ಯಶಸ್ವಿ, ವೈಭವ್‌ ಹೋರಾಟ ವ್ಯರ್ಥ, ಪಂಜಾಬ್‌ಗೆ 10 ರನ್‌ ರೋಚಕ ಜಯ – ಪ್ಲೇ ಆಫ್‌ಗೆ ಇನ್ನೂ ಹತ್ತಿರ!

Public TV
2 Min Read

ಜೈಪುರ್‌: ಯಶಸ್ವಿ ಜೈಸ್ವಾಲ್‌, ವೈಭವ್‌ ಸೂರ್ಯವಂಶಿ ಅವರ ಸ್ಫೋಟಕ ಆರಂಭದ ಹೊರತಾಗಿಯೂ ರಾಜಸ್ಥಾನ್‌ ರಾಯಲ್ಸ್‌ 10 ರನ್‌ಗಳ ವಿರೋಚಿತ ಸೋಲು ಕಂಡಿದೆ. ರಾಜಸ್ಥಾನ್‌ ವಿರುದ್ಧ ಗೆದ್ದ ಪಂಜಾಬ್‌ 17 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿದಿದ್ದು, ಪ್ಲೇ ಆಫ್‌ಗೆ ಇನ್ನೂ ಹತ್ತಿರವಾಗಿದೆ.

ಅಂಕಪಟ್ಟಿಯಲ್ಲಿ 17 ಅಂಕ ಗಳಿಸಿರುವ ಆರ್‌ಸಿಬಿ +0.482 ನೆಟ್‌ ರನ್‌ರೇಟ್‌ನೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಪಂಜಾಬ್‌ ಕಿಂಗ್ಸ್‌ 17 ಅಂಕ ಗಳಿಸಿದ್ದರೂ +0.389 ನೆಟ್‌ರನ್‌ರೇಟ್‌ನೊಂದಿಗೆ 2ನೇ ಸ್ಥಾನ ಕಾಯ್ದುಕೊಂಡಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ 5 ವಿಕೆಟ್‌ ನಷ್ಟಕ್ಕೆ 219 ರನ್‌ ಗಳಿಸಿತ್ತು. 220 ರನ್‌ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್‌ ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 209 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಸ್ಫೋಟಕ ಅರ್ಧಶತಕ ಜೊತೆಯಾ:
ರಾಜಸ್ಥಾನ್‌ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ವೈಭವ್‌ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್‌ ಸ್ಪೋಟಕ ಪ್ರದರ್ಶನ ನೀಡಿದ್ದರು. ಮೊದಲ ಓವರ್‌ನಲ್ಲೇ ಯಶಸ್ವಿ 22 ರನ್‌ ಚಚ್ಚಿದ್ದರು. ಇನ್ನೂ ಮೊದಲ ವಿಕೆಟ್‌ಗೆ ಈ ಜೋಡಿ 29 ಎಸೆತಗಳಲ್ಲಿ ಸ್ಫೋಟಕ 76 ರನ್‌ ಜೊತೆಯಾಟ ನೀಡಿತ್ತು. ಈ ವೇಳೆ ವೈಭವ್‌ 15 ಎಸೆತಗಳಲ್ಲಿ 40 ರನ್‌ (4 ಸಿಕ್ಸರ್‌, 4 ಬೌಂಡರಿ) ಚಚ್ಚಿ ಔಟಾದರು. ಈ ಬೆನ್ನಲ್ಲೇ ಯಶಸ್ವಿ ಜೈಸ್ವಾಲ್‌ 25 ಎಸೆತಗಳಲ್ಲಿ 50 ರನ್‌ (1 ಸಿಕ್ಸರ್‌, 9 ಬೌಂಡರಿ) ಗಳಿಸಿ ಔಟಾದರು.

ಇವರಿಬ್ಬರ ವಿಕೆಟ್‌ ಬೀಳುತ್ತಿದ್ದಂತೆ ಒಂದೆಡೆ ರನ್‌ ವೇಗ ಕಡಿತಗೊಂಡರೆ ಮತ್ತೊಂದೆಡೆ ಪ್ರಮುಖ ವಿಕೆಟ್‌ ಬೀಳುತ್ತಾ ಸಾಗಿತು. ಮಧ್ಯಮ ಕ್ರಮಾಂಕದಲ್ಲಿ ಧ್ರುವ್‌ ಜುರೆಲ್‌ ಅವರ ಅರ್ಧಶತಕದ (53 ರನ್‌) ಹೋರಾಟ ವ್ಯರ್ಥವಾಯಿತು. ಅಂತಿಮವಾಗಿ ರಾಜಸ್ಥಾನ್‌ 7 ವಿಕೆಟ್‌ಗೆ 209 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ್ದ ಪಂಜಾಬ್‌ ಪರ ನೇಹಾಲ್‌ ವಧೇರಾ 70 ರನ್‌ (37 ಎಸೆತ, 5 ಸಿಕ್ಸರ್‌, 5 ಬೌಂಡರಿ), ಶಶಾಂಕ್‌ ಸಿಂಗ್‌ (30 ಎಸೆತ, 3 ಸಿಕ್ಸರ್‌, 5 ಬೌಂಡರಿ), ಶ್ರೇಯಸ್‌ ಅಯ್ಯರ್‌ 30 ರನ್‌, ಪ್ರಭ್‌ ಸಿಮ್ರನ್‌, ಒಮರ್ಝೈ ತಲಾ 21 ರನ್‌, ಪ್ರಿಯಾಂಶ್‌ ಆರ್ಯ 9 ರನ್‌ ಗಳಿಸಿದ್ರೆ ಮಿಚೆಲ್ ಓವನ್ ಶೂನ್ಯ ಸುತ್ತಿದರು.

Share This Article