ರಾಜ್ಯಸಭೆಗೆ ನ್ಯಾ.ಗೊಗೋಯ್ ನೇಮಕ – ಬಿಜೆಪಿ, ವಿಪಕ್ಷಗಳ ನಡುವೆ ಗದ್ದಲ ಗಲಾಟೆ

Public TV
2 Min Read

ಬೆಂಗಳೂರು: ರಾಜ್ಯಸಭೆಗೆ ನಿವೃತ್ತಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇಮಕ ವಿಚಾರ ವಿಧಾನ ಪರಿಷತ್‍ನಲ್ಲಿ ಗದ್ದಲ ಗಲಾಟೆ ಕಾರಣವಾಯಿತು. ನ್ಯಾ.ಗೊಗೋಯ್ ನೇಮಕವನ್ನ ಬಿಜೆಪಿ ಸದಸ್ಯರು ಸಮರ್ಥನೆ ಮಾಡಿಕೊಂಡರೆ, ವಿಪಕ್ಷ ನಾಯಕರು ವಿರೋಧ ವ್ಯಕ್ತಪಡಿಸಿದರು. ಮಾತು ಮಾತಿಗೆ ಬೆಳೆದು ಸದನದಲ್ಲಿ ಗದ್ದಲ ಗಲಾಟೆಗೆ ಕಾರಣವಾಯಿತು.

ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸಂವಿಧಾನದ ಚರ್ಚೆ ವೇಳೆ ಮಾತನಾಡುತ್ತಾ, ಇವತ್ತಿನ ಆಡಳಿತ ವ್ಯವಸ್ಥೆ ಬಗ್ಗೆ ವಿರೋಧ ವ್ಯಕ್ತಪಡಿಸಿದರು. ಇವತ್ತು ಐಟಿ, ಸಿಬಿಸಿ, ಇಡಿ, ಚುನಾವಣೆ ಆಯೋಗದ ಮೇಲೆ ರಾಜಕೀಯ ಹಸ್ತಕ್ಷೇಪ ಆಗುತ್ತಿದೆ. ಇದು ಸರಿಯಾದ ವ್ಯವಸ್ಥೆ ಅಲ್ಲ ಅಂತ ಅಸಮಾಧಾನ ವ್ಯಕ್ತಪಡಿಸಿದರು. ಇದಲ್ಲದೆ RBI ಗವರ್ನರ್ ಕೂಡ ವ್ಯವಸ್ಥೆ ವಿರುದ್ಧ ಅಸಮಾಧಾಗೊಂಡು ರಾಜೀನಾಮೆ ಕೊಟ್ಟು ಹೋದರು ಅಂತ ವ್ಯವಸ್ಥೆ ವಿರುದ್ಧ ಕಿಡಿಕಾರಿದರು. ಈಗ ನಿವೃತ್ತ ಸಿಜೆಯೊಬ್ಬರಿಗೆ ರಾಜ್ಯ ಸಭಾ ಸದಸ್ಯ ಸ್ಥಾನ ನೀಡಿದ್ದಾರೆ. ಇದು ಯಾವ ಸಂದೇಶ ಜನರಿಗೆ ಹೋಗುತ್ತೆ ಎಂದ ಅಸಮಾಧಾನ ಹೊರ ಹಾಕಿದರು.

ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತಿಗೆ ಕಾನೂನು ಮಂತ್ರಿ ಮಾಧುಸ್ವಾಮಿ ವಿರೋಧ ವ್ಯಕ್ತಪಡಿಸಿದರು. RBI ಗವರ್ನರ್ ರನ್ನ ದೇಶದ ಪ್ರಧಾನಿ ಮಾಡಲಿಲ್ಲವಾ? ಅಂತ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಬಿಜೆಪಿ ಸದಸ್ಯ ರವಿಕುಮಾರ್ ಮಾತನಾಡಿ, ನಿವೃತ್ತ ಅಧಿಕಾರಿಗಳು, ನ್ಯಾಯಮೂರ್ತಿಗಳನ್ನ ರಾಜ್ಯಸಭೆಗೆ ನೇಮಕ ಮಾಡದಂತೆ ನಿಯಮ ಇದೆಯಾ? ಕೊಟ್ಟರೆ ಏನು ತಪ್ಪಿದೆ. ಕಾನೂನಿನ ಅನ್ವಯ ನೇಮಕವಾಗಿದ್ದಾರೆ. ಚೆನ್ನಾಗಿ ಓದಿರೋರು ರಾಜ್ಯಸಭೆಗೆ ಬರೋದು ತಪ್ಪಾ? ಅಂತ ಗೊಗೋಯ್ ನೇಮಕವನ್ನ ಸಮರ್ಥನೆ ಮಾಡಿಕೊಂಡರು.

ಬಿಜೆಪಿ ಸದಸ್ಯರ ಸಮರ್ಥನೆಗೆ ವಿಪಕ್ಷ ನಾಯಕರು ವಿರೋಧ ವ್ಯಕ್ತಪಡಿಸಿದರು. ಈ ನ್ಯಾಯಮೂರ್ತಿಗಳು ಹಿಂದೆ ಅನೇಕ ತೀರ್ಪು ಕೊಟ್ಟಿದ್ದಾರೆ. ಈಗ ಅವರನ್ನ ರಾಜ್ಯಸಭೆಗೆ ನೇಮಕ ಮಾಡಿರೋದು ಎಷ್ಟು ಸರಿ ಅಂತ ಆಕ್ರೋಶ ಹೊರ ಹಾಕಿದರು. ಈ ವಿಚಾರವಾಗಿ ಸದನದಲ್ಲಿ ಗದ್ದಲ ಗಲಾಟೆ ಆಯಿತು.

ಕಾಂಗ್ರೆಸ್‍ನ ಸಿಎಂ ಇಬ್ರಾಹಿಂ ನ್ಯಾ.ಗೊಗೊಯ್ ನೇಮಕವನ್ನ ವಿಧವೆ ವಿವಾಹಕ್ಕೆ ಹೋಲಿಸಿ ಲೇವಡಿ ಮಾಡಿದರು. ವಿಧವೆ ಪುನರ್ ಮದುವೆ ಆಗೋದು ಸರಿ. ಆದರೆ ನಿನ್ನೆ ಮೊನ್ನೆ ಸತ್ತ ಗಂಡನ ಹೆಂಡತಿ ಮದುವೆ ಆಗೋದು ಎಷ್ಟು ಸರಿ. ನಿವೃತ್ತಿಯಾಗಿ 4 ತಿಂಗಳು ಆಗಿಲ್ಲ. ಆಗಲೇ ರಾಜ್ಯಸಭೆಗೆ ಅಯ್ಕೆ ಆದರೆ ಹೇಗೆ. ಇದು ಸುಪ್ರೀಂಕೋರ್ಟ್ ಸ್ಥಾನಕ್ಕೆ ಚ್ಯುತಿ ತಂದ ಹಾಗೆ ಅನ್ನಿಸುತ್ತೆ ಅಂತ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಮತ್ತೆ ವಿಪಕ್ಷ- ಆಡಳಿತ ಪಕ್ಷದ ನಡುವೆ ಗಲಾಟೆ ಆಯಿತು.

Share This Article
Leave a Comment

Leave a Reply

Your email address will not be published. Required fields are marked *