ಜನ ಈಗ ಸಾಹುಕಾರರಾಗಿದ್ದಾರೆ, ಹೀಗಾಗಿ ಅನ್ನದ ಬೆಲೆ ಗೊತ್ತಿಲ್ಲ: ಸಿದ್ದಗಂಗಾ ಮಠದ ವಿದ್ಯಾರ್ಥಿ

Public TV
2 Min Read

ತುಮಕೂರು: ಭಕ್ತರೊಬ್ಬರು ಅನ್ನ ಚೆಲ್ಲಲು ಮುಂದಾದಾಗ ಸಿದ್ದಗಂಗಾ ಮಠದ ಬಾಲಕ ಅವರಿಗೆ ಅನ್ನದ ಮಹತ್ವವನ್ನು ತಿಳಿಸಿದ ವಿಡಿಯೋ ವೈರಲ್ ಆಗಿದೆ. ಈ ವಿಚಾರದ ಬಗ್ಗೆ 8ನೇ ತರಗತಿ ವಿದ್ಯಾರ್ಥಿ ಶಿವು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿ ಜನ ಈಗ ದುಡಿದು ಸಾಹಕಾರರಾಗಿದ್ದಾರೆ. ಹೀಗಾಗಿ ಅನ್ನದ ಬೆಲೆ ಗೊತ್ತಿಲ್ಲ ಎಂದು ತಿಳಿಸಿದ್ದಾನೆ.

ಶಿವಕುಮಾರ ಸ್ವಾಮೀಜಿಯವರು ಶಿವೈಕ್ಯರಾದ ಬಳಿಕ ಸಿದ್ದಗಂಗಾ ಮಠಕ್ಕೆ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ದಾಸೋಹ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯಲು ಮಠದ ಸಿಬ್ಬಂದಿಯ ಜೊತೆ ಮಕ್ಕಳು ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದರು.

ಈ ಸಂದರ್ಭದಲ್ಲಿ ಭಕ್ತರ ಜೊತೆಗಿನ ತನ್ನ ಸಂಭಾಷಣೆಯ ವಿಡಿಯೋ ವೈರಲ್ ಆಗಿದ್ದಕ್ಕೆ ಪ್ರತಿಕ್ರಿಯಿಸಿದ ಶಿವು, ಶ್ರೀಗಳ ಅಂತಿಮ ದರ್ಶನಕ್ಕೆ ಬಂದ ಭಕ್ತರು ಮಂಗಳವಾರ ಎಂಟು ಗಂಟೆಯಿಂದ ಅನ್ನವನ್ನು ವ್ಯರ್ಥ ಮಾಡುತ್ತಿದ್ದರು. ಈ ವಿಚಾರ ಮಠದವರಿಗೆ ಗೊತ್ತಾಗಿ ಯಾರೂ ಊಟವನ್ನು ವ್ಯರ್ಥ ಮಾಡದಂತೆ ನೋಡಿಕೋ ಎಂದು ನನ್ನಲ್ಲಿ ಹೇಳಿದರು. ಈ ಸಮಯದಲ್ಲಿ ಭಕ್ತರೊಬ್ಬರು ಸಾಂಬರ್ ಇಲ್ಲ ಎಂದು ಹೇಳಿ ಅನ್ನ ಚೆಲ್ಲಲು ಬಂದಾಗ ನಾನು ಅನ್ನವನ್ನು ವ್ಯರ್ಥಮಾಡಬೇಡಿ ಎಂದು ಹೇಳಿದೆ ಎಂದು ಘಟನೆಯನ್ನು ವಿವರಿಸಿದ್ದಾನೆ.

ಮಂಗಳವಾರ ಬಹಳಷ್ಟು ಭಕ್ತರು ಜಾಸ್ತಿ ಅನ್ನ ಬೇಕು ಎಂದು ಹಾಕಿಸಿಕೊಂಡು ಬಳಿಕ ಎಸೆಯುತ್ತಿದ್ದರು. ಅನ್ನವನ್ನು ಎಸೆಯುತ್ತಿದ್ದಾಗ ಎಷ್ಟು ಬೇಕೋ ಅಷ್ಟು ಅನ್ನವನ್ನು ಮಾತ್ರ ಹಾಕಬೇಕು ಎಂದು ಹೇಳುತ್ತಿದ್ದೆ. ಭಕ್ತರು ಎರಡನೇ ಸರಿ ಹೋದರೂ ಅವರಿಗೆ ಊಟ ಕೊಡುತ್ತಿದ್ದರು. ಆದರೆ ಕೆಲವರು ಮತ್ತೆ ಸಾಂಬರ್ ಹಾಕಿಸಿಕೊಳ್ಳಬೇಕೆಂದರೆ ಸರದಿಯಲ್ಲಿ ನಿಲ್ಲಬೇಕು. ಯಾರು ಸರದಿಯಲ್ಲಿ ನಿಲ್ಲುತ್ತಾರೆ ಎಂದು ಭಾವಿಸಿ ಅನ್ನವನ್ನು ಚೆಲ್ಲುತ್ತಿದ್ದರು. ಬಳಿಕ ನಾನೇ ಅವರ ತಟ್ಟೆಗೆ ಸಾಂಬಾರ್ ಹಾಕಿಸಿಕೊಡುತ್ತಿದ್ದೆ. ಕೆಲವರು ನನ್ನ ಜೊತೆ ಅನ್ನ ಸೇವಿಸಲು ಸಾಧ್ಯವಿಲ್ಲ ಎಂದು ವಾದಿಸುತ್ತಿದ್ದರು. ತಿನ್ನುವುದಕ್ಕೆ ಶಕ್ತಿ ಇಲ್ಲ ಎಂದು ಭಕ್ತರು ಹೇಳುತ್ತಿದ್ದರೂ ನಾನು ಎಸೆಯಲು ಬಿಡಲಿಲ್ಲ. ನೀವು ಅನ್ನ ತಿನ್ನುವವರೆಗೂ ನಾನು ತಟ್ಟೆಯನ್ನು ಎಸೆಯಲು ಬಿಡಲಿಲ್ಲ ಎಂದು ಭಕ್ತರಿಗೆ ಹೇಳುತ್ತಿದ್ದೆ ಎಂದು ಶಿವು ಆ ಸಂದರ್ಭವನ್ನು ವಿವರಿಸಿದ್ದಾನೆ.


ನಗರಗಳಲ್ಲಿ ಹೆಚ್ಚು ಹಣ ನೀಡುವುದರಿಂದ ಜನ ಈಗ ಸಾಹುಕಾರರಾಗಿದ್ದಾರೆ. ಹಾಗಾಗಿ ಜನರಿಗೆ ಅನ್ನದ ಬೆಲೆ ಗೊತ್ತಿಲ್ಲ. ಜನಗಳು ಈಗ ನೀರು ಇಲ್ಲ ಎಂದು ಪರದಾಡುತ್ತಾರೆ. ಮುಂದೆ ಅನ್ನಕ್ಕಾಗಿಯೂ ಪರದಾಡಬಹುದು. ಈ ಹಿಂದೆ ಅನ್ನಕ್ಕಾಗಿ ಕಷ್ಟಪಡುತ್ತಿದ್ದರು. ನನ್ನ ಅಣ್ಣ ಓದುತ್ತಿದ್ದ ಕಾಲದಲ್ಲಿ ಆತ ಕೇವಲ ಗಂಜಿ ಕುಡಿದು ಶಾಲೆಗೆ ಹೋಗುತ್ತಿದ್ದ. ನಾವು ಶ್ರವಣಬೆಳಗೊಳಕ್ಕೆ ಹೋದಾಗ ನಮ್ಮ ಸರ್ ಅನ್ನವನ್ನು ವ್ಯರ್ಥ ಮಾಡಬಾರದು ಎಂದು ತಿಳಿಸಿದ್ದರು ಎಂದು ಗುರುಗಳು ಹೇಳಿಕೊಟ್ಟ ಪಾಠದ ವಿಚಾರವನ್ನು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡುವಾಗ ಶಿವು ತಿಳಿಸಿದ್ದಾನೆ.

https://www.youtube.com/watch?v=5hHFioXJN0M

https://www.youtube.com/watch?v=5uh3fpEysn8

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *