ಬೆಂಗಳೂರು: ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರೋಗಿಯೊಬ್ಬರು ಮೃತಪಟ್ಟಿರುವ ಘಟನೆ ನೆಲಮಂಗಲದ ಡಾಬಸ್ ಪೇಟೆಯಲ್ಲಿ ನಡೆದಿದೆ.
ಮಾದೇನಹಳ್ಳೀಯ ಸಿದ್ದಗಂಗಮ್ಮ ಮೃತ ರೋಗಿ. ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರೆಯದ ಕಾರಣ ಮೃತಪಟ್ಟಿದ್ದಾರೆ. ತಡರಾತ್ರಿ ಸಿದ್ದಗಂಗಮ್ಮರಿಗೆ ತೀವ್ರ ಕೆಮ್ಮು, ಕಫ, ಉಬ್ಬಸ ಹೆಚ್ಚಾದ ಕಾರಣ ಡಾಬಸ್ ಪೇಟೆಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ಯಾವುದೇ ವೈದ್ಯರು ಕರ್ತವ್ಯಕ್ಕೆ ಹಾಜರಾಗಿಲ್ಲ. ರೋಗಿಯ ಸಂಬಂಧಿಕರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಗಾಗಿ ಕಾದು ಕಾದು ವೈದ್ಯರು ಬಾರದೇ ಇದ್ದಾಗ, ಸಿದ್ದಗಂಗಮ್ಮರನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಖಾಸಗಿ ಆಸ್ಪತ್ರೆಯ ವೈದ್ಯರು ರೋಗಿಯನ್ನು ಪರೀಕ್ಷಿಸಿ, ರೋಗಿಯು ಈಗಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಘಟನೆ ಸಂಬಂಧ ಮೃತರ ಸಂಬಂಧಿಕರು ಸರ್ಕಾರಿ ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ರೋಗಿ ಸಾವಿಗೆ ಸರ್ಕಾರಿ ಆಸ್ಪತ್ರೆಯ ಬೇಜವಬ್ದಾರಿತನವೇ ಕಾರಣ ಎಂದು ಆರೋಪಿಸಿದ್ದಾರೆ.