– ಟೀಕೆ ಮಾಡುವ ಬದಲು ಗ್ಯಾರಂಟಿ ವಾಪಸ್ ಕೊಡಿ ನೋಡೋಣ: ಡಿಸಿಎಂ ಸವಾಲು
ಬೆಂಗಳೂರು: ಮಂಗಳೂರು (Mangaluru), ಉಡುಪಿ (Udupi) ಭಾಗದಲ್ಲಿ ನಮಗೆ ಹೆಚ್ಚು ವೋಟ್ ಬಿದ್ದಿಲ್ಲ. ಆದರೆ, ಗ್ಯಾರಂಟಿ ಯೋಜನೆಗಳಲ್ಲಿ ಅಲ್ಲಿ ಬಿಜೆಪಿ ಅವರೇ ಕ್ಯೂ ನಿಂತು ತಗೊಂಡು ಇದಾರೆ. ಹೆಚ್ಚು ಫಲಾನುಭವಿಗಳು ಇದೇ ಭಾಗದವರಿದ್ದಾರೆ. ಹೀಗಾಗಿ ಗ್ಯಾರಂಟಿ ಟೀಕಿಸುವ ವಿರೋಧ ಪಕ್ಷದವರಿಗೆ ನಾನು ಸವಾಲು ಹಾಕಿದ್ದೇನೆ. ಗ್ಯಾರಂಟಿ ಯೋಜನೆ ಬೇಡವಾದರೆ ಅದನ್ನು ಬೇಡ ಎಂದು ವಾಪಸ್ ಕೊಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ತಿರುಗೇಟು ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಭಾರತ್ ಜೋಡೋ ಭವನದಲ್ಲಿ ನಡೆದ ಬಿಬಿಎಂಪಿ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ಫಲಾನುಭವಿಸಿ ಅದನ್ನೇ ಟೀಕೆ ಮಾಡಿದರೆ ಹೇಗೆ? ನನಗೆ ಯುವಕರು ಹಾಗೂ ಮಹಿಳೆಯರ ಮೇಲೆ ಹೆಚ್ಚು ನಂಬಿಕೆ. ಹೀಗಾಗಿ, ನಮ್ಮ ಗ್ಯಾರಂಟಿ ಯೋಜನೆಗಳು ಈ ವರ್ಗದವರ ಮೇಲೆ ಹೆಚ್ಚು ಕೇಂದ್ರೀಕೃತವಾಗಿದೆ. ಗ್ಯಾರಂಟಿ ಸಮಿತಿಯಲ್ಲಿ ಮಹಿಳೆಯರಿಗೆ ಜವಾಬ್ದಾರಿ ನೀಡಲಾಗಿದೆ. ನಮ್ಮ ಸರ್ಕಾರದ ಕೆಲಸಗಳನ್ನು ವಿರೋಧ ಪಕ್ಷಗಳು ಟೀಕೆ ಮಾಡುತ್ತಾರೆ. ಅವರು ಏನು ಬೇಕಾದರೂ ಟೀಕೆ ಮಾಡಲಿ. ಅವರ ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ ಎಂದರು. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಐದು ಪಾಲಿಕೆ ರಚನೆ, ಶೀಘ್ರವೇ ಚುನಾವಣೆ: ಡಿ.ಕೆ.ಶಿವಕುಮಾರ್
ನೀವು ಕೂಡ ಈ ಕೆಲಸ ಮಾಡಬೇಕು. ಪ್ರತಿ ವಾರ್ಡ್, ಪಂಚಾಯ್ತಿಯಲ್ಲಿ ಗ್ಯಾರಂಟಿ ಸಮಾವೇಶ ಮಾಡುವುದರ ಬಗ್ಗೆ ಚರ್ಚಿಸುತ್ತಿದ್ದೇವೆ. ಆಮೂಲಕ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುವುದು. ಇಂದಿನ ಕಾರ್ಯಕ್ರಮಕ್ಕೆ ಪರಾಜಿತ ಅಭ್ಯರ್ಥಿಗಳು, ಬ್ಲಾಕ್ ಅಧ್ಯಕ್ಷರು, ಮಾಜಿ ಕೌನ್ಸಿಲರ್‌ಗಳನ್ನು ಕರೆಸಿದ್ದು, ನೀವು ಈ ವಿಚಾರವಾಗಿ ಯಾವ ರೀತಿ ಕೆಲಸ ಮಾಡುತ್ತೀರಿ ಅದರ ಮೇಲೆ ನಿಮ್ಮ ಹಣೆಬರಹ ನಿರ್ಧಾರವಾಗಲಿದೆ. ಡಿ.ಕೆ. ಶಿವಕುಮಾರ್, ಹೆಚ್.ಎಂ ರೇವಣ್ಣ ಹಿಂದೆ ಗಿರಕಿ ಹೊಡೆದರೆ ಪಾಲಿಕೆ ಚುನಾವಣೆ ಟಿಕೆಟ್ ಸಿಗುತ್ತದೆ ಎಂದು ನೀವು ಭಾವಿಸಿದ್ದರೆ, ಅದನ್ನು ತಲೆಯಿಂದ ತೆಗೆದುಹಾಕಿ. ನೀವು ಸ್ಥಳೀಯ ಮಟ್ಟದಲ್ಲಿದ್ದು ಕೆಲಸ ಮಾಡಬೇಕು ಎಂದರು.
ಸರ್ಕಾರ ವಾರ್ಡ್, ಮೀಸಲಾತಿ ತೀರ್ಮಾನ ಮಾಡಲಿದೆ. ಯಾರು ಜನರ ಮಧ್ಯೆ ಇರುತ್ತಾರೆ ಅವರು ಮಾತ್ರ ಗೆಲ್ಲಲು ಸಾಧ್ಯ. ನೀವು ಬೂತ್ ಮಟ್ಟದಲ್ಲಿ ಜನ ಸಂಪರ್ಕ, ಪ್ರೀತಿ ಇಟ್ಟುಕೊಳ್ಳಬೇಕು. ಪಾಲಿಕೆ ಅಧಿಕಾರಿಗಳಿಗೆ ಹೇಳಿ ನಿಮಗೆ ಗ್ಯಾರಂಟಿ ಸಮಿತಿಯ ಗುರುತಿನ ಚೀಟಿ ಕೊಡಿಸುತ್ತೇನೆ. ಆಗ ನೀವು ಮನೆ ಮನೆಗೆ ಹೋಗಿ ಅವರನ್ನು ಸಂಪರ್ಕಿಸುವ ಅಧಿಕಾರ ಸಿಗುತ್ತದೆ. ಗ್ಯಾರಂಟಿ ಸಮಿತಿ ಅಧ್ಯಕ್ಷರಿಗೆ ಕಚೇರಿ ಕೊಟ್ಟ ಇತಿಹಾಸ ಬೇರೆ ಎಲ್ಲಾದರೂ ಇದೆಯೇ, ಇಲ್ಲ. ನಾನು ಕಾರ್ಯಕರ್ತನಾಗಿ ಬಂದವನು. ಎನ್ಎಸ್‌ಯುಐನಿಂದ ಇಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷನಾಗಿದ್ದೇನೆ. ನನಗೆ ನಿಮ್ಮ ನೋವು ಅರಿವಾಗುತ್ತದೆ. ಅಧಿಕಾರ ಹಂಚಿಕೆ ಸಂದರ್ಭದಲ್ಲಿ ನಾವು ಎಲ್ಲರಿಗೂ ಸ್ಥಾನಮಾನ ನೀಡಲು ಆಗದೇ ಇರಬಹುದು. ಆದರೆ ಯಾವುದಾದರೂ ಒಂದು ಸಂದರ್ಭದಲ್ಲಿ ಅವಕಾಶ ಸಿಕ್ಕಾಗ ನಿಮಗೆ ಸೂಕ್ತ ಅಧಿಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಕೇಂದ್ರ ಶಿಷ್ಟಾಚಾರ ಪಾಲನೆ ಮಾಡದಿದ್ರೆ ಗಣತಂತ್ರ ವ್ಯವಸ್ಥೆಗೆ ಕಪ್ಪು ಚುಕ್ಕಿ – ಮಹದೇವಪ್ಪ