿಗೆ ಕಂಟಕ ಕಾದಿದೆ ಎಂಬ ವದಂತಿ ಪೋಸ್ಟ್ ಹಿನ್ನೆಲೆ ದಾವಣಗೆರೆಯ ಜನರು ಹೆದರಿ ರಾತ್ರಿಯಿಡೀ ಮನೆ ಮುಂದೆ ದೀಪ ಬೆಳಗಿಸಿದ್ದಾರೆ. ಮುಂಬರುವ ಕಂಟಕವನ್ನು ತಪ್ಪಿಸಲು ಮನೆ ಬಾಗಿಲಿಗೆ ದೀಪ ಹಚ್ಚಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದು, ಈ ವೈರಲ್ ಪೋಸ್ಟ್ ಗೆ ರಾಜ್ಯದ ಜನ ಬೆದರಿದ್ದಾರೆ.
ದಾವಣಗೆರೆಯ ನಾಗರಕಟ್ಟೆ, ಆಲೂರು, ಹೊನ್ನಾಳಿಯ ಕೆಲ ಹಳ್ಳಿಗಳಲ್ಲಿ ಜನ ದೀಪ ಬೆಳಗಿಸಿದ್ದಾರೆ. ಮಧ್ಯ ರಾತ್ರಿ 2 ಗಂಟೆಗೆ ಸ್ನಾನ ಮಾಡಿ, ಮನೆಯನ್ನು ಸ್ವಚ್ಛ ಮಾಡಿ, ರಂಗೋಲಿ ಹಾಕಿ ಅಂಗಳದಲ್ಲಿ ದೀಪ ಬೆಳಗಿಸಿದ್ದಾರೆ.
ಇತ್ತ ಹಾವೇರಿಯಲ್ಲಿ ಈ ವಿಚಾರ ಗೊತ್ತಾಗುತ್ತಿದ್ದಂತೆ ಹಲವು ಗ್ರಾಮಗಳ ಜನರು ರಾತ್ರೋರಾತ್ರಿ ಮನೆಯ ಅಂಗಳ ಸ್ವಚ್ಛಗೊಳಿಸಿ, ರಂಗೋಲಿ ಹಾಕಿ ದೀಪ ಹಚ್ಚಿದ್ದಾರೆ. ಜಿಲ್ಲೆಯ ಕಲ್ಲೆದೇವರು, ಒಡೇನಪುರ, ಹಾದ್ರಿಹಳ್ಳಿ, ಮಾಸೂರು ಸೇರಿದಂತೆ ಹಲವು ಗ್ರಾಮಗಳ ಜನರು ರಾತ್ರೋರಾತ್ರಿ ಮನೆಯ ಅಂಗಳ ಸ್ವಚ್ಛಗೊಳಿಸಿ ಮನೆ ಮುಂದೆ ರಂಗೋಲಿ ಹಾಕಿ ದೀಪ ಹಚ್ಚಿ ಇಟ್ಟಿದ್ದಾರೆ. ಸಾಲದ್ದಕ್ಕೆ ಗ್ರಾಮವೊಂದ್ರಲ್ಲಿ ದೀಪ ಹಚ್ಚುವಂತೆ ಹಲಗೆ ಬಾರಿಸಿ ಡಂಗುರ ಸಹ ಸಾರಲಾಗಿದೆ. ಇದರ ಜೊತೆಗೆ ಅಕ್ಕಪಕ್ಕದ ಊರುಗಳಲ್ಲಿನ ಸಂಬಂಧಿಕರಿಗೂ ಜನರು ಕರೆ ಮಾಡಿ ಅಂಗಳ ಸ್ವಚ್ಛಗೊಳಿಸಿ ದೀಪ ಹಚ್ಚುವಂತೆ ಹೇಳಿದ್ದಾರೆ. ಹೀಗಾಗಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಜನರು ಮನೆ ಮುಂದೆ ರಂಗೋಲಿ ಬಿಡಿಸಿ ದೀಪ ಹಚ್ಚಿಟ್ಟು ಮಲಗಿದ್ದಾರೆ.
ಕೋಟೆನಾಡು ಚಿತ್ರದುರ್ಗದಲ್ಲಂತೂ ಹೆದರಿ ಹಲವಾರು ಮನೆ ಮುಂದೆ ಮಹಿಳೆಯರು ದೀಪ ಹಚ್ಚಿದ್ದಾರೆ. ಸೂರ್ಯೋದಯಕ್ಕೆ ಮುನ್ನ ಹೊಸ್ತಿಲ ಮೇಲೆ ದೀಪ ಹಚ್ಚಬೇಕು ಎಂಬ ವದಂತಿ ಹಿನ್ನೆಲೆಯಲ್ಲಿ ಹೊಸ್ತಿಲ ಮೇಲೆ ದೀಪ ಹಚ್ಚಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಜನರು ಸುದ್ದಿ ತಿಳಿಯುತ್ತಿದ್ದಂತೆ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಇತ್ತ ಕೆಲ ದಿನಗಳ ಹಿಂದೆ ಸಾರ್ವಜನಿಕರು ಕೊರೊನಾಗೆ ಮದ್ದು ಕುಡಿದಿದ್ದಾರೆ ಎಂಬ ವದಂತಿ ಕೂಡ ಹಬ್ಬಿತ್ತು. ಮಹಾಮಾರಿ ಕೊರೋನಾಗೆ ದೇವರ ಮದ್ದು ಎಂದು ಉಡುಪಿ ಜಿಲ್ಲೆಯಾದ್ಯಂತ ಕಾಪು ಮಾರಿಯಮ್ಮನ ಆಜ್ಞೆ ಎಂಬಂತೆ ಸುಳ್ಳು ಸುದ್ದಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಉಡುಪಿ ಜನ ಬ್ಲ್ಯಾಕ್ ಟಿ ಕುಡಿದಿದ್ದರು. ಬ್ಲ್ಯಾಕ್ ಟೀ ಗೆ ಬೆಲ್ಲ, ಅರಸಿನ ಹಾಕಿ ಕುಡಿಯಲು ದೇವಿ ಅಪ್ಪಣೆ ಮಾಡಿದ್ದಾರೆ ಎಂಬ ಮೆಸೇಜ್ ವೈರಲ್ ಆಗಿತ್ತು. ಹೀಗಾಗಿ ಕರಾವಳಿಯ ಬಹುತೇಕ ಮನೆಗಳಲ್ಲಿ ಬ್ಲ್ಯಾಕ್ ಟೀ ಕುಡಿದಿದ್ದರು.