ವಿವಾದಿತ ಟಿಪ್ಪು ಜಯಂತಿ ಆಚರಿಸ್ತಾರೆ, ಸಾವರ್ಕರ್ ಬಗ್ಗೆ ಕೆಟ್ಟದಾಗಿ ಮಾತಾಡ್ತಾರೆ- ಪೇಜಾವರ ಶ್ರೀ

Public TV
2 Min Read

– ಯತ್ನಾಳ್ ತಪ್ಪು ಮಾಡಿಲ್ಲ, ಕ್ರಮ ಕೈಗೊಳ್ಳಬೇಕಿಲ್ಲ

ಬಾಗಲಕೋಟೆ: ವಿವಾದಿತ ಟಿಪ್ಪು ಜಯಂತಿಯನ್ನು ಆಚರಿಸುತ್ತಾರೆ, ವಿವಾದ ಇಲ್ಲದ ಸಾವರ್ಕರ್ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಇದು ಸರಿಯಲ್ಲ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಾದಿತ ಕೆಲಸ ಮಾಡಿದ ಟಿಪ್ಪುಗೆ ಇವರು ಗೌರವ ಕೊಡುತ್ತಾರೆ, ಜಯಂತಿ ಮಾಡುತ್ತಾರೆ. ಆದರೆ ಕೊಡಗು, ಕೇರಳದವರು ಟಿಪ್ಪು ಬಗ್ಗೆ ಭಾರಿ ಅಸಮಧಾನ ಹೊಂದಿದ್ದಾರೆ. ಹೀಗಿದ್ದರೂ ಅವರ ಜಯಂತಿ ಆಚರಿಸುತ್ತಾರೆ. ವಿವಾದ ಇಲ್ಲದ ವ್ಯಕ್ತಿ ಸಾವರ್ಕರ್ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಈ ರೀತಿ ಮಾಡುವುದು ಸರಿಯಲ್ಲ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರು ಅವರಿಗೆ ಗೌರವ ಕೊಡಬೇಕು ಎಂದರು.

ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಸಂಚು ಇತ್ತು ಎನ್ನುವ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ ಅವರು, ಈ ಕುರಿತು ಕೋರ್ಟ್ ತೀರ್ಪು ಕೊಟ್ಟಿದೆ. ಹತ್ಯೆಯಲ್ಲಿ ಸಾವರ್ಕರ್ ಕೈವಾಡ ಇಲ್ಲ ಎಂದು ಹೇಳಿದೆ. ಅಲ್ಲದೆ ಆರ್‍ಎಸ್‍ಎಸ್‍ಗೂ ಗಾಂಧಿ ಹತ್ಯೆಗೂ ಸಂಬಂಧ ಇಲ್ಲ ಎಂದು ತೀರ್ಪು ಬಂದಿದೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ರಾಜಕೀಯ ಮಾಡುತ್ತಿದ್ದಾರೆ ಎಂದರು.

ಸಾವರ್ಕರ್ ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ, ಅವರು ತುಂಬಾ ಸಾಹಸ ಮಾಡಿದ್ದಾರೆ. ಬ್ರಿಟಿಷರು ಬಂಧಿಸಿದಾಗ ಸಮುದ್ರಕ್ಕೆ ಹಾರಿ ತಪ್ಪಿಸಿಕೊಂಡು ಸಾಹಸ ಮಾಡಿ ಬಂದವರು. ಅವರಿಗೆ ಸರಿಯಾದ ಗೌರವ ಕೊಡಬೇಕು. ದೇಶಭಕ್ತರ ಬಗ್ಗೆ ಕೆಟ್ಟಮಾತು ಸಲ್ಲದು. ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಪಾತ್ರ ಇದ್ದಿದ್ದರೆ ಶಿಕ್ಷೆ ಆಗಬೇಕಿತ್ತು. ನಿರಪರಾಧಿ ಎಂದು ತೀರ್ಪು ಬಂದ ಮೇಲೆ ಹೀಗೆಲ್ಲ ಹೇಳುವುದು ತಪ್ಪು ಎಂದು ವಿವರಿಸಿದರು.

ನೆರೆ ಪರಿಹಾರಕ್ಕೆ ಬೇಗ ಪರಿಹಾರ ದೊರೆಯಲಿ ಎಂದು ಮಾತನಾಡಿದ್ದಾರೆ. ಅವರು ತಪ್ಪು ಮಾಡಿಲ್ಲ, ಬಿಜೆಪಿಯವರು ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ಅವರು ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಪೇಜಾವರ ಶ್ರೀಗಳು ಇದೇ ವೇಳೆ ಸೂಚಿಸಿದ್ದಾರೆ.

ಯತ್ನಾಳರು ತಪ್ಪು ಮಾಡಿಲ್ಲ, ಅವರ ವಿರುದ್ಧ ಯಾವುದೇ ಕ್ರಮ ಬೇಡ, ಯಾವುದೇ ಕೆಟ್ಟ ಉದ್ದೇಶದಿಂದ ಹೇಳಿಲ್ಲ. ಹಣ ಬಂದಿಲ್ಲ ಅಂತ ಕಳಕಳಿಯಿಂದ ಹೇಳಿದ್ದಾರೆ. ಹೀಗಾಗಿ ಯತ್ನಾಳ್ ವಿರುದ್ಧ ಯಾವುದೇ ಕ್ರಮ ಬೇಡ ಎಂದು ಸ್ವಾಮೀಜಿ ಬಿಜೆಪಿ ಮುಖಂಡರಿಗೆ ಸೂಚನೆ ನೀಡಿದ್ದಾರೆ.

ಇಡೀ ಕರ್ನಾಟಕ ಒಂದಾಗಬೇಕು, ವೀರಶೈವ ಬೇರೆ ಲಿಂಗಾಯತ ಬೇರೆ ಅಲ್ಲ ಎಲ್ಲರೂ ಒಂದಾಗಬೇಕು. ಪ್ರತ್ಯೇಕತೆ ಬರಬಾರದು ದಲಿತರು, ಬ್ರಾಹ್ಮಣರು, ಲಿಂಗಾಯತರು ಒಂದಾಗಬೇಕು. ಎಡಗೈ ಬಲಗೈ ಎಲ್ಲರೂ ಒಂದಾಗಬೇಕು. ಕರ್ನಾಟಕ ಅಖಂಡವಾಗಿರಬೇಕು ಎಂದರು.

Share This Article
Leave a Comment

Leave a Reply

Your email address will not be published. Required fields are marked *