ಕೋಳಿಗಳ ಜೊತೆ ನವಿಲ ಸ್ನೇಹ ಸಂಬಂಧ

Public TV
2 Min Read

-ಕೋಳಿಗಳ ಜೊತೆ ನವಿಲಿಗೂ ಪೋಷಕನಾದ ಯುವ ರೈತ

ಚಿಕ್ಕಬಳ್ಳಾಪುರ: ತೀವ್ರ ಬರದಿಂದ ಕಂಗೆಟ್ಟ ನವಿಲುಗಳು ಕಾಡಿನಲ್ಲಿ ಆಹಾರ ನೀರು ಸಿಗದೆ ಪರದಾಡುತ್ತಿದೆ. ಹೀಗೆ ಆಹಾರ ಅರಸಿ ಕಾಡಿನ ಸನಿಹದಲ್ಲಿದ್ದ ತೋಟವೊಂದರಲ್ಲಿ ನವಿಲೊಂದಕ್ಕೆ ಆಹಾರ ಸಿಕ್ಕ ಮೇಲೆ ಅಲ್ಲಯೇ ಠಿಕಾಣಿ ಹೂಡಿದೆ. ಅಲ್ಲದೆ ಕೋಳಿಗಳ ಜೊತೆ ನವಿಲ ಸ್ನೇಹ ಬಾಂಧವ್ಯಕ್ಕೆ ಎಲ್ಲರ ಮನ ಸೋತಿದೆ.

ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಾಳಪಲ್ಲಿ ಗ್ರಾಮದ ನಿವಾಸಿ ಗೌತಮ್ ಅವರ ತೋಟದಲ್ಲಿ ಕೋಳಿಗಳ ಹಿಂಡಿನ ಮಧ್ಯೆ ನವಿಲಿನ ವೈಯಾರದ ಚಿತ್ತಾರ ನೋಡಿಗರನ್ನು ಬೇರಗಾಸಿಸುತ್ತದೆ. ಹೊಟ್ಟೆ ಪಾಡಿಗೆ ನಾಟಿ ಕೋಳಿಗಳನ್ನು ಸಾಕಿಕೊಂಡು, ಗೌತಮ್ ತನ್ನ ತೋಟದಲ್ಲಿರುವ ಮಾವಿನ ಮರದ ಕೆಳಗೆ ಕೋಳಿಗಳಿಗೆ ಆಹಾರ ನೀರನ್ನು ಇಡುತ್ತಾರೆ. ಆದರೆ ಆಹಾರ ಅರಸಿ ಬರುವ ನವಿಲುಗಳು ತೋಟಕ್ಕೆ ಬಂದು ಕೊಳಿಗಳ ಆಹಾರ ತಿಂದು ಹೋಗುತ್ತವೆ. ಹೀಗೆ ಆಕಸ್ಮಿಕವಾಗಿ ಆಹಾರ ಅರಸಿ ಬಂದ ನವಿಲೊಂದು ಈಗ ಗೌತಮ್ ತೋಟದಲ್ಲಿಯೇ ಠಿಕಾಣಿ ಹೂಡಿದೆ.

ಇನ್ನೂ ಕೋಳಿಗಳ ಹಿಂಡಿನ ಮಧ್ಯೆ ಆಹಾರ ನೀರು ಸೇವಿಸುತ್ತಾ, ಗರಿಗೆದರಿ ನೃತ್ಯ ಮಾಡುವುದನ್ನ ನೋಡಿದರೆ ಕೋಳಿಗಳ ಹಿಂಡೇ ನಾಚುತ್ತಿವೆ. ಯುವ ರೈತನ ಕೊಳಿಗಳ ಜೊತೆ ಕಾಳು ತಿನ್ನುತ್ತಾ ಈ ನವಿಲು ಸ್ವಚ್ಚಂದವಾಗಿ ತನ್ನ ಪಾಡಿಗೆ ಯಾರ ಭಯಯೂ ಇಲ್ಲದೆ ಬದುಕು ನಡೆಸುತ್ತಿದೆ. ಕೋಳಿಗಳ ಮಧ್ಯೆ ಕಾಲಕಳೆದು ನವಿಲು ಹಾಗೂ ಕೋಳಿ ಮಧ್ಯೆ ಉತ್ತಮ ಸ್ನೇಹ ಬೆಳೆದಿದೆ.

ಗೌತಮ್ ಅವರ ತೋಟದ ಸುತ್ತಮುತ್ತ ಬೆಟ್ಟ ಗುಡ್ಡಗಳಿದ್ದು, ಮಳೆಯಿಲ್ಲದೆ ಕಾಡು ಪ್ರಾಣಿಗಳಿಗೆ ನೀರು ಸಿಗದೇ ಒದ್ದಾಡುತ್ತಿವೆ. ಇನ್ನೂ ನವಿಲುಗಳಂತೂ ನೆರಳಿಗೆ ರೈತನ ಮಾವಿನ ಮರಗಳನ್ನೆ ಆಸರೆ ಮಾಡಿಕೊಂಡು ಕೋಳಿಗಳಿಗೆ ಹಾಕೊ ಕಾಳು-ನೀರು ಸೇವಿಸಿಕೊಂಡು ಸ್ವಚ್ಚಂದವಾಗಿ ನರ್ತಿಸುತ್ತವೆ. ನವಿಲುಗಳ ನರಳಾಟ ನೋಡಿದ ಕೋಳಿಗಳು ಸಹ ಪುಣ್ಯಕೋಟಿ ಕಥೆಯಂತೆ ನವಿಲುಗಳನ್ನು ತಮ್ಮವರಂತೆ ನೋಡಿಕೊಳ್ಳುತ್ತಿವೆ ಎಂದು ಯುವ ರೈತ ತಿಳಿಸಿದ್ದಾರೆ.

ಮೊದಲೇ ತೀವ್ರ ಬರದಿಂದ ತತ್ತರಿಸಿರುವ ಕಾಡಿನ ಪ್ರಾಣಿಗಳು ಅದೆಲ್ಲಿ ಹೊದವೋ ಗೊತ್ತಿಲ್ಲ. ಆದರೆ ಅಳಿದುಳಿದ ನವಿಳುಗಳಂಥ ವೈಯಾರಿ ಪಕ್ಷಿಗಳು ಮಾತ್ರ ಅನಿವಾರ್ಯವಾಗಿ ಹೊಟ್ಟೆ ಪಾಡಿಗೆ ಕಾಡನಂಚಿನ ತೋಟಗಳಿಗೆ ಆಹಾರ ಅರಸಿ ಬರುತ್ತವೆ. ಅಲ್ಲದೆ ಗೌತಮ ಅವರ ತೋಟಕ್ಕೆ ಆಗಾಗ ಬರುವ ನವಿಲುಗಳು ಕೋಳಿಗಳ ಜೊತೆ ಹೊಂದಿಕೊಂಡು ಸ್ವಚ್ಚಂದವಾಗಿ ಬದುಕುತ್ತಿವೆ, ಇನ್ನೂ ತಮ್ಮ ಆಶ್ರಯ ಬಯಸಿ ಬಂದಿರುವ ನವಿಲುಗಳನ್ನು ಮುತುವರ್ಜಿಯಿಂದ ಯುವ ರೈತ ನೋಡಿಕೊಳ್ಳುತ್ತಿರುವುದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *