‌ಪಾಕ್‌ ಮೈದಾನದಲ್ಲಿ ಫೀಲ್ಡಿಂಗ್‌ ವೇಳೆ ಹಣೆಗೆ ಬಡಿದ ಚೆಂಡು – ರಕ್ತ ಸೋರುತ್ತಲೇ ಹೊರನಡೆದ ರಚಿನ್‌ ರವೀಂದ್ರ

Public TV
2 Min Read

– ಚಾಂಪಿಯನ್ಸ್‌ ಟ್ರೋಫಿಗೆ ಗೈರು ಸಾಧ್ಯತೆ

ಲಾಹೋರ್‌: ಇದೇ ಫೆಬ್ರವರಿ 19ರಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೆಯಲಿರುವ ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಕಿವೀಸ್‌ ಸ್ಟಾರ್‌ ಆಟಗಾರ ಬೆಂಗಳೂರು ಮೂಲದ ರಚಿನ್‌ ರವೀಂದ್ರ (Rachin Ravindra) ಹಣೆಗೆ ಚೆಂಡು ಬಡಿದು ಗಾಯಗೊಂಡಿದ್ದಾರೆ. ಈ ಬೆನ್ನಲ್ಲೇ ಪಾಕಿಸ್ತಾನದ ಕ್ರಿಕೆಟ್‌ ಅಂಗಳದಲ್ಲಿ ಕ್ರಿಕೆಟ್‌ ಫ್ಲಡ್‌ ಲೈಟ್‌ (Floodlights) ವ್ಯವಸ್ಥೆ ಸರಿಯಾಗಿ ಕೆಲಸ ಮಾಡ್ತಿದೆಯೇ? ಎನ್ನುವ ಪ್ರಶ್ನೆಯೂ ಎದ್ದಿದೆ.

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ತನ್ನ ವ್ಯವಸ್ಥೆ ಎಲ್ಲವೂ ಸರಿಯಾಗಿದೆಯೆಂದು ಜಗತ್ತಿನೆದುರು ಖಾತ್ರಿ ಪಡಿಸಲು ನ್ಯೂಜಿಲೆಂಡ್ (New Zealand), ದಕ್ಷಿಣ ಆಫ್ರಿಕಾ ತಂಡದೊಂದಿಗೆ ತ್ರಿಕೋನ ಸರಣಿ ಏರ್ಪಡಿಸಿದೆ. ಪಾಕಿಸ್ತಾನದಲ್ಲಿ ಆಡುವುದಿಲ್ಲ ಎಂದು ಪಟ್ಟು ಹಿಡಿದು ತನ್ನ ಪಂದ್ಯಗಳನ್ನು ದುಬೈಗೆ ಸ್ಥಳಾಂತರ ಮಾಡಿಸಿಕೊಂಡ ಭಾರತಕ್ಕೆ ಛಾಟಿಯೇಟು ನೀಡುವ ಉದ್ದೇಶವೂ ಈ ಗಡಿಬಿಡಿಯ ಟೂರ್ನಿಯಲ್ಲಿ ಇತ್ತು ಎಂಬುದು ಸ್ಪಷ್ಟ. ಆದ್ರೆ ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ ಎನ್ನುವಾಗಲೇ ಆ ಘಟನೆ ನಡೆದು ಹೋಗಿದೆ. ಪಿಸಿಬಿ ಅರೆಬರೆ ಕಾರ್ಯಗಳ ಕಡೆಗೆ ಕೈ ತೋರಿಸುವಂತೆ ಆಗಿದೆ.

ಲಾಹೋರ್‌ ಮೈದಾನದಲ್ಲಿ ಆಗಿದ್ದೇನು?
ಪಾಕಿಸ್ತಾನದ ಇನ್ನಿಂಗ್ಸ್‌ನ 38ನೇ ಓವರ್ ನಲ್ಲಿ ರಚಿನ್ ರವೀಂದ್ರ ಅವರು ಸ್ಕ್ವೇರ್‌ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಈ ವೇಳೆ ಪಾಕಿಸ್ತಾನದ ಖುಷ್ದಿಲ್ ಶಾ ಹೊಡೆದ ಸ್ವೀಪ್ ಶಾಟ್ ನೇರವಾಗಿ ರಚಿನ್ ರವೀಂದ್ರ ಅವರ ಕಡೆಗೆ ಹೋಗಿತ್ತು. ಮಾಮಾಲಿ ಫೀಲ್ದರ್ ಅಲ್ಲಿದ್ದಿದ್ದರೂ ಕ್ಲೀಯರ್ ಕ್ಯಾಚ್ ಆಗುತ್ತಿತ್ತು. ಹಾಗೆಯೇ ಗುಡ್‌ ಫೀಲ್ಡರ್‌ ಕೂಡ ಆಗಿರುವ ರಚಿನ್‌ ಕ್ಯಾಚ್‌ ಕ್ಲಿಯರ್‌ ಮಾಡುತ್ತಾರೆ ಎಂಬ ವಿಶ್ವಾಸ ಕಿವೀಸ್‌ ಆಟಗಾರರಿಗೂ ಇತ್ತು. ಆದ್ರೆ ಅಲ್ಲಿ ಆಗಿದ್ದೇ ಬೇರೆ.

ಕ್ಯಾಚ್‌ ಅಗಿ ಕೈಸೇರಬೇಕಾದ ಚೆಂಡು ನೇರವಾಗಿ ಹೋಗಿ ರಚಿನ್ ರವೀಂದ್ರ ಅವರ ಹಣೆವಗೆ ಬಡಿಯಿತು. ಅವರಿಗೆ ಚೆಂಡು ಬಂದ ದಾರಿಯನ್ನು ಕೊಂಚವೂ ಅಂದಾಜಿಸಲು ಸಾಧ್ಯವಾಗಿಲ್ಲ. ಚೆಂಡು ಹಣೆಗೆ ಬಡಿಯುತ್ತಿದ್ದಂತೆ ಅಲ್ಲಿಯೇ ರಚಿನ್‌ ಕುಸಿದು ಬಿದ್ದಿದ್ದಾರೆ. ಏನಾಗುತ್ತಿದೆ ಎಂದು ಎಲ್ಲರೂ ಗಾಬರಿಯಾಗಬೇಕಾದರೆ ಅವರ ಮುಖದಿಂದ ರಕ್ತ ಸೋರುತ್ತಿತ್ತು. ತಕ್ಷಣವೇ ಮೈದಾನಕ್ಕೆ ಆಗಮಿಸಿದ ನ್ಯೂಜಿಲೆಂಡ್ ತಂಡದ ಫಿಸಿಯೋ ಮತ್ತು ಮೈದಾನದಲ್ಲಿದ್ದ ರಕ್ಷಣಾ ಸಿಬ್ಬಂದಿ ಅವರ ಮುಖವನ್ನು ಟವೆಲ್‌ನಿಂದ ಮುಚ್ಚಿಕೊಂಡು ಮೈದಾನದಿಂದ ಹೊರ ನಡೆದರು.

ರಚಿನ್ ರವೀಂದ್ರ ಅವರ ಹಣೆಯಿಂದ ರಕ್ತ ಸೋರುತ್ತಿದ್ದುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇದೀಗ ಅವರ ಗಾಯದ ಪ್ರಮಾಣ ಏನು ಎಂದು ತಿಳಿದು ಬಂದಿಲ್ಲ. ಗಾಯದ ತೀವ್ರತೆ ನೋಡಿದರೆ ಅವರು ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಡುವುದೂ ಅನುಮಾನ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನ್ಯೂಜಿಲೆಂಡ್ ತಂಡದ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಈವರೆಗೂ ಹೊರಬಿದ್ದಿಲ್ಲ.

ಪಾಕ್‌ ಕ್ರೀಡಾಂಗಣದ ವಿರುದ್ಧ ಟೀಕೆ:
ರಚಿನ್‌ ರವೀಂದ್ರರು ಗಾಯಗೊಳ್ಳಲು ಗಡಾಫಿ ಸ್ಟೇಡಿಯಂನಲ್ಲಿ ಅಳವಡಿಸಲಾದ ಕಳಪೆ ಗುಣಮಟ್ಟದ ಫ್ಲಡ್‌ ಲೈಟ್‌ ವ್ಯವಸ್ಥೆಯೇ ಕಾರಣ ಎಂಬ ಟೀಕೆಯೂ ವ್ಯಕ್ತವಾಗಿದೆ. ಲೈಟಿಂಗ್ಸ್‌ ಸಮಸ್ಯೆಯಿಂದಾಗಿಯೇ ಚೆಂಡನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಕೆಲವರು ಹೇಳಿದ್ದಾರೆ.

Share This Article