ಮೂರು ಕೃಷಿ ಕಾನೂನು ವಾಪಸ್ – ಖುಷಿಯಾಗದ ಕಾಂಗ್ರೆಸ್ ನಾಯಕರು

Public TV
2 Min Read

ನವದೆಹಲಿ: ಕೊಟ್ಟ ಮಾತಿನಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೂರು ವಿವಾದಿತ ಕೃಷಿ ಕಾನೂನುಗಳನ್ನು ವಾಪಸ್ ಪಡೆದುಕೊಂಡಿದೆ. ಸಂಸತ್ ಚಳಿಗಾಲದ ಅಧಿವೇಶನದ ಮೊದಲ ದಿನವೇ ಲೋಕಸಭೆಯಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಂಡಿಸಿದ ಮಸೂದೆಗಳಿಗೆ ಬಿಜೆಪಿ ತನ್ನ ಸರ್ವಾನುಮತದಿಂದ ಒಪ್ಪಿಗೆ ನೀಡುವ ಮೂಲಕ ಮೂರು ಕಾನೂನುಗಳನ್ನು ವಾಪಸ್ ಪಡೆಯಿತು.

ಕಳೆದ ವರ್ಷ ಅಂಗೀಕರಿಸಿದ್ದ, ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ(ಪ್ರಚಾರ ಮತ್ತು ಅನುಕೂಲ) ಕಾನೂನು 2020, ರೈತರ(ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ, ಕೃಷಿ ಸೇವೆಗಳ ಕಾನೂನು 2020, ಅಗತ್ಯ ಸರಕುಗಳ ತಿದ್ದುಪಡಿ ಕಾನೂನು 2020 ಅನ್ನು ಸರ್ಕಾರ ಹಿಂಪಡೆದುಕೊಂಡಿದೆ. ಆದರೆ ಕೇಂದ್ರ ಸರ್ಕಾರದ ನಡವಳಿಕೆಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಇದನ್ನೂ ಓದಿ: 62 ನಿವಾಸಿಗಳಿಗೆ ಕೋವಿಡ್ ಪಾಸಿಟಿವ್ – ಕಂಟೈನ್ಮೆಂಟ್ ಝೋನ್ ಆಯ್ತು ವೃದ್ಧಾಶ್ರಮ

ಮೂರು ವಿವಾದಿತ ಕಾನೂನುಗಳನ್ನು ಚರ್ಚೆಯ ಮೂಲಕ ವಾಪಸ್ ಪಡೆಯಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತು. ಬಿಲ್ ಮಂಡನೆ ವೇಳೆ ಲೋಕಸಭೆಯ ಕಾಂಗ್ರೆಸ್ ನಾಯಕ ಅಧಿರಂಜನ್ ಚೌಧರಿ ಚರ್ಚೆ ನಡೆಸಿ ಕಾನೂನುಗಳನ್ನು ವಾಪಸ್ ಪಡೆಯುವಂತೆ ಪ್ರತಿಭಟನೆ ನಡೆಸಿದರು. ಈ ವೇಳೆ ಗದ್ದಲ ಏರ್ಪಟ್ಟ ಹಿನ್ನೆಲೆ 12 ಗಂಟೆಗೆ ಕಲಾಪ ಮುಂದೂಡಲಾಯಿತು. 12 ಗಂಟೆ ಶುರುವಾದ ಕಲಾಪ ಕೆಲವೇ ಹೊತ್ತಿನಲ್ಲಿ ಕಾಂಗ್ರೆಸ್ ಸೇರಿ ವಿಪಕ್ಷಗಳ ಗದ್ದಲದ ಕಾರಣ ಮತ್ತೆ 2 ಗಂಟೆಗೆ ಮುಂದೂಡಿಕೆಯಾಯಿತು.

ಎರಡು ಗಂಟೆಗೆ ಶುರುವಾದ ಕಲಾಪದ ವೇಳೆ ಕಾಂಗ್ರೆಸ್ ನಾಯಕರ ವಿರೋಧದ ನಡುವೆ ತನ್ನ ಸಂಖ್ಯಾಬಲದೊಂದಿಗೆ ಕಾನೂನು ವಾಪಸ್ ಪಡೆಯುವಲ್ಲಿ ಸಫಲವಾಗಿದೆ. ಆದರೆ ಸರ್ಕಾರದ ವರ್ತನೆಗೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಚರ್ಚೆ ನಡೆಸಲು ಸರ್ಕಾರ ಹೆದರುತ್ತಿದೆ ಎಂದು ಆರೋಪಿಸಿದರು. ರಾಜಕೀಯ ಕೆಸರಾಟದಲ್ಲಿ ಮೂರು ಕಾನೂನು ವಾಪಸ್ ಪಡೆಯಲಾಗಿದೆ. ಇದನ್ನೂ ಓದಿ: ಹುಬ್ಬಳ್ಳಿ ಸಾರಿಗೆಯ ಶೇ.50 ಮಂದಿ ಪಡೆಯಬೇಕಿದೆ 2ನೇ ಡೋಸ್

ಈ ನಡುವೆ ಕಾನೂನು ಹಿಂಪಡೆದರೂ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ವಾಪಸ್ ಪಡೆಯುವುದಿಲ್ಲ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಮೂರು ಕಾನೂನು ವಾಪಸ್ ಪಡೆದರೆ ಸಾಲದು ಎಂಎಸ್‍ಪಿ ಗ್ಯಾರಂಟಿ ಮತ್ತು ಇತರೆ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಮತ್ತು ಮೃತ ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *