ಉಡುಪಿಯಲ್ಲಿ ಶ್ರೀರಾಮಸೇನೆ ಪ್ರತಿಭಟನೆ: ಪರಧರ್ಮ ದ್ವೇಷದ ಪರಮಾವಧಿ ಎಂದ ಪೇಜಾವರ ಶ್ರೀ

Public TV
2 Min Read

ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠದಲ್ಲಿ ನಡೆದ ಇಫ್ತಾರ್ ಕೂಟ ಮತ್ತು ನಮಾಜ್ ಕಾರ್ಯಕ್ರಮವನ್ನು ಖಂಡಿಸಿ ಉಡುಪಿಯಲ್ಲಿ ಶ್ರೀರಾಮಸೇನೆ ಭಜನೆ- ಪೂಜೆ ಮಾಡಿ ಪ್ರತಿಭಟನೆ ನಡೆಸಿದೆ. ನಗರದ ಸರ್ವೀಸ್ ಬಸ್ ನಿಲ್ದಾಣ ಸಮೀಪದ ಕ್ಲಾಕ್ ಟವರ್ ಮುಂಭಾಗ ಈ ಪ್ರತಿಭಟನೆ ನಡೆಯಿತು.

ಶ್ರೀರಾಮಸೇನೆ ಸಂಘಟನೆಗೆ ಹಿಂದೂ ಜನಜಾಗೃತಿ ಸಮಿತಿ ಬೆಂಬಲಿಸಿತು. ಕ್ಲಾಕ್ ಟವರ್ ಮುಂಭಾಗ ಜಮಾಯಿಸಿದ ನೂರಾರು ಕಾರ್ಯಕರ್ತರು ಘಟನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ದೇವರ ನಾಮ ಮತ್ತು ಭಜನೆಗಳನ್ನು ಹಾಡುವ ಮೂಲಕ ಇಫ್ತಾರ್ ಕೂಟ ಮತ್ತು ನಮಾಜ್ ಪ್ರಕ್ರಿಯೆಯನ್ನು ತೀವ್ರವಾಗಿ ಖಂಡಿಸಿದರು.

ಈ ಸಂದರ್ಭ ಮಾತನಾಡಿದ ಶ್ರೀರಾಮ ಸೇನೆಯ ಮಂಗಳೂರು ಪ್ರಾಂತ್ಯ ಪ್ರಮುಖ್, ಇಫ್ತಾರ್ ಕೂಟಕ್ಕೆ ನಮ್ಮ ವಿರೋಧವಿಲ್ಲ. ಮುಂದೆ ನಮಾಜ್ ಮಠದ ವ್ಯಾಪ್ತಿಯಲ್ಲಿ ನಡೆಯಬಾರದು. ಪೇಜಾವರ ಶ್ರೀಗಳು ನಮ್ಮ ಅತ್ಯುನ್ನತ ಗುರುಗಳು. ಅವರಿಗೆ ಸಮಾನವಾದ ಗುರುಗಳು ಮತ್ತೊಬ್ಬರಿಲ್ಲ. ಆದ್ರೆ ನಮಾಜ್ ಮಾಡಿದ್ದು ಸರಿಯಲ್ಲ ಎಂದರು. ಮುಂದಿನ ಬಾರಿ ಬೇರೆ ಕಡೆಯಲ್ಲಿ ಇಫ್ತಾರ್ ಆಯೋಜಿಸಿ. ಆವಾಗ ಶ್ರೀರಾಮ ಸೇನೆ ಕೂಡಾ ಪಾಲ್ಗೊಳ್ಳುತ್ತದೆ ಎಂದು ಹೇಳಿದರು.

ಮಠದಲ್ಲಿ ನಡೆದ ಇಫ್ತಾರ್‍ಗೆ ವಿರೋಧ ವ್ಯಕ್ತಪಡಿಸುತ್ತಿದ್ದೇವೆ. ನಮ್ಮ ಮನಸ್ಸಿಗೆ ಆದ ನೋವನ್ನು ಈ ಮೂಲಕ ತೋರ್ಪಡಿಸಿದ್ದೇವೆ. ಹಿಂದೂ ಸಮಾಜಕ್ಕಾದ ನೋವನ್ನು ಈ ರೀತಿಯಲ್ಲಿ ತೋಡಿಕೊಂಡಿದ್ದೇವೆ ಎಂದು ವಕ್ತಾರ ಜಯರಾಮ ಅಂಬೇಕಲ್ ಹೇಳಿದರು.

ಪರಧರ್ಮ ದ್ವೇಷದ ಪರಮಾವಧಿ: ಶ್ರೀರಾಮ ಸೇನೆಯ ಪ್ರತಿಭಟನೆಯ ವಿರುದ್ಧ ಗರಂ ಆಗಿ ಪೇಜಾವರ ಶ್ರೀ ಪ್ರತಿಕ್ರಿಯಿಸಿ, ಇದು ಪರಧರ್ಮ ದ್ವೇಷದ ಪರಮಾವಧಿ ಎಂದು ಚಾಟಿ ಬೀಸಿದರು. ಮುತಾಲಿಕ್ ನೀಡಿದ ಹಿಂಸಾತ್ಮಕ- ರಕ್ತಪಾತದ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡಲ್ಲ. ನನ್ನ ಧೋರಣೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಇಫ್ತಾರ್ ಮಾಡಿದ್ದರಿಂದ ಧರ್ಮಕ್ಕೆ ಏನು ನಷ್ಟವಾಯ್ತು, ಏನು ಹಾನಿಯಾಯ್ತು..? ಎಂದು ಪ್ರಶ್ನೆ ಹಾಕಿದ್ದಾರೆ. ಇದನ್ನೆಲ್ಲ ವಿರೋಧಿಸುವವರಿಗೆ ಶಾಸ್ತ್ರವೇ ಗೊತ್ತಿಲ್ಲ. ಪ್ರತಿಭಟನೆಗಳಿಂದ ನಾನು ವಿಚಲಿತನಾಗಿಲ್ಲ ಎಂದರು.

ಇದನ್ನೂ ಓದಿ: ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ ಉಡುಪಿ ಕೃಷ್ಣಮಠ- ಅನ್ನಬ್ರಹ್ಮ ಛತ್ರದಲ್ಲಿ ನಮಾಜ್

ಕೃಷ್ಣಮಠವನ್ನು ಶುದ್ಧೀಕರಿಸುವ ಪ್ರಶ್ನೆಯೇ ಇಲ್ಲ ಎಂದ ಪೇಜಾವರ, ದೇವರ ಪ್ರಾರ್ಥನೆ ಮಾಡಿದರೆ ಅದು ತಪ್ಪಾ..? ಅದಕ್ಕೆ ಶುದ್ಧ ಮಾಡಬೇಕಾ. ಧರ್ಮಶಾಸ್ತ್ರಗಳ ವಿರೋಧ ನಾನು ಮಾಡಿಲ್ಲ. ಮಠವನ್ನು ಶುದ್ಧ ಮಾಡಲು ಕಾರಣ ಬೇಕಲ್ಲ. ಹಿಂದೂ ಧರ್ಮದಲ್ಲಿ ದ್ವೈತ- ಅದ್ವೈತ- ವಿಶಿಷ್ಟಾದ್ವೈತದ ಸಹಬಾಳ್ವೆ ಇದ್ದಂತೆ, ಬೇರೆ ಧರ್ಮಗಳ ನಡುವೆ ಸಹಿಷ್ಣುತೆ ಇದ್ದರೇನು ತಪ್ಪು ಎಂದು ಪ್ರಶ್ನಸಿದ್ದಾರೆ. ಧೈರ್ಯ ಇದ್ದರೆ ನನ್ನಲ್ಲಿ ಈ ಬಗ್ಗೆ ಚರ್ಚೆ ಮಾಡಲು ಬನ್ನಿ ಎಂದು ಪೇಜಾವರಶ್ರೀ ಮುತಾಲಿಕ್ ಗೆ ಹಾಗೂ ಶ್ರೀರಾಮ ಸೇನೆಗೆ ಶ್ರೀಗಳು ಬಹಿರಂಗ ಸವಾಲು ಹಾಕಿದ್ದಾರೆ.

ಮುಸ್ಲಿಂ ಸಮುದಾಯದ ಮುಖಂಡ ರಹೀಂ ಉಚ್ಚಿಲ ಶ್ರೀಗಳ ಮಾತಿಗೆ ದನಿಗೂಡಿಸಿ, ರಕ್ತಪಾತ ಮಾಡುವುದಾದರೆ ಮೊದಲು ನಮ್ಮ ಮೇಲೆ ಮಾಡಲಿ. ನಾವು 2 ಸಾವಿರ ಮಂದಿ ಮುಸ್ಲಿಮರು ಮಠದ ಪರ ಇದ್ದೇವೆ. ವಿಶ್ವಮಟ್ಟದಲ್ಲಿ ಉಡುಪಿಗೆ ಪ್ರಖ್ಯಾತಿ ಇದೆ. ರಕ್ತಪಾತ ಎಂದು ಮುತಾಲಿಕ್ ಯಾರ ವಿರುದ್ಧ ಮಾತನಾಡುತ್ತಿದ್ದಾರೆ..? ಉಳ್ಳಾಲದ ದರ್ಗಾದ ಗರ್ಭಗುಡಿಯ ಒಳಗೆ ಬರುವಂತೆ ಪ್ರಮೋದ್ ಮುತಾಲಿಕ್‍ಗೆ ಸವಾಲು ಹಾಕಿದ್ರು.

Share This Article
Leave a Comment

Leave a Reply

Your email address will not be published. Required fields are marked *