ರಾಮನ ಕಾರ್ಯ ಆಗದೇ ನಮಗೆ ವಿರಾಮ ಇಲ್ಲ, ಆರಾಮವಿಲ್ಲ- ಪೇಜಾವರ ಶ್ರೀ

Public TV
1 Min Read

– ನಾನು ಬದುಕಿರುವಾಗಲೇ ರಾಮ ಮಂದಿರ ನಿರ್ಮಾಣವಾಗಬೇಕು

ಬೆಂಗಳೂರು: ಅಯೋಧ್ಯೆಯಲ್ಲಿ ರಾಮನ ಕಾರ್ಯ ಆಗದೇ ನಮಗೆ ವಿರಾಮ ಇಲ್ಲ, ಆರಾಮವಿಲ್ಲ ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳು ಹೇಳಿದ್ದಾರೆ.

ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಪೇಜಾವರ ಶ್ರೀಗಳು, ನನಗೆ 80 ವರ್ಷವಾಗಿದೆ. ಇನ್ನು ಎಷ್ಟುದಿನ ಬದುಕಿರುತ್ತೇನೆ ಎನ್ನುವುದು ಗೊತ್ತಿಲ್ಲ. ನಾನು ಬದುಕಿರುವಾಗಲೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗತ್ತೋ ಇಲ್ಲವೋ ಎನ್ನುವ ಆತಂಕ ಕಾಡುತ್ತಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಸಂತರ ಸಮಿತಿಯನ್ನು ಭೇಟಿ ಮಾಡಬೇಕು. ಇದಕ್ಕೆ ಒಪ್ಪದಿದ್ದರೆ ಸಂತರು ಉಪವಾಸ ಧರಣಿಗೂ ಸಿದ್ಧರಾಗಬೇಕು ಎಂದು ಕರೆಕೊಟ್ಟ ಶ್ರೀಗಳು, ನಾವು ಕೋಮುವಾದಿಗಳು ಎಂದು ಕೆಲವರು ದೂರುತ್ತಿದ್ದಾರೆ. ರಾಮ ಮಂದಿರ ಕೇಳುವವರು ಕೋಮುವಾದಿಗಳಲ್ಲ ಪ್ರೇಮವಾದಿಗಳು ಎಂದರು.

ರಾಮನ ಹೆಸರಲ್ಲಿ ಸ್ಫೂರ್ತಿ, ಚೈತನ್ಯ ಅಡಗಿದೆ. ಅಹಲ್ಯೆ ಕಲ್ಲಾಗಿದ್ದಂತೆ ನಮ್ಮ ಭಾರತೀಯರೂ ಜಡವಾಗಿದ್ದರು. ಈಗ ರಾಮ ಮಂದಿರ ನಿರ್ಮಾಣ ವಿಚಾರ ಭಾರತೀಯರಲ್ಲಿ ಚೈತನ್ಯ ತುಂಬಿದೆ. ರಾಮ ಮಂದಿರಕ್ಕೆ ವಿವಾದ ಇತ್ಯರ್ಥಕ್ಕೆ ಆದ್ಯತೆಯಿಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿದ್ದು ನನಗೆ ನೋವು ತಂದಿತ್ತು. ಇದು ಹಿಂದೂಗಳಿಗೆ ಮಾಡಿದ ಅವಮಾನ. ನಮ್ಮ ನ್ಯಾಯಾಲಯಗಳಲ್ಲಿ ಪರಿವರ್ತನೆ ಆಗುವ ಅಗತ್ಯ ಇದೆ. ನ್ಯಾಯದಾನದಲ್ಲಿ ವಿಳಂಬವಾಗಬಾರದು ಎಂದು ಗುಡುಗಿದರು.

ರಾಮಮಂದಿರ ಸ್ವಾಭಿಮಾನ, ಗೌರವದ ಸಂಕೇತ. ನಾನು ಯಾವುದೇ ರಾಜಕೀಯ ಪಕ್ಷದ ಪರವಾಗಿಲ್ಲ. ನನಗೆ ರಾಜಕೀಯ ದೂರದ ವಿಚಾರ. ಸಂತರು ರಾಜಕೀಯದಿಂದ ಹೊರಗೆ ಇರುತ್ತಾರೆ. ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಮರು, ಕ್ರೈಸ್ತರು ಎಲ್ಲರೂ ಬೆಂಬಲ ಕೊಡಬೇಕು. ಮುಸ್ಲಿಮರಿಗೆ ಇದು ದೊಡ್ಡ ಅವಕಾಶ. ನಮಾಜಿಗೆ ಮಸೀದಿಯೇ ಬೇಕು ಅಂತ ಇಲ್ಲ. ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಮರು ಬೆಂಬಲಿಸಿದರೆ ದೇಶದಲ್ಲಿ ಸಾಮರಸ್ಯ ಬೆಳೆಯುತ್ತದೆ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *