ಪರಮೇಶ್ವರ್ ಭಾಷಣದ ವೇಳೆ ಜೈ ಶ್ರೀರಾಮ್ ಘೋಷಣೆ

Public TV
1 Min Read

ಬೆಂಗಳೂರು: ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರ ಭಾಷಣದ ವೇಳೆಯೂ ವ್ಯಕ್ತಿಯೊಬ್ಬ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾನೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಕೆಂಪೇಗೌಡ ಜಯಂತಿಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಮಾತನಾಡುತ್ತಿದ್ದಾಗ ವ್ಯಕ್ತಿಯೊಬ್ಬ ಜೈ ಶ್ರೀರಾಮ್ ಎಂದು ಕೂಗಿದ್ದಾನೆ. ಇವತ್ತು ಗಾಂಧಿ ಎಂದರೆ ಯಾರು? ಶ್ರೀರಾಮ ಅಂದರೆ ಯಾರು ಎಂದು ಕೇಳುವ ಸನ್ನಿವೇಶ ಇದೆ ಎಂದು ಪರಮೇಶ್ವರ್ ಹೇಳುತ್ತಿದ್ದಂತೆ ಸಭಿಕರ ಮಧ್ಯದಿಂದ ವ್ಯಕ್ತಿಯೋರ್ವ ಜೈ ಶ್ರೀರಾಮ್ ಎಂದು ಕೂಗಿದ್ದಾನೆ. ತಕ್ಷಣ ಪ್ರತಿಕ್ರಯಿಸಿದ ಡಿಸಿಎಂ,”ಇಷ್ಟೊತ್ತು ಚೆನ್ನಾಗಿದ್ದೆಯಲ್ಲಪ್ಪ, ಏನಾಯ್ತು ನಿನಗೆ” ಎಂದು ಪ್ರಶ್ನಿಸಿದ್ದಾರೆ. ಪರಮೇಶ್ವರ್ ಮಾತಿಗೆ ಜನ ನಗೆಗಡಲಲ್ಲಿ ತೇಲಿದರು.

ಹೆಚ್ಚು ಜನರಿಗೆ ಪ್ರಶಸ್ತಿ: ಮುಂದಿನ ತಿಂಗಳು ನಮ್ಮ ಮೇಯರ್ ಜಯಂತಿ ಆಚರಿಸುತ್ತಾರೆ. ಬಹುದೊಡ್ಡ ಜಯಂತಿ ಆಚರಣೆ ಮಾಡುತ್ತಾರೆ. ಅದ್ಧೂರಿ ಜಯಂತಿ ಆಚರಿಸಿ 500 ಪ್ರಶಸ್ತಿ ನೀಡುತ್ತಾರೆ. ಸಾಧಕರಿರುತ್ತಾರೆ, ಆದರೆ ಅಷ್ಟು ಮಂದಿಗೆ ಕೆಂಪೇಗೌಡ ಪ್ರಶಸ್ತಿ ನೀಡುವುದು ಸರಿಯೇ. ಈ ಬಾರಿ ಕಡಿಮೆ ಮಾಡಲು ಸೂಚಿಸಿದ್ದೇನೆ. ಏನು ಮಾಡುತ್ತಾರೋ ನೋಡೋಣ ಎಂದು ಹೇಳಿದರು.

ಕೆಂಪೇಗೌಡರ ಹೆಸರಿಡಿ: ಪಟ್ಟನಾಯಕನಹಳ್ಳಿ ನಂಜಾವಧೂತ ಸ್ವಾಮೀಜಿ ಮಾತನಾಡಿ, ನಾವು ಪ್ರತಿ ಬಾರಿಯ ಜಯಂತಿಯ ವೇಳೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಡುತ್ತೇವೆ. ಆದರೆ, ಆ ಬೇಡಿಕೆಗಳು ಹಾಗೇ ಉಳಿಯುತ್ತವೆ ಈ ಬಾರಿ ಹಾಗಾಗಬಾರದು, ನಮ್ಮ ಮೆಟ್ರೋಗೆ ಕೆಂಪೇಗೌಡ ಹೆಸರಿಡಬೇಕು ಎಂದು ಮನವಿ ಮಾಡಿದರು.

ಕುಮಾರಸ್ವಾಮಿ ಮೆಟ್ರೋ ಯೋಜನೆ ತಂದವರು, ನಮ್ಮ ಮೆಟ್ರೋಗೆ ಕೆಂಪೇಗೌಡ ಹೆಸರಿಡಬೇಕು. ಈ ಕುರಿತು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಪಠ್ಯ ಪುಸ್ತಕದಲ್ಲಿ ಕೆಂಪೇಗೌಡರ ಪಠ್ಯ ಅಳವಡಿಸಬೇಕು. ನಗರದಲ್ಲಿ ವಿಶ್ವವೇ ತಿರುಗಿನೋಡುವಂತಹ ಕೆಂಪೇಗೌಡರ ಬೃಹತ್ ಪ್ರತಿಮೆ ನಿರ್ಮಾಣ ಮಾಡಬೇಕು. ಎಷ್ಟೇ ನೋವು ಬಂದರೂ ಮುಖ್ಯಮಂತ್ರಿಗಳು ಕಾಳಜಿವಹಿಸಬೇಕು. ಡಿಕೆ ಶಿವಕುಮಾರ್ ಅವರು ಸಿಎಂ ಆರೋಗ್ಯದ ಕಾಳಜಿವಹಿಸಬೇಕು. ಕುಮಾರಸ್ವಾಮಿ ಅವರು ಹೃದಯ ವೈಶಾಲ್ಯತೆ ಇರುವ ವ್ಯಕ್ತಿ ಎಂದರು.

ಇದೇ ವೇಳೆ, ಆಡಳಿತ ನಡೆಸುವವರ ಭಾಷೆ ಹುಷಾರಾಗಿರಬೇಕು, ಮತ್ತೊಬ್ಬರನ್ನು ನೋಯಿಸುವ ಭಾಷೆಯಾಗಬಾರದು, ಯಾವುದನ್ನೂ ಬಯಸದೆ ಕೆಲಸ ಮಾಡಬೇಕು ಎಂದು ಸಿಎಂ ಕುಮಾರಸ್ವಾಮಿಗೂ ಶ್ರೀಗಳು ಸಲಹೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *