ಸಕಲ ಸರ್ಕಾರಿ ಗೌರವದೊಂದಿಗೆ ಹುಟ್ಟೂರಿನಲ್ಲಿ ನಾಡೋಜ ಪಾಪು ಅಂತ್ಯಕ್ರಿಯೆ

Public TV
1 Min Read

ಹುಬ್ಬಳ್ಳಿ: ಸೋಮವಾರ ರಾತ್ರಿ ನಿಧನರಾದ ಹಿರಿಯ ಪತ್ರಕರ್ತ, ಸಾಹಿತಿ, ನಾಡೋಜ ಡಾಕ್ಟರ್ ಪಾಟೀಲ ಪುಟ್ಟಪ್ಪನವರ ಅಂತ್ಯಕ್ರಿಯೆ ಹಾವೇರಿ ಜಿಲ್ಲೆಯ ಹಲಗೇರಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಜರುಗಿತು.

ರಾಣೆಬೆನ್ನೂರ ತಾಲೂಕಿನ ಸ್ವಗ್ರಾಮ ಹಲಗೇರಿಯಲ್ಲಿ ಅವರ ಪಿತ್ರಾರ್ಜಿತ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ ಬೋಮ್ಮಾಯಿ, ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕೃಷಿ ಸಚಿವ ಬಿ.ಸಿ.ಪಾಟೀಲ್, ಕೂಡಲ ಸಂಗಮದ ಬಸವಮೃತ್ಯುಂಜಯ ಸ್ವಾಮೀಜಿ, ತರಳಬಾಳು ಶಾಖಾ ಮಠದ ಪಂಡಿತಾರಾದ್ಯ ಸ್ವಾಮೀಜಿ, ಮುಂಡರಗಿಯ ನಿಜಗುಣನಾನಂದ ಸ್ವಾಮೀಜಿ, ಶಾಸಕ ಅರುಣಕುಮಾರ ಗುತ್ತೂರ, ಜಿ.ಪಂ.ಅಧ್ಯಕ್ಷ ಬಸನಗೌಡ ದೇಸಾಯಿ, ಮಾಜಿ ಸಚಿವರಾದ ಹೆಚ್.ಕೆ.ಪಾಟೀಲ್, ರುದ್ರಪ್ಪ ಲಮಾಣಿ, ಮಾಜಿ ಶಾಸಕ ಬಿ.ಹೆಚ್.ಬನ್ನಿಕೋಡ, ಮಾಜಿ ಸಂಸದ ಐ.ಜಿ.ಸನದಿ ಸೇರಿದಂತೆ ಅನೇಕ ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ನಾಡೋಜ ಪಾಟೀಲ ಪುಟ್ಟಪ್ಪ ಅವರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮಾರ್ಚ್ 16ರ ರಾತ್ರಿ 10 ಗಂಟೆ 10 ನಿಮಿಷಕ್ಕೆ ನಿಧನರಾಗಿದ್ದರು.

ಕಡಿಮೆ ರಕ್ತದೊತ್ತಡ, ರಕ್ತಹೀನತೆ, ಬ್ರೇನ್ ಹೆಮರೈಜ್, ಶ್ವಾಸಕೋಶದ ಸೋಂಕು ಸೇರಿದಂತೆ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಪಾಟೀಲ ಪುಟ್ಟಪ್ಪ ಅವರಿಗೆ ಕಿಮ್ಸ್ ನಲ್ಲಿ ಒಂದು ತಿಂಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಶಸ್ತ್ರಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದ ಅವರಿಗೆ ಶ್ವಾಸಕೋಶದ ಸೋಂಕು ತಗುಲಿತ್ತು. ಹಲವು ದಿನ ಚಿಕಿತ್ಸೆಯ ನಂತರ ಪಾಪು ಕೊನೆಯುಸಿರೆಳೆದಿದ್ದಾರೆ.

ಹುಬ್ಬಳ್ಳಿಯ ಮನೆಯಲ್ಲಿ ಇಂದು ಬೆಳಗ್ಗೆ 9 ರಿಂದ 12 ವರಗೆ ಸಾರ್ವಜನಿಕರ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಗಿತ್ತು. ನಂತರ ಮಧ್ಯಾಹ್ನ 12 ಗಂಟೆಯಿಂದ ಅರ್ಧಗಂಟೆ ಧಾರವಾಡದ ಕರ್ನಾಟಕದ ವಿದ್ಯಾವರ್ಧಕ ಸಂಘದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಂತರ ಹಾವೇರಿಯ ರಾಣೇಬೆನ್ನೂರು ತಾಲೂಕಿನ ಸ್ವಗ್ರಾಮ ಹಲಗೇರಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

Share This Article
Leave a Comment

Leave a Reply

Your email address will not be published. Required fields are marked *