9 ಗಂಟೆ ತಡವಾಗಿ ಬಂದ ವಿಮಾನ – ಕೆಐಎಎಲ್‍ನಲ್ಲಿ ಪ್ರಯಾಣಿಕರ ಪ್ರತಿಭಟನೆ ಆಕ್ರೋಶ

Public TV
1 Min Read

ಚಿಕ್ಕಬಳ್ಳಾಪುರ: ಬಸ್, ಟ್ರೈನ್ ತಡವಾಗಿ ಬರೋದು ಸಾಮಾನ್ಯ ಆದರೆ ವಿಮಾನವೊಂದು 9 ಗಂಟೆ ತಡವಾಗಿ ಬಂದು ಪ್ರಯಾಣಿಕರ ಅಕ್ರೋಶಕ್ಕೆ ಕಾರಣವಾದ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಪಾಟ್ನಾದಿಂದ ಕೆಐಎಎಲ್ ಗೆ ಮಧ್ಯಾಹ್ನ 1 ಗಂಟೆಗೆ ಆಗಮಿಸಿ ಮರಳಿ 2 ಗಂಟೆಗೆ ಪಾಟ್ನಾಗೆ ವಾಪಾಸ್ ತೆರಳಬೇಕಿದ್ದ ಸ್ಪೈಸ್ ಜೆಟ್ 768 ವಿಮಾನ ರಾತ್ರಿ 10 ಗಂಟೆ ಸುಮಾರಿಗೆ ಆಗಮಿಸಿದೆ. ಹೀಗಾಗಿ ಪಾಟ್ನಾಗೆ ತೆರಳಲು 1 ಗಂಟೆಗೆ ಕೆಎಐಎಲ್‍ಗೆ ಆಗಮಿಸಿ ಕಾದಿದ್ದ 180 ಪ್ರಯಾಣಿಕರು ಕೊನೆಗೆ ರಾತ್ರಿ 10 ಗಂಟೆ 45 ನಿಮಿಷಕ್ಕೆ 180 ಪಾಟ್ನಾದತ್ತ ಪ್ರಯಾಣ ಬೆಳೆಸಿದ್ದಾರೆ.

9 ಗಂಟೆಗೂ ಹೆಚ್ಚು ಕಾಲ ವಿಮಾನಕ್ಕಾಗಿ ಕಾದು ಕಾದು ರೋಸಿ ಹೋದ ಪ್ರಯಾಣಿಕರು ರಾತ್ರಿ 9 ಗಂಟೆ ಸುಮಾರಿಗೆ ಸ್ಪೈಸ್ ಜೆಟ್ ಏರ್ ವೇಸ್ ಸಂಸ್ಥೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಸಲಿಗೆ ತಾಂತ್ರಿಕ ದೋಷದ ಹಿನ್ನೆಲೆ ಎಸ್‍ಜಿ 768 ವಿಮಾನ ಪಾಟ್ನಾದಿಂದ ಕೆಐಎಎಲ್‍ಗೆ ಬರುವುದು ತಡವಾಗಿದೆ ಎಂದು ಸಂಸ್ಥೆ ತಿಳಿಸಿದೆ.

ತಾಂತ್ರಿಕ ದೋಷ ಉಂಟಾದರೆ ಬೇರೊಂದು ವಿಮಾನದ ವ್ಯವಸ್ಥೆ ಮಾಡಬೇಕಿತ್ತು. ಇಲ್ಲವಾದಲ್ಲಿ ಕನಿಷ್ಟ ಪಕ್ಷ 9 ಗಂಟೆ ಕಾದ ಪ್ರಯಾಣಿಕರಿಗೆ ಮೂಲಭೂತ ಸೌಲಭ್ಯಗಳನ್ನು ಓದಗಿಸಿ ಸಮಾಧಾನಪಡಿಸುವ ಕೆಲಸವಾದರೂ ಮಾಡಬೇಕಿತ್ತು. ಇದನ್ನು ಮಾಡದ ಸ್ಪೈಸ್ ಜೆಟ್ ಸಂಸ್ಥೆಯ ಸಿಬ್ಬಂದಿ ಸಮರ್ಪಕವಾಗಿ ಪ್ರಯಾಣಿಕರಿಗೆ ಸ್ಪಂದಿಸಿಲ್ಲ ಎಂದು ಆರೋಪಿಸಿ ಕೆಐಎಎಲ್‍ನ ಸ್ಪೈಸ್ ಜೆಟ್ ಸಂಸ್ಥೆ ಬಳಿಯೇ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *