ಅಪರಾಧ ಮಾಡಲು ಜನರು ಹೆದರುತ್ತಿದ್ದಾರೆ, ಕ್ರಿಮಿನಲ್ ಗಳು ತರಕಾರಿ ಮಾರುತ್ತಿದ್ದಾರೆ : ಯೋಗಿ ಆದಿತ್ಯನಾಥ್

Public TV
1 Min Read

ಲಕ್ನೊ: ಬಿಜೆಪಿ ಸರ್ಕಾರ ಆಡಳಿತ ವಹಿಸಿಕೊಂಡ ಬಳಿಕ ಜನರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವುದು ಕಡಿಮೆಯಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ಅಪರಾಧ ಕೃತ್ಯಗಳಲ್ಲಿ ತೊಡಗುವುದನ್ನು ಬಿಟ್ಟು ಕ್ರಿಮಿನಲ್ ಗಳು ತರಕಾರಿಯನ್ನು ಮಾರಾಟ ಮಾಡುತ್ತಿದ್ದಾರೆ. ಹಿಂದಿನ ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡಿದ್ದವು ಎಂದು ದೂರಿದರು.

ಇದೇ ವೇಳೆ ಯುವಕರಿಗೆ ಉದ್ಯೋಗವನ್ನು ಸೃಷ್ಟಿಸುವ ಭರವಸೆಯನ್ನು ನೀಡಿದರು. 1.62 ಲಕ್ಷ ಪೊಲೀಸ್ ಕಾನ್ಸ್ ಟೇಬಲ್ ಗಳನ್ನು ಮತ್ತು 1.37 ಲಕ್ಷ ಶಿಕ್ಷಕರನ್ನು ಸರ್ಕಾರ ನೇಮಕ ಮಾಡಿಕೊಳ್ಳುತ್ತದೆ. ಗುತ್ತಿಗೆ ಆಧಾರದ ಶಿಕ್ಷಕರಿಗೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಧನವನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿದರು.

2013ರಲ್ಲಿ ಮುಜಾಫರ್ ನಗರದಲ್ಲಿ ನಡೆದ ಹಿಂದು ಮುಸ್ಲಿಂ ಗಲಭೆಯಲ್ಲಿ ಹಲವಾರು ಮುಸಲ್ಮಾನ ಕುಟುಂಬಗಳು ಸ್ಥಳಾಂತರಗೊಂಡವು. 2016 ರಲ್ಲಿ ಶಾಮ್ಲಿ ಜಿಲ್ಲೆಯ ಕೈರಾನ ಬ್ಲಾಕ್ ನಲ್ಲಿ ಹಿಂದೂಗಳಿಗೆ ಅಪಾಯ ಇದೆ ಎಂದು ಹಲವಾರು ಹಿಂದು ಕುಟುಂಬಗಳು ಸ್ಥಳಾಂತರಗೊಂಡವು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದಿನ ಎಸ್ ಪಿ ಸರ್ಕಾರದಲ್ಲಿ ಎಲ್ಲಾ ಸಮುದಾಯದ ಯುವಕರಿಗೆ ಉದ್ಯೋಗ ಸಿಗಲಿಲ್ಲ. ಕೇವಲ ನಿರ್ಧಿಷ್ಟ ಸಮುದಾಯದವರಿಗೆ ಉದ್ಯೋಗಗಳು ದೊರೆತಿದೆ. ನಮ್ಮ ಸರ್ಕಾರದಲ್ಲಿ ಎಲ್ಲಾ ವರ್ಗದವರಿಗೂ ಉದ್ಯೋಗ ಸಿಗುವಂತೆ ನಿಯಮಗಳನ್ನು ರೂಪಿಸಿದ್ದೇವೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *