ಜಮ್ಮು ಕಾಶ್ಮೀರ ಅಭಿವೃದ್ಧಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಅಮಿತ್ ಶಾ

Public TV
2 Min Read

ಶ್ರೀನಗರ: ಜಮ್ಮು- ಕಾಶ್ಮೀರದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಿದ್ಧವಾಗಿದ್ದು, ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಯುವಕರು ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಕೈ ಜೋಡಿಸಿದರೆ, ಉಗ್ರರ ದುಷ್ಟ ಸಂಚುಗಳು ವಿಫಲವಾಗಲಿವೆ ಗೃಹ ಸಚಿವ ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿರುವ ಅಮಿತ್ ಶಾ ಇಂದು ಭಗವತಿ ನಗರ್‍ನಲ್ಲಿ ಆಯೋಜಿಸಿದ್ದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿ, ಜಮ್ಮು ಕಾಶ್ಮೀರದ ಜನರನ್ನು ಕಡೆಗಣಿಸುವ ಕಾಲ ಮುಗಿದಿದೆ. ಇನ್ನುಮುಂದೆ ಜಮ್ಮು ಮತ್ತು ಕಾಶ್ಮೀರ ಒಟ್ಟಾಗಿ ಅಭಿವೃದ್ಧಿ ಪತದತ್ತ ಸಾಗಲಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಈಗಾಗಲೇ 12,000 ಕೋಟಿ ರೂ. ಹೂಡಿಕೆ ಮಾಡಲಾಗಿದೆ. 2022ರ ಅಂತ್ಯದ ವೇಳೆಗೆ 51,000 ಕೋಟಿ ರೂ ನೀಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಮಾಹಿತಿ ನೀಡಿದರು.

ಕಣಿವೆ ರಾಜ್ಯದಲ್ಲಿ ಗಲಭೆ ಮತ್ತು ಉಗ್ರರ ದಾಳಿಯಿಂದ ಯಾರೊಬ್ಬರ ಜೀವಕ್ಕೂ ಅಪಾಯವಾಗದಂತೆ ನೋಡಿಕೊಳ್ಳುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಇಲ್ಲಿನ ಯುವ ಶಕ್ತಿ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಕೈ ಜೋಡಿಸಬೇಕು. ಜೊತೆಗೆ ಉಗ್ರರ ದುಷ್ಟ ಸಂಚುಗಳು ವಿಫಲವಾಗುವ ಕೆಲಸಗಳಿಗೆ ಯುವಕರು ಒಗ್ಗೂಡಬೇಕೆಂದರು. ಇದನ್ನೂ ಓದಿ: ಅಮಿತ್ ಶಾ ಜಮ್ಮು & ಕಾಶ್ಮೀರ ಭೇಟಿ – ತೀವ್ರ ಕುತೂಹಲ

70 ವರ್ಷಗಳ ಕಾಲ ಮೂರು ಕುಟುಂಬಗಳು ಜಮ್ಮು ಮತ್ತು ಕಾಶ್ಮೀರಕ್ಕೆ ಏನನ್ನು ಕೊಟ್ಟಿಲ್ಲ. ಕೇವಲ 87 ಶಾಸಕರನ್ನು ಮತ್ತು 6 ಸಂಸದರು ಕೊಡಲಷ್ಟೇ ಶಕ್ತವಾಗಿದೆ. ಪ್ರಧಾನಿ ಮೋದಿ ಅವರು ಇಲ್ಲಿನ ಜನರನ್ನು ಚುನಾಯಿತ ಪ್ರತಿನಿಧಿಗಳನ್ನಾಗಿ ಮಾಡುವ ಕೆಲಸವನ್ನು ಮಾಡಿದ್ದಾರೆ. ಪ್ರತಿ ಹಳ್ಳಿಗೊಂದು ಪಂಚಾಯತ್ ರಚನೆಯಾಗಿದೆ. ಈ ಮೂಲಕ ಅಭಿವೃದ್ಧಿಯ ಕೆಲಸಗಳು ನಡೆಯುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಅಮಿತ್ ಶಾ ಕಾಶ್ಮೀರ ಭೇಟಿ – ಕೆಲ ಪ್ರದೇಶಗಳಲ್ಲಿ ಇಂಟರ್‌ನೆಟ್‌ ಸ್ಥಗಿತ, ದ್ವಿಚಕ್ರ ವಾಹನ ವಶ

ಜಮ್ಮು ಕಾಶ್ಮೀರದಲ್ಲಿ ಕೆಲದಿನಗಳ ಹಿಂದೆ ಉಗ್ರರಿಂದ ನಾಗರಿಕರ ಹತ್ಯೆ ಮತ್ತು ಹೆಚ್ಚಿನ ಉಪಟಳದ ಬಗ್ಗೆ ಸುದ್ದಿಯಾಗಿತ್ತು. ಅಮಿತ್ ಶಾ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಪರಾಮರ್ಶೆ ನಡೆಸಲು ಈ ಭೇಟಿ ಕೈಗೊಂಡಿದ್ದು, ಕಾಶ್ಮೀರ ತಲುಪಿದ ಬಳಿಕ ಅಮಿತ್ ಶಾ ಮೊದಲು ನಗರದ ಹೊರವಲಯ ನೌಗಾಮ್‍ನಲ್ಲಿರುವ ಇನ್ಸ್‌ಪೆಕ್ಟರ್‌ ಪರ್ವೈಜ್ ಅಹ್ಮದ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಜೂನ್ 22 ರಂದು ಸ್ಥಳೀಯ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಮನೆಗೆ ಮರಳುತ್ತಿದ್ದ ಪೊಲೀಸ್ ಅಧಿಕಾರಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಕಳೆದ ತಿಂಗಳು ಭಯೋತ್ಪಾದಕರಿಂದ ಹತ್ಯೆಗೀಡಾದ ಇನ್ಸ್‌ಪೆಕ್ಟರ್‌ ಪರ್ವೇಜ್ ಅಹ್ಮದ್ ಅವರ ನಿವಾಸಕ್ಕೆ ಅಮಿತ್ ಶಾ ಭೇಟಿ ನೀಡಿ ಪೊಲೀಸ್ ಅಧಿಕಾರಿಯ ಕುಟುಂಬಕ್ಕೆ ಶಾ ಸಾಂತ್ವನ ಹೇಳಿ, ಇದೇ ವೇಳೆ ಪತ್ನಿ ಫಾತಿಮಾ ಅಖ್ತರ್ ಅವರಿಗೆ ಸರ್ಕಾರಿ ಹುದ್ದೆಯ ನೇಮಕಾತಿ ಪತ್ರ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *