ಬಾಬ್ರಿ ಮಸೀದಿ ಗುಂಬಜ್ ಉರುಳಿಸಿದವನ ಕಪಾಳಕ್ಕೆ ಬಾರಿಸಿದ್ದೆ: ಪೇಜಾವರ ಶ್ರೀ

Public TV
2 Min Read

– ರಾಮಮಂದಿರಕ್ಕೆ ದೇಶದಲ್ಲಿ ಸಾರ್ವತ್ರಿಕ ಮತಗಣನೆಯಾಗಲಿ

ಉಡುಪಿ: ಬಾಬ್ರಿ ಮಸೀದಿಯ ಮೊದಲ ಗುಂಬಜ್ ಕೆಡವಿದವನ ಕಪಾಳಕ್ಕೆ ನಾನು ಬಾರಿಸಿದ್ದೆ. ಮಸೀದಿ ಕೆಡವುದರ ಬಗ್ಗೆ ಯಾವುದೇ ಪೂರ್ವ ಸೂಚನೆ ಅಂದು ಇರಲಿಲ್ಲ ಎಂದು ಉಡುಪಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹಳೆ ನೆನಪನ್ನು ಕೆದಕಿದ್ದಾರೆ.

ಪಬ್ಲಿಕ್ ಟಿವಿ ಜಿತೆ ಮಾತನಾಡಿದ ಪೇಜಾವರ ಶ್ರೀಗಳು, ಮಸೀದಿ ಧ್ವಂಸದಲ್ಲಿ ನನ್ನ ಪಾತ್ರ ಇಲ್ಲ. ಹೋಮದ ಮುಂದೆ ನಾನು ಜಪಮಾಡುತ್ತಾ ಕುಳಿತ್ತಿದ್ದಾಗ ಗುಂಬಜ್ ಮೇಲೆ ಏಕಾಏಕಿ ಕಲ್ಲುಗಳು ಬಿದ್ದವು. ಪೂಜೆ ಬಿಟ್ಟು ಮಸೀದಿಯೊಳಗೆ ನಾನು ಓಡಿಹೋದಾಗ ಯುವಕರ ಗುಂಪು ಕೇಕೆ ಹಾಕುತ್ತಾ ಸಂಭ್ರಮದಲ್ಲಿತ್ತು. ಕಟ್ಟಡ ಕೆಡವಿದ ಕರಸೇವಕನ ಕಪಾಳಕ್ಕೆ ನಾನು ಬಾರಿಸಿದ್ದೆ. ಕೆನ್ನೆಗೆ ಬಾರಿಸಿ ಅಲ್ಲೇ ಬೈದಿದ್ದೇನೆ. ನಾನು ಮಸೀದಿ ಧ್ವಂಸ ಮಾಡಿಲ್ಲ, ಕೆಡವಲು ಪ್ರಚೋದನೆ ಕೊಟ್ಟಿಲ್ಲ. ನನ್ನ ಮೇಲೆ ಸುಮ್ಮನೆ ಆರೋಪ ಮಾಡಬೇಡಿ. ಎಲ್ಲರೂ ಈ ಬಗ್ಗೆ ತಿಳಿಯದೆ ಮಾತನಾಡುತ್ತಿದ್ದಾರೆ. ಸಂತರು, ಆ ಕಾಲದ ರಾಜಕಾರಣಿಗಳು, ಮಾಧ್ಯಮಗಳನ್ನು ಕೇಳಿ ಸತ್ಯ ತಿಳಿದುಕೊಳ್ಳಿ ಎಂದು ಹೇಳಿದರು.

ಕಾನೂನು ಸುವ್ಯವಸ್ಥೆ ಕಾಪಾಡುವ ಸವಾಲು ಇಟ್ಟುಕೊಂಡೇ ಕೇಂದ್ರ ಸರ್ಕಾರ ರಾಮ ಮಂದಿರ ನಿರ್ಮಾಣ ಕುರಿತಾಗಿ ಸಾರ್ವತ್ರಿಕ ಮತಗಣನೆ ಮಾಡಲಿ. ಚುನಾವಣೆ ಬಂದಾಗಲೇ ರಾಮಮಂದಿರ ಹೋರಾಟ ಮಾಡಬೇಕು. ಬಿಜೆಪಿಯವರು ಮಂದಿರ ಘೋಷಣೆ ಮಾಡುತ್ತಾ ಅಧಿಕಾರಕ್ಕೆ ಬಂದರು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷ ಆದರೂ ರಾಮಮಂದಿರ ನಿರ್ಮಾಣವಾಗಿಲ್ಲ ಎಂದು ಪೇಜಾವರ ಶ್ರೀಗಳು ಟೀಕಿಸಿದರು.

ದೇಶದ ಜನಾಪೇಕ್ಷೆಗೆ ಸರ್ಕಾರದಲ್ಲಿ ಬೆಲೆ ಇಲ್ಲವೇ ಎಂದ ಶ್ರೀಗಳು ಕೇಂದ್ರ ಸರ್ಕಾರ ಒಂದೋ ಸುಗ್ರೀವಾಜ್ಞೆ ಹೊರಡಿಸಲಿ. ಇಲ್ಲವೇ ದೇಶಾದ್ಯಂತ ಸಾರ್ವತ್ರಿಕ ಮತಗಣನೆ ನಡೆಸಲಿ. ರೆಫರೆಂಡಮ್ ಮಾಡಲು ಬಹಳ ಖರ್ಚು ತಗಲಬಹುದು, ಶಾಂತಿ ಸುವ್ಯವಸ್ಥೆ ಕಾಪಾಡುವುದು ಸವಾಲಿನ ವಿಚಾರವಾಗಬಹುದು. ಆದ್ರೆ ಮಂದಿರ ನಿರ್ಮಾಣ ಆಗಲೇಬೇಕು ಎಂದು ಒತ್ತಾಯಿಸಿದರು.

ಜನಾಗ್ರಹ ಸಭೆಯಲ್ಲಿ ಮುಸಲ್ಮಾನ ಸಮುದಾಯವನ್ನು ಬೈಯ್ಯಬಾರದು. ನಾನು ಭಾಗಿಯಾದ ವೇದಿಕೆಯಲ್ಲಿ ಮುಸಲ್ಮಾನರನ್ನು ಟೀಕಿಸದಂತೆ ನೋಡಿಕೊಂಡಿದ್ದೇನೆ. ವಿಶ್ವಹಿಂದೂ ಪರಿಷದ್, ಬಜರಂಗದಳ ಕಾರ್ಯಕರ್ತರು, ನಾಯಕರು ವಿವಾದ ಶುರುಮಾಡುವ, ಇನ್ನೊಬ್ಬರ ಮನಸ್ಸಿಗೆ ನೋಯಿಸುವಂತಹ ಮಾತುಗಳನ್ನು ಆಡಬಾರದು ಎಂದು ವಿನಂತಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *