ಖಾಸಗಿ ವಾಹನದಲ್ಲಿ ಊರಿಗೆ ತೆರಳುವ ಜನರಿಗೆ ಶಾಕ್ – ಪಾಸ್‍ಗೆ ಸರ್ಕಾರದಿಂದ ಬ್ರೇಕ್

Public TV
2 Min Read

ಬೆಂಗಳೂರು: ಲಾಕ್‍ಡೌನ್‍ನಿಂದ ತಮ್ಮ ಊರಿಗೆ ತೆರೆಳಲು ಒದ್ದಾಡುತ್ತಿರುವ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಯಾತ್ರಿಕರು ಮತ್ತಿತರರಿಗೆ ಸರ್ಕಾರ ಬಸ್ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ. ಆದರೆ ಈಗ ಖಾಸಗಿ ವಾಹನಗಳಲ್ಲಿ ಊರಿಗೆ ತೆರೆಳಲು ಹೊರಟಿದ್ದ ಮಂದಿಗೆ ಸರ್ಕಾರ ಶಾಕ್ ನೀಡಿದ್ದು, ಖಾಸಗಿ ವಾಹನಗಳಿಗೆ ಪಾಸ್ ನೀಡದಂತೆ ಆದೇಶಿಸಿದೆ.

ಖಾಸಗಿ ವಾಹನದಲ್ಲಿ ಊರಿಗೆ ತೆರಳಲು ಬಯಸುವವರು ಪಾಸ್ ಪಡೆದು ಹೋಗಬಹುದು ಎಂದು ಶನಿವಾರ ಆದೇಶ ಮಾಡಿದ್ದ ಸರ್ಕಾರ ತನ್ನ ಆದೇಶವನ್ನು ವಾಪಸ್ ಪಡೆದಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಉಚಿತ ಬಸ್ ವ್ಯವಸ್ಥೆ ಮಾಡಿರುವ ಕಾರಣಕ್ಕೆ ಖಾಸಗಿ ವಾಹನಗಳಿಗೆ ಅವಕಾಶ ಇಲ್ಲ. ಖಾಸಗಿ ವಾಹನಕ್ಕೆ ಯಾವುದೇ ರೀತಿಯ ಪಾಸ್ ನೀಡದಂತೆ ಸರ್ಕಾರದಿಂದ ಪೊಲೀಸರಿಗೆ ಮೌಖಿಕ ಆದೇಶ ರವಾನಿಸಲಾಗಿದೆ.

ಇಂದಿನಿಂದ ಯಾವುದೇ ಪಾಸ್ ವಿತರಣೆ ಇಲ್ಲ, ಖಾಸಗಿ ವಾಹನದಲ್ಲಿಯೇ ತೆರಳಬೇಕು ಎಂದರೆ ಸ್ವಲ್ಪ ದಿನ ಕಾಯಬೇಕಾಗುತ್ತದೆ. ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವ್ಯಕ್ತಿಯೊಬ್ಬರು ನಾವು ಪಾಸ್ ಪಡೆಯಲೆಂದು ನಾವು ಡಿಸಿಪಿ ಕಚೇರಿಗೆ ತೆರಳಿದಾಗ ನಮಗೆ ಯಾವುದೇ ಆದೇಶ ಬಂದಿಲ್ಲ ಎಂದು ತಿಳಿಸಿದ್ದಾರೆ. ಈಗ ನಾವು ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.

ಈ ಹಿಂದೆ ಸರ್ಕಾರ ಹೊರಡಿಸಿದ ಆದೇಶದಲ್ಲಿ, ಒಂದು ದಿನ, ಒಂದು ಕಡೆಗೆ ಹೋಗಲು ಮಾತ್ರ ಈ ಪಾಸ್ ಬಳಸಬಹುದು. ಅಂತರ್ ಜಿಲ್ಲೆಗಳಿಗೆ ಪ್ರಯಾಣಿಸಲು ಅವಕಾಶ ನೀಡಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ತಮ್ಮ ಆದೇಶದಲ್ಲಿ ಪ್ರಕಟಿಸಿದ್ದರು. ಪಾಸ್ ಬೇಕಾದವರು ತಮ್ಮ ದಾಖಲೆಗಳನ್ನು ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಥವಾ ಕಮಿಷನರೇಟ್‍ಗಳಲ್ಲಿ ಉಪ ಪೊಲೀಸ್ ಕಮಿಷನರ್ ಗೆ ನೀಡಿ ಅವರಿಂದ ಪಾಸ್‍ಗಳನ್ನು ಪಡೆಯಲು ಅವಕಾಶ ನೀಡಲಾಗಿತ್ತು.

ಊರುಗಳಿಗೆ ಹಿಂತಿರುಗುವ ಜನರ ಪ್ರಯಾಣದ ಸಮಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆದೇಶ, ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಪಾಸ್ ಪಡೆದವರು ಪ್ರಯಾಣಿಸುವ ಜಿಲ್ಲೆಗಳಲ್ಲಿ ಅಧಿಕಾರಿಗಳು ಆರೋಗ್ಯ ತಪಾಸಣೆ ನಡೆಸಬೇಕು. ಒಂದ ವೇಳೆ ಆರೋಗ್ಯದಲ್ಲಿ ಏರುಪೇರು ಕಂಡು ಬಂದರೆ ಕೂಡಲೇ ಅವರನ್ನು ಕೋವಿಡ್ ಆಸ್ಪತ್ರೆಗೆ ಕಳುಹಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *