– ಪ್ರಧಾನಿ ಮೋದಿ ತೀವ್ರ ಸಂತಾಪ
ಹೈದರಾಬಾದ್: ತೆಲಂಗಾಣದ (Telangana) ಸಂಗರೆಡ್ಡಿ ಜಿಲ್ಲೆಯ ಪಾಶಮಿಲಾರಂನ ಸಿಗಾಚಿ ರಾಸಾಯನಿಕ ಕಾರ್ಖಾನೆಯಲ್ಲಿ ರಿಯಾಕ್ಟರ್ ಸ್ಫೋಟದಿಂದ (Reactor Blast) ಕನಿಷ್ಠ 8 ಜನ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ರಿಯಾಕ್ಟರ್ ಸ್ಫೋಟಗೊಳ್ಳುತ್ತಿದ್ದಂತೆ, ಬೆಂಕಿ ಹೊತ್ತಿಕೊಂಡಿದೆ (Fire Accident). ಇನ್ನೂ, ಸ್ಫೋಟದ ತೀವ್ರತೆಯಿಂದಾಗಿ ಕಾರ್ಮಿಕರ ಮೃತದೇಹಗಳು 100 ಮೀಟರ್ ದೂರಕ್ಕೆ ಹಾರಿಬಿದ್ದಿವೆ. ಈ ವೇಳೆ, ಕೆಲವರು ಕಾರ್ಖಾನೆಯ ಒಳಗೆ ಸಿಲುಕಿಕೊಂಡಿದ್ದರು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿ, ಸಿಲುಕಿದ್ದವರ ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಚಾಕೊಲೇಟ್ಗಾಗಿ ಹಣ ಕೇಳಿದ್ದಕ್ಕೆ 4 ವರ್ಷದ ಮಗಳನ್ನೇ ಕತ್ತು ಹಿಸುಕಿ ಕೊಂದ ತಂದೆ
ಘಟನಾ ಸ್ಥಳದಿಂದ ಆರು ಶವಗಳನ್ನು ಹೊರತೆಗೆಯಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಕೆಲವು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಅವಘಡದಲ್ಲಿ ಸಿಲುಕಿದ್ದವರನ್ನು ಹೊರಗೆ ತರುವಾಗ ಸೆರೆಯಾದ ವಿಡಿಯೋದಲ್ಲಿ ಕಾರ್ಮಿಕರಿಗೆ ಸುಟ್ಟ ಗಾಯಗಳಾಗಿರುವುದನ್ನು ನೋಡಬಹುದಾಗಿದೆ.
ದುರಂತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ.ಗಳ ಪರಿಹಾರವನ್ನು ಅವರು ಘೋಷಿಸಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ತೆಲಂಗಾಣದ ಸಂಗರೆಡ್ಡಿಯಲ್ಲಿ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಜೀವಹಾನಿಯಾಗಿರುವುದಕ್ಕೆ ದುಃಖವಾಗಿದೆ. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಬೇಗ ಗುಣಮುಖರಾಗಲಿ. ಮೃತರ ಸಂಬಂಧಿಕರಿಗೆ ಪಿಎಂಎನ್ಆರ್ಎಫ್ನಿಂದ 2 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ 50,000 ರೂ. ನೀಡಲಾಗುವುದು ಎಂದು ಬರೆದುಕೊಂಡಿದ್ದಾರೆ.
ಘಟನೆಯ ಬಗ್ಗೆ ಸಿಎಂ ರೇವಂತ್ ರೆಡ್ಡಿ ಸಂತಾಪ ವ್ಯಕ್ತಪಡಿಸಿದ್ದು, ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ಮತ್ತು ಅವರಿಗೆ ಸುಧಾರಿತ ವೈದ್ಯಕೀಯ ಸೌಲಭ್ಯ ಒದಗಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಸಿಗಾಚಿ ಇಂಡಸ್ಟ್ರೀಸ್ ಲಿಮಿಟೆಡ್ ಒಂದು ಔಷಧೀಯ ಕಂಪನಿಯಾಗಿದ್ದು, ಔಷಧಿ, ಚಿಕಿತ್ಸೆಗೆ ಬೇಕಾದ ಸಹಾಯಕ ವಸ್ತುಗಳನ್ನು ಉತ್ಪಾದಿಸುತ್ತದೆ. ಇದನ್ನೂ ಓದಿ: 70 ಲಕ್ಷದ ಕಾರು, 800 ಗ್ರಾಂ ಚಿನ್ನ ನೀಡಿದ ಬಳಿಕವೂ ವರದಕ್ಷಿಣೆ ಕಿರುಕುಳ – ನವವಿವಾಹಿತೆ ಆತ್ಮಹತ್ಯೆ