ಪಾರು ಐ ಲವ್ ಯೂ

Public TV
2 Min Read

ಚಂದನವನದಲ್ಲಿ ಚಾರಿತ್ರಿಕ ದಾಖಲೆಗಳಿಗೆ ನಾಂದಿ ಹಾಡಬೇಕೆಂಬ ಆಸೆಯಿಂದ ದಿನಕ್ಕೋರ್ವರು ಯುವಪ್ರತಿಭೆಗಳು ಬರುತ್ತಾರೆ ಮತ್ತು ಬಂದವರಲ್ಲಿ ಸಂವೇದನಾಶೀಲರಾಗಿ ಸದಾ ತಮ್ಮ ಛಾಪನ್ನು ಮೂಡಿಸುವವರೂ, ಮೂಡಿಸಿದವರೂ ಹಲವರಿದ್ದಾರೆ‌.

ಇದೇ ಬಗೆಯ ಆಸೆಯೊಂದಿಗೆ ಹೊಸಬರ ಚಿತ್ರತಂಡವೊಂದು ವಿಶೇಷ ಪ್ರಯತ್ನದೊಡನೆ, ಕಾಲೇಜ್ ಕ್ಯಾಂಪಸ್ ನ ಲವ್ ಸ್ಟೋರಿ ಒಂದನ್ನು ಬೆಳ್ಳಿತೆರೆಗೆ ತರುವ ತವಕದಲ್ಲಿದ್ದಾರೆ.

ಹೌದು, ಬಹಳಷ್ಟು ಹೊಸಬರ ಚಿತ್ರಗಳು ಸೂಪರ್ ಹಿಟ್ ಆಗುತ್ತಿರುವ ಇಂದಿನ ದಿನಗಳಲ್ಲಿ ವಿಶೇಷ ಬಗೆಯ ಪ್ರಯತ್ನವಾಗಿ ಇದೀಗ ಬೆಳ್ಳಿತೆರೆಗೆ ಬರಲಿರುವ ಹೊಸ ಚಿತ್ರ ” ಪಾರು ಐ ಲವ್ ಯೂ ”

ಹೆಸರೇ ಹೇಳುವಂತೆ ಒಂದು ಅದ್ಭುತ ಲವ್ ಸ್ಟೋರಿಯನ್ನು ಹೊಂದಿರುವ ಚಿತ್ರ ಇದಾಗಿದ್ದು, ಕಾಲೇಜ್ ಕ್ಯಾಂಪಸ್ ನಲ್ಲಿ ಕ್ಯಾಬ್ ಡ್ರೈವರ್ ಆಗಿರುವ ನಾಯಕ, ಬಿ.ಎಡ್ ವಿದ್ಯಾರ್ಥಿನಿಯನ್ನು ಪ್ರೇಮದ ಬಲೆಯಲ್ಲಿ ಬೀಳಿಸುತ್ತಾನೆ. ಮುಂದೆ ಈ ಕಥೆ ಪಡೆಯುವ ಅನೇಕ ತಿರುವುಗಳು ಚಿತ್ರದ ದಿಕ್ಕನ್ನೇ ಬದಲಾಯಿಸುತ್ತಾ ಸಾಗುತ್ತದೆ.

ತಮ್ಮ ಜಗಜ್ಯೋತಿ ಮೂವೀ ಮೇಕರ್ಸ್ ನಿರ್ಮಾಣದಲ್ಲಿ ಪಾರು ಐ ಲವ್ ಯೂ ಚಿತ್ರವನ್ನು ತೆರೆಗೆ ತರುತ್ತಿರುವವರು ನಾಯಕ ಕಂ ನಿರ್ಮಾಪಕರಾದ ನಿರಂಜನ್ ರವರು.

ಈಗಾಗಲೇ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯೂ ಸರ್ಟಿಫಿಕೇಟ್ ಕೂಡಾ ದೊರೆತಿದ್ದು, ರಾಜ್ಯಾದ್ಯಂತ 80 ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಇದು ಬಿಡುಗಡೆಯಾಗಲಿದೆ.

ಟಿ.ಎಸ್.ನಾಗಾಭರಣ, ಪಿ ಶೇಷಾದ್ರಿ, ರವಿಚಂದ್ರನ್ ಅವರ ಜೊತೆ ಕೆಲಸ ನಿರ್ವಹಿಸಿ ಅನುಭವವಿರುವ ಸುನೀಲ್ ಹುಬ್ಬಳ್ಳಿ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬರೆದಿರುವುದಲ್ಲದೇ, ಚಿತ್ರದ ನಿರ್ದೇಶನವನ್ನೂ ಮಾಡಿರುವುದು ಚಿತ್ರದ ಮೆರುಗು ಹೆಚ್ಚಿಸಿದೆ.

ಬೆಂಗಳೂರು, ಮಡಿಕೇರಿ, ಮೂಡುಬಿದ್ರೆ ಸುತ್ತಮುತ್ತ ಚಿತ್ರದ ಚಿತ್ರೀಕರಣ ನೆಡೆದಿದ್ದು, ನಾಗೇಶ್ ಆಚಾರ್ಯ ಕ್ಯಾಮೆರಾ ವರ್ಕ್ ಚಿತ್ರದಲ್ಲಿ ಅದ್ಭುತವಾಗಿ ಮೂಡಿಬಂದಿದೆ.

ಅನುಭವೀ ನಟಿ ನೀತು ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದು, ಚಿತ್ರದ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.

ಎ.ಟಿ ರವೀಶ್ ರವರು ಸಂಗೀತ ನೀಡಿರುವ ಚಿತ್ರದಲ್ಲಿ, ಶರತ್, ಎಂ.ಎಸ್ ಸುರೇಶ್, ಮೋಹನ್ ಬುನೇಜಾ, ಪೆಟ್ರೋಲ್ ಪ್ರಸನ್ನ, ಕಿಲ್ಲರ್ ವೆಂಕಟೇಶ್, ಮೈಕಲ್ ಮಧು, ಪದ್ಮಿನಿ ಪ್ರಕಾಶ್, ವೀಣಾ ಸುಂದರ್, ಪುಷ್ಪಸ್ವಾಮಿ, ಯಶಸ್ವಿನಿ, ಸಿದ್ಧರಾಜು ಕಲ್ಯಾಣಕರ್ ಮುಂತಾದವರು ತಾರಾಗಣದಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಇವಿಷ್ಟು ಮೇಲ್ನೋಟದ ವಿಚಾರಗಳು. ಒಟ್ಟಿನಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಹೊಸಬರ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿದ್ದು, ಇನ್ನೂ ಹೆಚ್ಚಿನ ವಿವರಗಳನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲೇ ಆಸ್ವಾದಿಸಿ ತಿಳಿಯಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *