ಹೇಳಿಕೆ ಕೊಟ್ಟ ತಕ್ಷಣ ದೇಶದ್ರೋಹಿ ಆಗಲ್ಲ: ಸೂಲಿಬೆಲೆ ಪರ ನಿಂತ ಪೇಜಾವರ ಶ್ರೀಗಳು

Public TV
2 Min Read

ಬಾಗಲಕೋಟೆ: ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಯವರಿಗೆ ದೇಶದ್ರೋಹಿ ಎಂಬ ಕೇಂದ್ರ ಸಚಿವ ಸದಾನಂದ ಗೌಡ ಹೇಳಿಕೆಗೆ ಪೇಜಾವರ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ. ಹೇಳಿಕೆ ಕೊಟ್ಟ ತಕ್ಷಣ ದೇಶದ್ರೋಹಿ ಆಗಲು ಸಾಧ್ಯವಿಲ್ಲ ಎಂದು ಸೂಲಿಬೆಲೆ ಪರವಾಗಿ ಸ್ವಾಮೀಜಿ ಬ್ಯಾಟಿಂಗ್ ಮಾಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸೂಲಿಬೆಲೆ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಯುವಕರನ್ನು ಸೇರಿಸಿ ಉತ್ತಮ ಸಂಘಟನೆ ಮಾಡುತ್ತಿದ್ದಾರೆ. ಸದಾನಂದಗೌಡರು ಕೂಡ ಕೇಂದ್ರ ಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸದಾನಂದಗೌಡರು ವೈಯಕ್ತಿಕವಾಗಿ ಹೆಸರು ಹೇಳಿ ಹಾಗೆ ಮಾತಾಡಿಲ್ಲ. ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ ಹೇಳಿಕೆ ಕೊಟ್ಟ ತಕ್ಷಣ ದೇಶದ್ರೋಹಿ ಆಗಲು ಸಾಧ್ಯವಿಲ್ಲ ಎಂದು ಸೂಲಿಬೆಲೆಯವರ ಪರ ನಿಂತರು. ಇದನ್ನೂ ಓದಿ:ಟ್ವಿಟ್ಟರ್‌ನಲ್ಲಿ ಸೂಲಿಬೆಲೆಗೆ ಬ್ಲಾಕ್ ಭಾಗ್ಯ ಕಲ್ಪಿಸಿದ ಸದಾನಂದಗೌಡ

ಕರ್ನಾಟಕದ ನೆರೆ ಸಂತ್ರಸ್ತರಿಗೆ ಕೇಂದ್ರದಿಂದ ಇನ್ನೂ ಪರಿಹಾರದ ಹಣ ಬಾರದಿರುವುದಕ್ಕೆ ಶ್ರೀಗಳು ಆತಂಕ ವ್ಯಕ್ತಪಡಿಸಿದ್ದು, ದೇಶದಲ್ಲಿನ ಆರ್ಥಿಕ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಬಗ್ಗೆ ಪತ್ರ ಬರೆಯುವುದಾಗಿ ಶ್ರೀಗಳು ಹೇಳಿದ್ದಾರೆ. ಹಣ ಬಿಡುಗಡೆ ಆಗದಿರುವುದು ನಮಗೂ ಕೂಡ ಆತಂಕವಾಗಿದೆ. ಯಾಕೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ತಿಳಿದಿಲ್ಲ. ಕರ್ನಾಟಕದಲ್ಲಿ ಮಾತ್ರ ಅಲ್ಲ ಮಹಾರಾಷ್ಟ್ರ, ಗುಜರಾತ್, ಬಿಹಾರ ರಾಜ್ಯಗಳಿಗೂ ಪರಿಹಾರ ಕೊಟ್ಟಿಲ್ಲ. ಬಿಹಾರದಲ್ಲಿ ಕೇವಲ ವೀಕ್ಷಣೆ ಮಾಡಿದ್ದಾರೆ. ಎಲ್ಲಿಯೂ ಹಣ ಬಿಡುಗಡೆಯ ಘೋಷಣೆ ಮಾಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ:ಸೂಲಿಬೆಲೆ ದೇಶದ್ರೋಹಿನಾ? – ಡಿವಿಎಸ್ ಪರೋಕ್ಷ ಕಿಡಿ

ದೇಶದಲ್ಲಿ ಆರ್ಥಿಕ ಕೊರತೆ ಇರಬಹುದು ಆದ್ದರಿಂದ ಬಿಡುಗಡೆ ಮಾಡಿಲ್ಲ ಎಂದನಿಸುತ್ತೆ. ಪ್ರಧಾನಿ ಮೋದಿಯವರಿಗೆ ನಾನು ಒಂದು ಪತ್ರ ಸಿದ್ಧ ಮಾಡಿ ಬರೆದಿದ್ದೇನೆ. ಜನತೆ ನಿಮ್ಮ ಸಹಾಯವನ್ನು ನಿರೀಕ್ಷಿಸುತ್ತಿದ್ದಾರೆ, ದೇಶದ ಬಗ್ಗೆ ಉತ್ತಮ ಕಾರ್ಯ ಮಾಡುತ್ತಿದ್ದೀರಿ, ಒಳ್ಳೆಯ ಆಡಳಿತ ನಡೆಸುತ್ತಿದ್ದೀರಿ, ಹಾಗೆಯೇ ಪರಿಹಾರ ಕೂಡ ನೀಡಬೇಕೆಂದು ಪತ್ರ ಬರೆಯಲಿದ್ದೇನೆ ಎಂದರು. ಇದನ್ನೂ ಓದಿ:ಮೋದಿ ಅಮೆರಿಕಗೆ ಹೋದ್ರೆ ಇಲ್ಲಿ ಯಾರೂ ಊಟ, ತಿಂಡಿ ಮಾಡಲ್ವಾ – ಸಂಸದರಿಗೆ ಸೂಲಿಬೆಲೆ ಪ್ರಶ್ನೆ

ಹಾಗೆಯೇ ರಾಜ್ಯದ ಸಂಸದರು ಕೇಂದ್ರ ಸರ್ಕಾರದ ಮುಂದೆ ನೆರೆ ಪರಿಹಾರದ ಕುರಿತು ಮಾತನಾಡದೇ ಇರುವ ವಿಚಾರವಾಗಿ ಪ್ರತಿಕ್ರಿಯಿಸಿ, ಸಂಸದರು ಬಹಿರಂಗವಾಗಿ ಕೇಳಿಲ್ಲ ಆದರೆ ಅವರು ಪ್ರಧಾನಿ ಬಳಿ ಈ ಬಗ್ಗೆ ಪ್ರಸ್ತಾಪಿಸಿರಬಹುದು. ಅದು ಮಾಧ್ಯಮದಲ್ಲಿ ಪ್ರಸಾರವಾಗಿಲ್ಲವಷ್ಟೆ. ಕೇಳದೇ ಇರೋದಕ್ಕೆ ಸಾಧ್ಯವಿಲ್ಲ. ಕೇಳಳಿಲ್ಲ ಎಂದು ಸಂಸದರ ಮೇಲೆ ಆರೋಪ ಮಾಡಲ್ಲ. ದೇಶದಲ್ಲಿ ಅರ್ಥಿಕ ಸಂಕಷ್ಟ ಇದೆ, ಅದಕ್ಕೆ ಪರಿಹಾರ ಕೊಟ್ಟಿಲ್ಲ ಅನಿಸುತ್ತಿದೆ. ಆದರೆ ಯಾಕೆ ಕೊಟ್ಟಿಲ್ಲ ಅನ್ನೋವುದರ ಬಗ್ಗೆ ಸ್ಪಷ್ಟವಾಗಿ ಗೊತ್ತಿಲ್ಲ. ನಾನು ಬರೆದ ಪತ್ರದಲ್ಲಿ ನನ್ನ ಭಾವನೆಯನ್ನು ತಿಳಿಸಿದ್ದೇನೆ. ಆದಷ್ಟು ಬೇಗ ರಾಜ್ಯಕ್ಕೆ ಮೋದಿ ಅವರು ಪರಿಹಾರ ನೀಡುತ್ತಾರೆಂಬ ಭರವಸೆ ಇದೆ ಎಂದು ಶ್ರೀಗಳು ವಿಶ್ವಾಸ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *