ಗುತ್ತಿಗೆದಾರನ ಲಕ್ಷಾಂತರ ರೂ. ಹಣ ಆಸ್ಪತ್ರೆ ಸಿಬ್ಬಂದಿಯಿಂದಲೇ ಕಳ್ಳತನ?

Public TV
2 Min Read

– ಅಪಘಾತದಲ್ಲಿ ಗಾಯಗೊಂಡು ಕಾಡೇ ಆಸ್ಪತ್ರೆಗೆ ಚಿಕಿತ್ಸೆ ದಾಖಲು
– ದೂರು ನೀಡಿದ್ರೂ ಪ್ರಕರಣ ದಾಖಲಾಗಿಲ್ಲ
– ಆಸ್ಪತ್ರೆಯ ಜೊತೆ ಪೊಲೀಸ್ ಸಿಬ್ಬಂದಿ ಭಾಗಿ ಆರೋಪ

ಬೆಂಗಳೂರು: ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಗುತ್ತಿಗೆದಾರರೊಬ್ಬರ ಲಕ್ಷಾಂತರ ರೂ. ಹಣವನ್ನು ರಾಜಧಾನಿಯ ಆಸ್ಪತ್ರೆ ಸಿಬ್ಬಂದಿ ಕದ್ದಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದೆ. ಆಸ್ಪತ್ರೆಗೆ ದಾಖಲಾಗುವಾಗ ನನ್ನ ಬಳಿ 6 ಲಕ್ಷ ರೂ. ಹಣವಿತ್ತು. ಆದರೆ ಚಿಕಿತ್ಸೆ ನೀಡುವ ಸಮಯದಲ್ಲಿ 1 ಲಕ್ಷ ರೂ. ಹಣವನ್ನು ಕಾಡೇ ಆಸ್ಪತ್ರೆಯ ನರ್ಸ್ ಗಳು ಕದ್ದಿದ್ದಾರೆ ಎಂದು ಗುತ್ತಿಗೆದಾರ ಲಿಂಗಮೂರ್ತಿ ಆರೋಪಿಸಿದ್ದಾರೆ.

ಲಿಂಗಮೂರ್ತಿ ಆರೋಪ ಏನು?
ಕೆಲಸದ ನಿಮಿತ್ತ 6 ಲಕ್ಷ ಹಣ ತೆಗೆದುಕೊಂಡು ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಮಂಜುನಾಥ್ ನಗರದ ಬಳಿ ಅಪಘಾತ ನಡೆದಿತ್ತು. ಅಪಘಾತದಿಂದ ತಲೆಗೆ ಪೆಟ್ಟು ಬಿದ್ದು ನಾನು ಗಾಯಗೊಂಡಿದ್ದೆ. ಕೂಡಲೇ ಪರಿಚಯಸ್ಥರು ನಗರದ ಕಾಡೇ ಆಸ್ಪತ್ರೆಗೆ ನನ್ನನ್ನು ದಾಖಲಿಸಿದ್ದರು.

ಚಿಕಿತ್ಸೆ ವೇಳೆ ನನ್ನ ಬನಿಯನ್ ಒಳಗೆ ಇದ್ದ ಒಂದು ಲಕ್ಷ ರೂಪಾಯಿಯನ್ನು ಸಿಬ್ಬಂದಿ ಕದ್ದಿದ್ದಾರೆ. ಆಸ್ಪತ್ರೆಗೆ ಮಗ ಸಂತೋಷ್ ಬಂದಾಗ 6 ಲಕ್ಷದಲ್ಲಿ 5 ಲಕ್ಷ ಮಾತ್ರ ಇತ್ತು, ಬ್ಯಾಗ್‍ನಲ್ಲಿ 3 ಲಕ್ಷ ಹಾಗೂ ಜೇಬಿನಲ್ಲಿ 2 ಲಕ್ಷ ಇದೆ ಎಂದು ಸಿಬ್ಬಂದಿ ಹಣ ನೀಡಿ ಹೋಗಿದ್ದಾರೆ. ನಂತರ ನನಗೆ ಪ್ರಜ್ಞೆ ಬಂದು ಹಣದ ಬಗ್ಗೆ ಮಗನನ್ನು ವಿಚಾರಿಸಿದೆ. ಈ ಸಮಯದಲ್ಲಿ ಆಗ ಬನಿಯನ್‍ನಲ್ಲಿದ್ದ ಒಂದು ಲಕ್ಷ ರೂ. ಕಾಣೆಯಾಗಿದ್ದು ಅರಿವಿಗೆ ಬಂದಿದೆ.

ಬಳಿಕ ಹಣದ ಕುರಿತು ಆಸ್ಪತ್ರೆ ಸಿಬ್ಬಂದಿಗೆ ಕೇಳಿದಾಗ ಗೊತ್ತಿಲ್ಲ ಎಂದು ಹೇಳಿದ್ದಾರೆ. ಕದ್ದ ವಿಚಾರ ಬಹಿರಂಗವಾದ ಬಳಿಕ ನನಗೆ ಗೊತ್ತಾಗದಂತೆ ಬೆಡ್ ಮೇಲೆ 50 ಸಾವಿರ ರೂ.ಗಳನ್ನು ಯಾರೋ ಎಸೆದು ಹೋಗಿದ್ದಾರೆ. ಉಳಿದ 50 ಸಾವಿರ ರೂ. ಕೇಳಿದ್ದಕ್ಕೆ ಸಿಬ್ಬಂದಿ ನಮಗೆ ಗೊತ್ತಿಲ್ಲ ಅಂತ ಹೇಳುತ್ತಿದ್ದಾರೆ.

ನನ್ನ ಪುತ್ರ ಸಂತೋಷ್ ಬಸವೇಶ್ವರ ನಗರ ಠಾಣೆಗೆ ಈ ಕುರಿತು ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ದೂರು ಸ್ವೀಕರಿಸದೇ ಸಂಧಾನ ಮಾಡಿಕೊಳ್ಳಿ ಅಂತ ಪೊಲೀಸರು ಹೇಳಿದ್ದಾರೆ. ಪೊಲೀಸರಿಗೆ ಹಣ ನೀಡಿ ಕೇಸ್ ಮುಚ್ಚಿ ಹಾಕಲು ಆಸ್ಪತ್ರೆ ಸಿಬ್ಬಂದಿ ಯತ್ನಸುತ್ತಿದ್ದಾರೆ ಎಂದು ಲಿಂಗಮೂರ್ತಿ ಈಗ ಆರೋಪಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *