ಚಾಮರಾಜನಗರ: ಹಾಡಹಗಲೇ ಪೊಲೀಸ್ ಠಾಣೆ ಪಕ್ಕದಲ್ಲೇ ಕುಡಿದರೂ ಕೇಳೋರಿಲ್ಲ

Public TV
1 Min Read

ಚಾಮರಾಜನಗರ: ಪೊಲೀಸ್ ಠಾಣೆಗಳ ಮಗ್ಗುಲಲ್ಲೇ ಹಗಲು ಕುಡುಕರ ಹಾವಳಿ ಹೆಚ್ಚುತ್ತಿದ್ದರೂ ಪೊಲೀಸರು ಮಾತ್ರ ಕಣ್ಣು ಮುಚ್ಚಿ ಕುಳಿತಿರುವ ಪರಿಸ್ಥಿತಿ ನಗರದಲ್ಲಿ ನಿರ್ಮಾಣವಾಗಿದೆ.

ಹಗಲು ಕುಡುಕರ ಹಾವಳಿಯನ್ನು ತಡೆಯಲು ಪೊಲೀಸರು ವಿಫಲರಾಗಿದ್ದು, ಇದರಿಂದ ಮಹಿಳೆಯರು ಹಾಗೂ ಜನ ಸಾಮಾನ್ಯರು ಪರಿತಪಿಸುವಂತಹ ಸ್ಥಿತಿ ಎದುರಾಗಿದೆ.

ನಗರದ ಮಧ್ಯ ಭಾಗದಲ್ಲಿ ಹಾಡ ಹಗಲೇ ಕುಡುಕರ ಹಾವಳಿ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ವೈನ್ ಸ್ಟೋರ್ ನಿಂದ ಮದ್ಯವನ್ನು ತಂದು ರಸ್ತೆ ಬದಿಯಲ್ಲಿ ಹಾಗೂ ಖಾಲಿ ನಿವೇಶನಗಳಲ್ಲಿ ಕುಡಿದು ರಸ್ತೆಯಲ್ಲಿ ಚಲಿಸುವವರಿಗೆ ಮುಜುಗರ ಉಂಟು ಮಾಡುತ್ತಿದ್ದಾರೆ.

ಈ ಭಾಗದಲ್ಲಿ ಖಾಸಗಿ ಬಸ್ ನಿಲ್ದಾಣ ಹಾಗೂ ಮಹಿಳಾ ವಿದ್ಯಾರ್ಥಿನಿಲಯಗಳು ಇದ್ದು, ಇದರಿಂದ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಇಲ್ಲಿ ಸಂಚರಿಸಲು ಭಯ ಪಡುತ್ತಿದ್ದಾರೆ. ಇದಲ್ಲದೇ 100 ಮೀಟರ್ ಅಂತರದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ, ಹಾಗೆ 200 ಮೀಟರ್ ಅಂತರದಲ್ಲಿ ಟೌನ್ ಪೊಲೀಸ್ ಠಾಣೆ ಇದೆ. ಹೀಗಿದ್ದರೂ ಸಹ ಕುಡುಕರು ಹಗಲು ವೇಳೆಯಲ್ಲಿ ಕುಡಿದು ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದಾರೆ.

ಕುಡುಕರ ಸಂತೆಯಾಗಿರುವ ಈ ಪ್ರದೇಶವನ್ನ ಕೂಡಲೇ ಸರಿ ದಾರಿಗೆ ಕೊಂಡೊಯ್ಯಬೇಕು ಎಂದು ಜನ ಸಾಮಾನ್ಯರು ಆಗ್ರಹಪಡಿಸುತ್ತಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *