Parliament Session: ಸಂಸದರಾಗಿ ಮೋದಿ, ಹಂಗಾಮಿ ಸ್ಪೀಕರ್ ಆಗಿ ಭರ್ತೃಹರಿ ಮಹತಾಬ್ ಪ್ರಮಾಣ ವಚನ ಸ್ವೀಕಾರ

Public TV
2 Min Read

– ನೂತನ ಸಂಸದರಿಗೆ ಹೃದಯಪೂರ್ವಕ ಸ್ವಾಗತ ಕೋರಿದ ಮೋದಿ

ನವದೆಹಲಿ: 18ನೇ ಲೋಕಸಭೆಯ ಮೊದಲ ಅಧಿವೇಶನ (Parliament Session) ಸೋಮವಾರ (ಜೂ.24) ಆರಂಭಗೊಂಡಿದ್ದು, ಹಂಗಾಮಿ ಸ್ಪೀಕರ್ ಆಗಿ ಬಿಜೆಪಿ ಸಂಸದ ಭರ್ತೃಹರಿ ಮಹತಾಬ್ (Bhartruhari Mahtab) ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಪ್ರಮಾಣ ವಚನ ಬೋಧಿಸಿದರು. ನಂತರ ಸಂಸತ್‌ ಭವನದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ವಾರಣಾಸಿ ಕ್ಷೇತ್ರದ ಸಂಸರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಅಧಿವೇಶನದ ಮೊದಲ ದಿನವಾದ ಸೋಮವಾರ 280 ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದು, ಮಂಗಳವಾರ 264 ಹೊಸದಾಗಿ ಚುನಾಯಿತರಾದ ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೂನ್ 26 ರಂದು ಲೋಕಸಭಾ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಯಲಿದೆ.

ಜೂನ್ 27 ರಂದು ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿಗಳು ಭಾಷಣ ಮಾಡಲಿದ್ದಾರೆ. ರಾಷ್ಟ್ರಪತಿಗಳ ಭಾಷಣಕ್ಕೆ ಕೃತಜ್ಞತಾ ನಿರ್ಣಯದ ಮೇಲಿನ ಚರ್ಚೆ ಜೂನ್ 28 ರಂದು ಪ್ರಾರಂಭವಾಗುತ್ತದೆ. ಜುಲೈ 2 ಅಥವಾ 3 ರಂದು ಪ್ರಧಾನಿ ಮೋದಿ ಚರ್ಚೆಗೆ ಪ್ರತಿಕ್ರಿಯಿಸುವ ನಿರೀಕ್ಷೆಯಿದೆ. ಬಳಿಕ ಎರಡೂ ಸದನಗಳು ಮುಂದೂಡಿಕೆಯಾಗಲಿದ್ದು ಕೇಂದ್ರ ಬಜೆಟ್ ಮಂಡನೆಗಾಗಿ ಜುಲೈ 22 ರಂದು ಮತ್ತೆ ಸೇರಲಿವೆ.

ಮೋದಿ ಪ್ರತಿಕ್ರಿಯೆ:
ಸಂಸತ್‌ ಪ್ರವೇಶಿಸುವ ಮುನ್ನ 18ನೇ ಲೋಕಸಭೆ ಅಧಿವೇಶನ ಮೊದಲ ದಿನದ ಹಿನ್ನೆಲೆ ಕಲಾಪಕ್ಕೂ ಮುನ್ನ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ, ಇದು ಅದ್ಭುತವಾದ ದಿನವಾಗಿದೆ. ಸ್ವಾತಂತ್ರ‍್ಯದ ನಂತರ ಮೊದಲ ಬಾರಿಗೆ, ನಮ್ಮದೇ ಹೊಸ ಸಂಸತ್ತಿನ ಕಟ್ಟಡದಲ್ಲಿ ಪ್ರಮಾಣ ವಚನ ಸಮಾರಂಭ ನಡೆಯುತ್ತಿದೆ. ಇದು ಹಳೆಯ ಸಂಸತ್ತಿನ ಕಟ್ಟಡದಲ್ಲಿ ನಡೆಯುತ್ತಿತ್ತು. ಈ ಮಹತ್ವದ ದಿನದಂದು, ಹೊಸದಾಗಿ ಚುನಾಯಿತರಾದ ಎಲ್ಲಾ ಸಂಸದರಿಗೆ ನಾನು ಹೃತ್ಪೂರ್ವಕ ಸ್ವಾಗತ ಕೋರುತ್ತೇನೆ ಎಂದು ಹೇಳಿದರು.

ಮುಂದುವರಿದು 18ನೇ ಲೋಕಸಭೆ ಕಲಾಪ ಆರಂಭವಾಗುತ್ತಿದ್ದು, ವಿಶ್ವದ ಅತಿದೊಡ್ಡ ಚುನಾವಣೆಯನ್ನು ಅತ್ಯಂತ ಅದ್ಧೂರಿ ಮತ್ತು ವೈಭವಯುತವಾಗಿ ನಡೆಸಲಾಯಿತು. ಈ ಚುನಾವನೆಯು ಬಹಳ ಮಹತ್ವದ್ದಾಗಿತ್ತು. ದೇಶದ ಜನರು ಸತತ 3ನೇ ಬಾರಿಗೆ ಸೇವೆ ಸಲ್ಲಿಸಲು ಸರ್ಕಾರಕ್ಕೆ ಅವಕಾಶ ನೀಡಿದ್ದಾರೆ ಎಂದು ಶ್ಲಾಘಿಸಿದರು.

Share This Article