ನಿಮ್ಮ ಮಗನಿಗಿಂತ ನಮಗೆ ಪಕ್ಷವೇ ಮುಖ್ಯ, ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ: ಬಿಎಸ್‍ವೈಗೆ ಅಮಿತ್ ಶಾ ಸೂಚನೆ

Public TV
2 Min Read

ಬೆಂಗಳೂರು: “ನಿಮ್ಮ ಮಗನಿಗಿಂತ ನಮಗೆ ಪಕ್ಷವೇ ಮುಖ್ಯ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ನಿಮ್ಮ ಮಗನಿಗೆ ಇನ್ನೂ ಭವಿಷ್ಯವಿದ್ದು, ಪಕ್ಷದಲ್ಲಿ ಕೆಲಸ ಮಾಡಲಿ” ಈ ಸಂದೇಶವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಿಎಸ್ ಯಡಿಯರೂಪ್ಪನವರಿಗೆ ತಿಳಿಸಿದ್ದಾರೆ.

ವಿಜಯೇಂದ್ರ ಅವರಿಗೆ ವರುಣಾ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಮಿತ್ ಶಾ ಅವರು ಬಿಎಸ್ ಯಡಿಯೂರಪ್ಪನವರ ಜೊತೆ ಮಾತನಾಡಿ, ನಮಗೆ ಬಿಜೆಪಿ ಅಧಿಕಾರಕ್ಕೆ ಬರಬೇಕು, ನೀವು ಸಿಎಂ ಆಗಬೇಕು. ಆದರೆ ನಿಮ್ಮ ಮಗ ಏನಾಗಬೇಕು ಎಂಬುದು ನಮಗೆ ಬೇಕಿಲ್ಲ. ನಮ್ಮಲ್ಲಿ ವ್ಯಕ್ತಿಗಿಂತಲೂ ಪಕ್ಷ ಮುಖ್ಯವಾಗಿದ್ದು ಸಮಯ ಬಂದಾಗ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ಬಿಎಸ್‍ವೈಗೆ ಅಮಿತ್ ಶಾ ಹೇಳಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

ವರುಣಾದಲ್ಲಿ ವಿಜಯೇಂದ್ರ ಪ್ರಚಾರ ಆರಂಭಿಸುವಾಗಲೇ ಕರ್ನಾಟಕದ ಉಸ್ತುವಾರಿ ಹೊತ್ತಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್ ಬಿಎಸ್‍ವೈ ಬಳಿ, ಯಡಿಯೂರಪ್ಪನವರೇ ಯಾವುದೇ ರಾಜ್ಯದಲ್ಲಿ ತಂದೆ ಮಕ್ಕಳಿಗೆ ಒಂದೇ ಚುನಾವಣೆಯಲ್ಲಿ ಟಿಕೆಟ್ ಕೊಟ್ಟಿಲ್ಲ. ಸ್ವತಃ ಮೋದಿಯವರೇ ಈ ವಿಚಾರದ ವಿರುದ್ಧವಾಗಿದ್ದಾರೆ ಎಂದು ತಿಳಿಸಿದ್ದರಂತೆ. ಈ ಸಂದರ್ಭದಲ್ಲಿ ವರುಣಾದಲ್ಲಿ ಅಖಾಡ ಹೇಗಿದೆ ಎನ್ನುವುದನ್ನು ನೋಡಿಕೊಂಡು ಮುಂದೆ ನಿರ್ಧಾರ ಮಾಡೋಣ ಎಂದು ಬಿಸ್‍ವೈ ಹೇಳಿದ್ದರಂತೆ.

ಈ ಮಧ್ಯೆ ವಿಜಯೇಂದ್ರ ಪ್ರಚಾರ ಜೋರಾಗುತ್ತಿದ್ದಂತೆ ವರುಣಾದ ಅಭ್ಯರ್ಥಿ ಎಂದೇ ಬಿಂಬಿತವಾಗತೊಡಗಿತ್ತು. ವರುಣಾ ಟಿಕೆಟ್ ಘೋಷಣೆಯಾಗದೇ ಇದ್ದರೂ ವಿಜಯೇಂದ್ರ ಅವರನ್ನು ಬಿಎಸ್‍ವೈ ಅಭ್ಯರ್ಥಿಯಂತೆ ಬಿಂಬಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದ ಹಿರಿಯ ನಾಯಕರು ಕೆಲ ದಿನಗಳಿಂದ ಚರ್ಚೆ ನಡೆಸುತ್ತಲೇ ಇದ್ದರು.

ತಿರಸ್ಕರಿಸಿದ್ದು ಯಾಕೆ?
ಚುನಾವಣಾ ಪ್ರಚಾರ ಭಾಷಣದ ವೇಳೆ ಮೋದಿ, ಅಮಿತ್ ಶಾ ಆದಿಯಾಗಿ ಎಲ್ಲ ನಾಯಕರು ಕಾಂಗ್ರೆಸ್ ವಂಶಪಾರಂಪರ್ಯ ಪಕ್ಷ ಎಂದು ದೂಷಿಸಿಕೊಂಡೇ ಬಂದಿದ್ದಾರೆ. ಒಂದು ವೇಳೆ ಬಿಎಸ್‍ವೈ ಮಗನಿಗೆ ಟಿಕೆಟ್ ನೀಡಿದರೆ ಈ ಆರೋಪ ಮಾಡಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಟಿಕೆಟ್ ನೀಡಿದರೆ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನಿಸಿದಂತೆ ಆಗುತ್ತದೆ. ಹೀಗಾಗಿ ವಿಜಯೇಂದ್ರ ಅವರಿಗೆ ಟಿಕೆಟ್ ನೀಡದೇ ಇರುವ ನಿರ್ಧಾರಕ್ಕೆ ಬಿಜೆಪಿ ನಾಯಕರು ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಎಸ್‍ವೈಗೆ ಮೂಗುದಾರ?
ಬಿಎಸ್‍ವೈಗೆ ಮೂಗುದಾರ ಹಾಕಿ ಕೈ ಸುಟ್ಟುಕೊಳ್ಳುತ್ತಾ ಬಿಜೆಪಿ ಎನ್ನುವ ಪ್ರಶ್ನೆಯೂ ಈಗ ಎದ್ದಿದೆ. ಪುತ್ರನಿಗೆ ಟಿಕೆಟ್ ಕೊಡದವರು. ಬಿಎಸ್‍ವೈಗೆ ಸಿಎಂ ಕುರ್ಚಿ ಕೊಡ್ತಾರಾ ಎನ್ನುವ ಪ್ರಶ್ನೆ ಬಿಎಸ್‍ವೈ ಆಪ್ತ ವಲಯದಲ್ಲಿ ಎದ್ದಿದೆ.

ಲಿಂಗಾಯತ ಸಮುದಾಯದ ಬಿಜೆಪಿ ಮುಖಂಡರಲ್ಲೂ ಆಕ್ರೋಶ ಹೆಚ್ಚಾಗಿದ್ದು, ಮೇಲ್ನೋಟಕ್ಕೆ ಒಪ್ಪಿಗೆ ಸೂಚಿಸಿದ್ರೂ ಒಳಗೊಳಗೆ ಬಿಎಸ್‍ವೈ ಸಿಟ್ಟಾಗಿದ್ದಾರೆ ಎನ್ನಲಾಗಿದೆ. ಅನಂತ್ ಕುಮಾರ್, ಸಂತೋಷ್ ವಿರುದ್ಧ ಬಿಎಸ್‍ವೈ ಗರಂ ಆಗಿದ್ದು, ಇಬ್ಬರ ಕುತಂತ್ರದಿಂದಲೇ ಟಿಕೆಟ್ ತಪ್ಪಿದೆ ಎಂದು ಬಿಎಸ್‍ವೈ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಎಲ್ಲವನ್ನೂ ಮೀರಿ ಬಿಜೆಪಿ ಹೈಕಮಾಂಡ್ ಕರ್ನಾಟಕ ಗೆಲ್ಲಲು ಮಾಡುವ ಪ್ಲ್ಯಾನ್ ಸಕ್ಸಸ್ ಆಗುತ್ತಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

Share This Article
Leave a Comment

Leave a Reply

Your email address will not be published. Required fields are marked *