ಬಿಟ್‍ಕಾಯಿನ್ ಮೂಲಕ 500 ಕೋಟಿ ಕೊಡಿ, ಇಲ್ಲವಾದ್ರೆ ರಿಸಿನ್ ವಿಷ ಹಾಕಿ ಕೊಲ್ತೀವಿ – ವಿಪ್ರೋ ಸಂಸ್ಥೆಗೆ ಬೆದರಿಕೆ

Public TV
2 Min Read

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಐಟಿ ಸಂಸ್ಥೆ ವಿಪ್ರೋಗೆ ಶುಕ್ರವಾರದಂದು ಅನಾಮಧೇಯ ಇ-ಮೇಲ್ ಮೂಲಕ ಬೆದರಿಕೆ ಬಂದಿದೆ.

500 ಕೋಟಿ ರೂ. ಹಣವನ್ನು ಡಿಜಿಟಲ್ ಕರೆನ್ಸಿ- ಬಿಟ್‍ಕಾಯಿನ್ ಮೂಲಕ ನೀಡುವಂತೆ ಸರ್ಜಾಪುರದ ವಿಪ್ರೋ  ಸಂಸ್ಥೆಗೆ ಈ ಮೇಲ್ ಮೂಲಕ ಬೆದರಿಕೆ ಬಂದಿದೆ. 20 ದಿನಗಳ ಒಳಗೆ ಹಣವನ್ನು ನೀಡದಿದ್ರೆ ಬೆಂಗಳೂರಿನ ಎಲ್ಲಾ ವಿಪ್ರೋ ಸಂಸ್ಥೆಗಳ ಮೇಲೆ ಅಟ್ಯಾಕ್ ಮಾಡುವುದಾಗಿ ಹೇಳಿದ್ದು, ಮೇ 25ರ ಗಡವು ನೀಡಲಾಗಿದ್ದು, ramesh2@protomail.com ಎಂಬ ಮೇಲ್ ಐಡಿಯಿಂದ ಈ ಬೆದರಿಕೆ ಬಂದಿದೆ. ಈ ಸಂಬಂಧ ಸೈಬರ್ ಕ್ರೈಮ್ ಮತ್ತು ಸಿಸಿಬಿ ಯಲ್ಲಿ ಸೈಬರ್ ಭಯೋತ್ಪಾದನೆಯ ದೂರು ದಾಖಲಾಗಿದೆ.

ಇ-ಮೇಲ್‍ನಲ್ಲೇನಿದೆ?: ಮೇ 25ರೊಳಗೆ ಕೇಳಿದಷ್ಟು ಹಣ ಕೊಡಲಿಲ್ಲವಾದ್ರೆ ಬೆಂಗಳೂರಿನ ವಿಪ್ರೋ ಕಂಪನಿಗಳ ಮೇಲೆ ರಿಸಿನ್ ಎಂಬ ವಿಷದಿಂದ ದಾಳಿ ಮಾಡುವುದಾಗಿ ಇ-ಮೇಲ್ ನಲ್ಲಿ ಹೇಳಲಾಗಿದೆ. ಸಂಸ್ಥೆಯ ಕೆಫೆಟೀರಿಯಾದಲ್ಲಿ ನೀಡಲಾಗುವ ಊಟದಲ್ಲಿ ರಿಸಿನ್ ವಿಷವನ್ನ ಬೆರೆಸಿ, ಡ್ರೋನ್ ಮೂಲಕ ಸಿಂಪಡಿಸಿ ಅಥವಾ ಟಾಯ್ಲೆಟ್ ಸೀಟ್ ಮೇಲೆ, ಟಾಯ್ಲೆಟ್ ಪೇಪರ್ ಮೇಲೆ ರಿಸಿನ್ ಹಾಕುವುದಾಗಿ ಬೆದರಿಕೆ ಹಾಕಲಾಗಿದೆ.

ರಿಸಿನ್ ಸ್ಯಾಂಪಲ್ ಕಳಿಸ್ತೀನಿ: ನಾನು ಈಗಾಗಲೇ 1 ಕೆಜಿಯಷ್ಟು ಒಳ್ಳೆ ಗುಣಮಟ್ಟದ ರಿಸಿನ್ ಸಂಗ್ರಹಿಸಿದ್ದೀನಿ. ಈ ವಿಷಯದಲ್ಲಿ ತಮಾಷೆ ಮಾಡ್ತಿಲ್ಲ ಎಂಬುದನ್ನ ಸಾಬೀತುಪಡಿಸೋದಕ್ಕೆ ಬೇಕಾದ್ರೆ ಯಾವುದಾದ್ರೂ ವಿಪ್ರೋ ಕಚೇರಿಗೆ ಇನ್ನು ಕೆಲವು ದಿನಗಳಲ್ಲೇ 2 ಗ್ರಾಂನಷ್ಟು ರಿಸಿನ್ ಕಳಿಸ್ತೀನಿ. ಈ ಸ್ಯಾಂಪಲ್ ಡೋಸ್ ಪಡೆದಾಗ ಎಚ್ಚರವಾಗಿರಿ ಎಂದು ಇಮೇಲ್ ಕಳಿಸಿರುವ ವ್ಯಕ್ತಿ ಬೆದರಿಕೆ ಹಾಕಿದ್ದಾನೆ. ಬಿಟ್‍ಕಾಯಿನ್ ಮೂಲಕ ಸಂಸ್ಥೆ ಹಣ ಸಂದಾಯ ಮಾಡಲು ಲಿಂಕ್‍ಗಳನ್ನ ಕೂಡ ನೀಡಲಾಗಿದೆ. ಸಂಸ್ಥೆಯ ಹಿರಿಯ ಅಧಿಕಾರಿಗಳಿಗೆ ಸೇರಿದಂತೆ ಹಲವರಿಗೆ ಈ ಇಮೇಲ್ ಬಂದಿದೆ.

ನಾಯಿಗಳ ಮೇಲೆ ಟೆಸ್ಟ್: ಅಲ್ಲದೆ ಕೋಲ್ಕತ್ತಾದ ಬಾರಾನಗರ್‍ನಲ್ಲಿ 22 ನಾಯಿಗಳು ನಿಗೂಢವಾಗಿ ಸಾವನ್ನಪ್ಪಿದ ಬಗ್ಗೆ ಆಂಗ್ಲ ಪತ್ರಿಕೆಯೊಂದರ ವರದಿಯ ಲಿಂಕ್ ಕೂಡ ಇ-ಮೇಲ್‍ನಲ್ಲಿ ಇದೆ. ಈ ಘಟನೆ ಜನವರಿ 21ರಂದು ಬಾರಾನಗರ್‍ನಲ್ಲಿ ನಡೆದಿದ್ದು, ಕಟ್ಟದ ನಿರ್ಮಾಣ ಸ್ಥಳದ ಬಳಿ ರಸ್ತೆಯಲ್ಲಿ 22 ನಾಯಿಗಳ ಮೃತದೇಹ ಪತ್ತೆಯಾಗಿದ್ದವು. ಇ-ಮೇಲ್ ಕಳಿಸಿರುವ ವ್ಯಕ್ತಿ ತಾನು ಒಳ್ಳೇ ಗುಣಮಟ್ಟದ ವಿಷದ ಬೀಟಾ ಸ್ಟ್ರೇನ್ ಹೊಂದಿದ್ದು ಈ ನಾಯಿಗಳ ಮೇಲೆ ಅದನ್ನು ಪರೀಕ್ಷೆ ಮಾಡಿದ್ದೆ ಎಂದು ಹೇಳಿಕೊಂಡಿದ್ದಾನೆ.

ಇದನ್ನೂ ಓದಿ: ವಿಶ್ವದ ಡೆಡ್ಲಿ ವೆಪನ್: 10 ಮಿಲಿ ಗ್ರಾಂ ವಿಎಕ್ಸ್ ರಾಸಾಯನಿಕ ದೇಹಕ್ಕೆ ಸೇರಿದ್ರೆ ಸಾವು ನಿಶ್ಚಿತ!

ಈ ಬಗ್ಗೆ ಸರ್ಜಾಪುರ ರಸ್ತೆಯ ವಿಪ್ರೋ ಸಂಸ್ಥೆ ಐಟಿ ಕಾಯ್ದೆಯ ಸೆಕ್ಷನ್ 66ಎಫ್ ಅಡಿ ಸಿಸಿಬಿಯಲ್ಲಿ ದೂರು ದಾಖಲಿಸಿದೆ. ಪ್ರಕರಣ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ರವಿ, ಶುಕ್ರವಾರ ವಿಪ್ರೋ ಕಂಪನಿಯವರು ದೂರು ಕೊಟ್ಟಿದ್ದಾರೆ. ನಾವು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಏನಿದು ರಿಸಿನ್: ರಿಸಿನ್ ಒಂದು ಭಯಂಕರ ವಿಷ. ಹರಳೆಣ್ಣೆ ಮಾಡುವ ಬೀಜದಲ್ಲಿ ಇದು ಸಿಗುತ್ತದೆ. ಇದರ ವಾಸನೆ ತೆಗೆದುಕೊಂಡರೆ ಅಥವಾ ಇದನ್ನ ಸೇವಿಸಿದ್ರೆ ಅಥವಾ ಇನ್ಜೆಕ್ಟ್ ಮಾಡಿದ್ರೆ ಸಾವನ್ನಪ್ಪುತ್ತಾರೆ. ಕೆಜಿಬಿ(ಸೋವಿಯತ್ ಯೂನಿಯನ್‍ನ ಗುಪ್ತಚರ ಸಂಸ್ಥೆ) ಸೇರಿದಂತೆ ಅನೇಕ ಗುಪ್ತಚರ ಸಂಸ್ಥೆಗಳು ತಮ್ಮ ಶತ್ರುಗಳನ್ನ ಮುಗಿಸಲು ರಿಸಿನ್ ಬಳಕೆ ಮಾಡಿವೆ. ಬರಾಕ್ ಒಬಾಮಾ ಸೇರಿದಂತೆ ಅನೇಕ ಅಮೆರಿಕ ರಾಜಕಾರಣಿಗಳಿಗೆ ರಿಸಿನ್ ಪ್ಯಾಕೇಜ್‍ಗಳನ್ನ ಕಳಿಸಲಾಗಿತ್ತು. ಇದರಿಂದ 2013ರಲ್ಲಿ ಎಫ್‍ಬಿಐ ಈ ಬಗ್ಗೆ ತನಿಖೆ ಆರಂಭಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *