ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅದ್ಧೂರಿಯಾಗಿ ನೆರವೇರಿದ ಪಂಚಮಿ ರಥೋತ್ಸವ

Public TV
1 Min Read

ಮಂಗಳೂರು: ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾ ಷಷ್ಠಿಯ ಉತ್ಸವದ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಪಂಚಮಿ ರಥೋತ್ಸವ ನೆರವೇರಿದೆ.

ಪಂಚಮಿಯ ಹಿನ್ನಲೆಯಲ್ಲಿ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಕೆಯಾಗಿದೆ. ದೇವಳದೊಳಗೆ ವಿಶೇಷ ಬಲಿ ಸೇವೆ ನಡೆದಿದ್ದು, ತದನಂತರ ಪಂಚಮಿ ರಥೋತ್ಸವ ನಡೆದಿದೆ. ಮಧ್ಯರಾತ್ರಿ ರಥೋತ್ಸವ ನಡೆದಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಆ ಪುಣ್ಯ ಕ್ಷಣವನ್ನು ಕಣ್ತುಂಬಿಕೊಂಡಿದ್ದಾರೆ.

ವೈಭವೋಪೇತವಾಗಿ ಸುಬ್ರಹ್ಮಣ್ಯನ ಪಂಚಮಿ ರಥೋತ್ಸವ ನಡೆದಿದ್ದು, ಸುಬ್ರಹ್ಮಣ್ಯನ ಉತ್ಸವ ಮೂರ್ತಿಯನ್ನು ರಥದಲ್ಲಿ ಇಟ್ಟು ವಿವಿಧ ಫಲಪುಷ್ಪದಿಂದ ಅಲಂಕಾರ ಮಾಡಲಾಗಿತ್ತು. ರಥವನ್ನು ದೇವಳದ ರಥಬೀದಿಯಲ್ಲಿ ಎಳೆಯಲಾಯಿತು. ಷಷ್ಠಿಯ ಹಿನ್ನಲೆಯಲ್ಲಿ ಇಂದು ಬೆಳಗ್ಗೆ 8.37ರ ಧನು ಲಗ್ನದಲ್ಲಿ ಸುಬ್ರಹ್ಮಣ್ಯ ನ ಬ್ರಹ್ಮರಥೋತ್ಸವ ನಡೆಯಲಿದೆ.

ಕಳೆದ ದಿನ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಪಂಚಮಿಯ ಹಿನ್ನಲೆಯಲ್ಲಿ ಎಡೆಮಡಸ್ನಾನ ನಡೆಯಿತು. ಸುಮಾರು 333 ಭಕ್ತರು ಎಡೆಮಡಸ್ನಾನ ಸೇವೆ ಸಲ್ಲಿಸಿದ್ದಾರೆ. ಮಧ್ಯಾಹ್ನ ಸುಬ್ರಹ್ಮಣ್ಯ ನಿಗೆ ವಿಶೇಷ ಪೂಜೆ ಬಳಿಕ ಆಗಮ ಪಂಡಿತರು ಮತ್ತು ದೇವಳದ ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ದೇವಸ್ಥಾನದ ಪ್ರಾಂಗಣದಲ್ಲಿ ದೇವರ ನೈವೇದ್ಯವನ್ನು ಬಾಳೆ ಎಲೆಯ ಮೇಲೆ ಬಡಿಸಲಾಗಿತ್ತು. ದೇವರ ನೈವೇದ್ಯವನ್ನು ಗೋವಿಗೆ ತಿನ್ನಿಸಿ ಎಡೆಮಡೆಸ್ನಾನಕ್ಕೆ ಚಾಲನೆ ನೀಡಲಾಯಿತು.

ಬೆಳಗ್ಗೆ 10 ಗಂಟೆಯಿಂದಲೇ ಕುಮಾರಧಾರೆಯಲ್ಲಿ ಮಿಂದು, ಎಡೆಮಡಸ್ನಾನ ಸೇವೆ ಸಲ್ಲಿಸಲು ಕಾದು ಕುಳಿತ್ತಿದ್ದ ಭಕ್ತರು ದೇವರ ನೈವೇದ್ಯದಲ್ಲಿ ಉರುಳು ಸೇವೆ ಸಲ್ಲಿಸಿದರು. ಇದರಿಂದ ಯಾವುದೇ ಗೊಂದಲವಾಗದಂತೆ ಕ್ಷೇತ್ರದ ಆಡಳಿತ ಮಂಡಳಿ ಮತ್ತು ಆಗಮ ಪಂಡಿತರು ಎಲ್ಲಾ ಸಿದ್ಧತೆಯನ್ನು ನಡೆಸಿದ್ದರು. ಯಾವುದೇ ಲಿಂಗಬೇಧ ಇಲ್ಲದೆ ಚರ್ಮರೋಗ ಪೀಡಿತರಿಂದ ಹಿಡಿದು ಮಕ್ಕಳ ತನಕ ಎಡೆಮಡಸ್ನಾನ ಹರಕೆಯನ್ನು ಭಕ್ತಿಯಿಂದ ಸಲ್ಲಿಸಿದರು.

 

Share This Article
Leave a Comment

Leave a Reply

Your email address will not be published. Required fields are marked *