ಇಸ್ಲಾಮಾಬಾದ್: ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ಗೆ (T20World Cup Semifinals) ಅರ್ಹತೆ ಪಡೆಯಲು ವಿಫಲವಾದ ಹಿನ್ನೆಲೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (PCB) ತನ್ನ ಆಟಗಾರರಿಗೆ ದಂಡದ ಬಿಸಿ ಮುಟ್ಟಿಸಿದೆ. ಪ್ರತಿ ಆಟಗಾರರಿಗೂ ತಲಾ 50 ಲಕ್ಷ ಪಾಕಿಸ್ತಾನಿ ರೂಪಾಯಿ (ಭಾರತದ ಕರೆನ್ಸಿಯಲ್ಲಿ 16.28 ಲಕ್ಷ ರೂ.) ದಂಡ ವಿಧಿಸಿದೆ.
ಲೀಗ್ ಹಂತದಲ್ಲಿ ಟೀಂ ಇಂಡಿಯಾ (Team India) ವಿರುದ್ಧ ಸೋತಾಗಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಸೆಮಿ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾದ್ರೆ ದಂಡ ವಿಧಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿರ್ಧರಿಸಿತ್ತು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಸಂಜು ಬೆಂಕಿ ಆಟ, 5 ವಿಕೆಟ್‌ಗಳ ರೋಚಕ ಜಯ – ಸೆಮಿಗೆ ಟೀಂ ಇಂಡಿಯಾ
ಲೀಗ್ ಸುತ್ತಿನಲ್ಲಿ ಎ ಗುಂಪಿನಲ್ಲಿದ್ದ ಪಾಕಿಸ್ತಾನ ತಂಡ (Pakistan Cricket Team) 4 ರಲ್ಲಿ 3 ಪಂದ್ಯ ಗೆದ್ದು ಸೂಪರ್-8 ಪ್ರವೇಶಿಸಿತ್ತು. ಸೂಪರ್-8 ನಲ್ಲಿ ಕಿವೀಸ್ ವಿರುದ್ಧ ಪಂದ್ಯ ಮಳೆಗೆ ಬಲಿಯಾಗಿ 1 ಅಂಕ ಪಡೆದುಕೊಂಡಿತ್ತು. ಇಂಗ್ಲೆಂಡ್ ವಿರುದ್ಧ ಸೋತ ಪಾಕ್‌ಗೆ ಸೆಮಿಸ್ ಪ್ರವೇಶಿಸಲು ಲಂಕಾ ವಿರುದ್ಧ ದೊಡ್ಡ ಗೆಲುವಿನ ಅಗತ್ಯವಿತ್ತು. ಪಾಕ್ ಮೊದಲು ಬ್ಯಾಟ್ ಮಾಡಿದ್ರೆ 65 ರನ್‌ಗಳಿಂದ, ಚೇಸ್ ಮಾಡಿದ್ರೆ 13 ಓವರ್‌ಗಳಲ್ಲಿ ಗುರಿ ಪೂರೈಸಬೇಕಾದ ಅಗತ್ಯವಿತ್ತು. ಇದನ್ನೂ ಓದಿ: Explainer| ಭಾರತದಲ್ಲಿ ಮತ್ತೆ F1 ರೇಸ್? 3 ವರ್ಷ ನಡೆದ ಬಳಿಕ ಸ್ಥಗಿತಗೊಂಡಿದ್ದು ಯಾಕೆ?
ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 212 ರನ್ ಬಾರಿಸಿತ್ತು. ಸೆಮಿಸ್ ಪ್ರವೇಶಿಸಲು ಲಂಕಾ ತಂಡವನ್ನ 147 ರನ್‌ಗಳಿಗೆ ಕಟ್ಟಿಹಾಕಬೇಕಿತ್ತು. ಆದ್ರೆ ಲಂಕಾ ಕ್ಯಾಪ್ಟನ್ ದಸೂನ್ ಶನಾಕ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಪಂದ್ಯದ ಗತಿಯನ್ನೇ ಬದಲಿಸಿದ್ರು. ಆದ್ರೂ ಲಂಕಾ 5 ರನ್‌ಗಳ ವಿರೋಚಿತ ಸೋಲು ಕಂಡಿತು. ಇತ್ತ ನೆಟ್ ರನ್‌ರೇಟ್ ಕೊರತೆಯಿಂದ ಸೆಮಿಸ್‌ಗೆ ಅರ್ಹತೆ ಪಡೆಯುವಲ್ಲಿ ಪಾಕ್ ಕೂಡ ವಿಫಲವಾಯಿತು. ಆದ್ದರಿಂದ ರಾಷ್ಟ್ರೀಯ ತಂಡದ ಆಟಗಾರರಿಗೆ ಪಿಸಿಬಿ ದಂಡ ವಿಧಿಸಿದೆ.
ಮತ್ತೊಂದೆಡೆ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ತಂಡದ ಹೀನಾಯ ಪ್ರದರ್ಶನ ಕುರಿತು ಮಾಜಿ ಕ್ರಿಕೆಟ್ ಆಟಗಾರರು ಅಸಮಾಧಾನ ಹೊರಹಾಕಿದ್ದಾರೆ. ಐಸಿಸಿ ಇವೆಂಟ್‌ಗಳಲ್ಲಿ 2 ವರ್ಷಗಳಿಗೆ ಒಮ್ಮೆ ಅವಕಾಶ ಸಿಗುತ್ತೆ. ಆದ್ರೆ ಮತ್ತೆ ಮತ್ತೆ ನೀವು ವಿಫಲವಾಗ್ತಿದ್ದೀರಿ. ನಿಮ್ಮ ತಪ್ಪುಗಳಿಂದ ಕಲಿಯಲು ಇದು ಸಕಾಲ. ನೀವು ಟಾಪ್ ತಂಡಗಳನ್ನ ಸೋಲಿಸದ ಹೊರತು ಐಸಿಸಿ ಟೂರ್ನಿ ಗೆಲ್ಲಲು ಎಂದಿಗೂ ಸಾಧ್ಯವಾಗೋದಿಲ್ಲ ಎಂದು ಮಾಜಿ ಆಟಗಾರರಾದ ಜಾವೇದ್ ಮಿಯಾಂದಾದ್, ಮೊಹಮ್ಮದ್ ಯೂಸುಫ್, ಮೊಯಿನ್ ಖಾನ್ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಯುಪಿ ಸರ್ಕಾರದ ಜೊತೆ ಸಹಿ – 2027ಕ್ಕೆ ಭಾರತದಲ್ಲಿ MotoGP ರೇಸ್?



