4 ವರ್ಷಗಳ ನಂತರ ನನಗೆ ಐಪಿಎಲ್‍ನಲ್ಲಿ ಅವಕಾಶ ಸಿಕ್ಕಿದೆ: ರಿಷಿ ಧವನ್

By
3 Min Read

ಮುಂಬೈ: ಪಂಜಾಬ್ ಕಿಂಗ್ಸ್ ತಂಡದ ಆಲ್‍ರೌಂಡರ್ ರಿಷಿ ಧವನ್, ನಿನ್ನೆ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಮುಖ ಕವಚವನ್ನು ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಧವನ್ (32) ಅವರನ್ನು ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡವು ರೂ. 55 ಲಕ್ಷಕ್ಕೆ ಆಯ್ಕೆ ಮಾಡಿಕೊಂಡಿತ್ತು. ನಿನ್ನೆ ನಡೆದ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಅವರು ತಮ್ಮ ಎರಡನೇ ಓವರ್‍ನಲ್ಲಿ ಸಿಎಸ್‍ಕೆ ತಂಡದ ಪ್ರಮುಖ ಬ್ಯಾಟರ್ ಶಿವಂ ದುಬೆ ಅವರ (8) ವಿಕೆಟ್ ಕಿತ್ತು, ನಂತರ ಇನ್ನಿಂಗ್ಸ್‍ನ ಕೊನೆಯ ಓವರ್‍ನಲ್ಲಿ ಸಿಎಸ್‍ಕೆ ತಂಡದ ಮಾಜಿ ನಾಯಕ ಮಹೇಂದ್ರ್ ಸಿಂಗ್ ಧೋನಿಯನ್ನು ಔಟ್ ಮಾಡುವುದರೊಂದಿಗೆ ಜಡೇಜಾ ಬಳಗವನ್ನು 11 ರನ್‍ಗಳಿಂದ ಸೋಲಿಸಲು ಸಹಾಯ ಮಾಡಿದರು. ಇದನ್ನೂ ಓದಿ: ಕೊನೆಯವರೆಗೆ ಹೋರಾಡಿ ಸೋತ ಚೆನ್ನೈ – ಪಂಜಾಬ್‌ಗೆ 11 ರನ್‌ಗಳ ಜಯ

ರಿಷಿ ಧವನ್ ಮುಖ ಕವಚವನ್ನು ಹಾಕಿಕೊಂಡು ಆಟವಾಡುವುದಕ್ಕೆ ಒಂದು ಬಲವಾದ ಕಾರಣವಿದೆ. ಅದೇನೆಂದರೆ ಈ ಹಿಂದೆ ಅವರು, ರಣಜಿ ಟ್ರೋಫಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಅವರ ಮುಖಕ್ಕೆ ಬಾಲ್ ಬಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಹೆಚ್ಚುವರಿ ರಕ್ಷಣೆಗಾಗಿ ಈ ರೀತಿಯಾದ ಸೇಫ್ಟಿ ಕಿಟ್‍ಗಳನ್ನು ಧರಿಸಿ ಆಟವಾಡುತ್ತಾರೆ. ಇದನ್ನೂ ಓದಿ: ವಿಕೆಟ್ ನೀಡಿದ ಪೋಲಾರ್ಡ್‍ಗೆ ಮುತ್ತು ಕೊಟ್ಟು ಸಂಭ್ರಮಿಸಿದ ಕೃನಾಲ್ ಪಾಂಡ್ಯ

ಕೆಲವು ದಿನಗಳ ಹಿಂದೆ, ಪಂಜಾಬ್ ಕಿಂಗ್ಸ್ ತಂಡವು ಸಾಮಾಜಿಕ ಜಾಲತಾಣದಲ್ಲಿ ರಿಷಿ ಧವನ್ ಅವರು ಮುಂಬೈನ ಕ್ರಿಕೆಟ್ ಮೈದಾನವೊಂದರಲ್ಲಿ ಅಭ್ಯಾಸ ಮಾಡುತ್ತಿದ್ದ ವೀಡಿಯೋವನ್ನು ಹಂಚಿಕೊಂಡಿತ್ತು. ವೀಡಿಯೋದಲ್ಲಿ ಧವನ್ ಅವರು ಮಾತನಾಡಿ, ನಾನು 4 ವರ್ಷಗಳ ನಂತರ ಐಪಿಎಲ್‍ಗೆ ಮರಳುತ್ತಿದ್ದೇನೆ. ಆದ್ದರಿಂದ ರಣಜಿ ಟ್ರೋಫಿಯಲ್ಲಿ ನಾನು ಗಾಯಗೊಂಡಾಗ ಸ್ವಲ್ಪ ನಿರಾಶೆಯಾಯಿತು. ನಾನು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕಾರಣ ನಾನು ಮೊದಲ ನಾಲ್ಕು ಪಂದ್ಯಗಳಲ್ಲಿ ಲಭ್ಯವಿರಲಿಲ್ಲ. ಆದರೆ ನಾನು ಈಗ ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ. ಈಗ ತಂಡದ ಆಯ್ಕೆಗೆ ನಾನು ಲಭ್ಯವಿದ್ದೇನೆ. ನಾನು ಕಠಿಣ ಅಭ್ಯಾಸ ನಡೆಸುತ್ತಿದ್ದೇನೆ ಎಂದು ವೀಡಿಯೋದಲ್ಲಿ ಹೇಳಿದ್ದಾರೆ.

ಧವನ್ ಐಪಿಎಲ್‍ನಲ್ಲಿ ಹಿಂದಿನ ಬಾರಿ 2016ರಲ್ಲಿ ಅದೇ ಫ್ರಾಂಚೈಸಿ ಪಂಜಾಬ್ ಕಿಂಗ್ಸ್‍ನೊಂದಿಗೆ ಕಾಣಿಸಿಕೊಂಡಿದ್ದರು. ಅವರು 2014ರ ಆವೃತ್ತಿಯಲ್ಲಿ ಫೈನಲ್ ತಲುಪಿದ್ದ ಪಂಜಾಬ್ ತಂಡದ ಭಾಗವಾಗಿದ್ದರು. ಇದನ್ನೂ ಓದಿ: 3.10 ಕೋಟಿ ರೂಪಾಯಿಯ ಐಷಾರಾಮಿ ಕಾರು ಖರೀದಿಸಿದ ಹಿಟ್ ಮ್ಯಾನ್

ನಾನು ಪಂಜಾಬ್ ತಂಡಕ್ಕೆ ಮರಳಲು ತುಂಬಾ ಶ್ರಮಿಸಿದ್ದೇನೆ. ಅಂತಿಮವಾಗಿ 4 ವರ್ಷಗಳ ನಂತರ ನನಗೆ ಐಪಿಎಲ್‍ನಲ್ಲಿ ಅವಕಾಶ ಸಿಕ್ಕಿದೆ. ದೇಶೀಯ ಕ್ರಿಕೆಟ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇನೆ. ನಾನು ತಂಡಕ್ಕೆ ಮರಳಲು ಸುಮಾರು 3-4 ವರ್ಷಗಳ ಕಾಲ ನಿರಂತರವಾಗಿ ಪ್ರಯತ್ನಿಸಿದೆ. ಆದ್ದರಿಂದ ನನ್ನ ಗಾಯದಿಂದಾಗಿ ನಾನು ಆಟವಾಡುವುದನ್ನು ಕಳೆದುಕೊಳ್ಳುತ್ತೇನೆಯೇ ಎಂದು ನಾನು ಸ್ವಲ್ಪ ಭಯಪಟ್ಟೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *