ಉಡುಪಿ: ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಪಟ್ಟಂತೆ ಧಾರ್ಮಿಕ ಮುಖಂಡರ ಸಭೆ ಕರೆಯಲಿ. ಅದನ್ನ ಬಿಟ್ಟು ಜಾತ್ಯಾತೀತ ಸರ್ಕಾರಕ್ಕೆ ಈ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳುವ ಹಕ್ಕಿಲ್ಲ ಎಂದು ಪೇಜಾವರ ಶ್ರೀಗಳು ಅಭಿಪ್ರಾಯ ಪಟ್ಟಿದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಕೇರಳ ಸರ್ಕಾರ ಜನಮತಗಣತೆ ಮಾಡಬೇಕು. ಹಿಂದೂಗಳ ಅಭಿಪ್ರಾಯವನ್ನ ಪಡೆದುಕೊಳ್ಳಬೇಕು. ಅದಾಗದಿದ್ರೆ ಧಾರ್ಮಿಕ ಮುಖಂಡರ ಸಭೆ ಕರೆದು ಇತ್ಯರ್ಥ ಮಾಡಲಿ. ಅದನ್ನ ಬಿಟ್ಟು ಜಾತ್ಯಾತೀತ ಸರ್ಕಾರಕ್ಕೆ ದೇವರ ಮೇಲೆ ನಂಬಿಕೆ ಇಲ್ಲವೆಂದ ಮೇಲೆ ಅವರಿಗೆ ಈ ಕುರಿತು ನಿರ್ಧಾರ ತೆಗೆದುಕೊಳ್ಳಲು ಅದ್ಯಾವ ಹಕ್ಕಿದೆ ಎಂದು ಪ್ರಶ್ನಿಸಿದ್ದಾರೆ.
ಧಾರ್ಮಿಕವಾಗಿ ನಾನು ಹಲವಾರು ಪರಿವರ್ತನೆ ಮಾಡಿದ್ದೇನೆ. ಜೊತೆಗೆ ಹಲವಾರು ಸಂಪ್ರದಾಯವನ್ನು ಕೂಡ ಅನುಸರಿಸಿದ್ದೇನೆ. ಇದು ಸಂಪ್ರದಾಯ ಮತ್ತು ಶಾಸ್ತ್ರದ ತಿಕ್ಕಾಟ ಆಗಿರೋದ್ರಿಂದ ಜಾತ್ಯಾತೀತ ಸರ್ಕಾರ ಇದನ್ನ ತೀರ್ಮಾನ ಮಾಡಬಾರದು. ಧಾರ್ಮಿಕ ಮುಖಂಡರು ಹಾಗೂ ಹಿಂದೂ ಜನತೆ ಇದನ್ನ ತೀರ್ಮಾನ ಮಾಡಬೇಕು. ಮಹಿಳೆಯರು ಇದನ್ನ ಅವಮಾನ ಅಂತ ಭಾವಿಸಬಾರದು ಎಂದು ಪೇಜಾವರ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಐವರು ಅಯ್ಯಪ್ಪ ಮಾಲಾಧಾರಿಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ..!
ಜನಾಭಿಪ್ರಾಯಕ್ಕೆ ಮಣಿದು ಶ್ರೀ ರಾಮ ಸೀತೆಯನ್ನ ಕಾಡಿಗೆ ಕಳುಹಿಸಿದ ಅನ್ನೋದು ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖವಾಗಿದೆ. ಹಾಗೆಯೇ ಕೇರಳ ಸರ್ಕಾರ ತನ್ನ ಹಠವನ್ನ ಬಿಟ್ಟು ಇದನ್ನೂ ಕೂಡ ಜನಾಭಿಪ್ರಾಯಕ್ಕೆ ಬಿಡಬೇಕು ಎಂದರು. ಹಾಗೆಯೇ ತಲಾಖ್ ವಿಚಾರವನ್ನ ಪ್ರಸ್ತಾಪಿಸಿದ ಶ್ರೀಗಳು, ತಲಾಖ್ ವಿಚಾರವನ್ನು ಶಬರಿಮಲೆಗೆ ತಳಕು ಹಾಕುವ ಅಗತ್ಯ ಇಲ್ಲ. ತಲಾಖ್ ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆಗೆ ಸಮಾನ. ನಾನು ತಲಾಖ್ ವಿರುದ್ಧ ಕಾಯ್ದೆಗೆ ಬೆಂಬಲಿಸುತ್ತೇನೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv