ಮಂತ್ರಂ ಹುಡುಗಿ ಪಲ್ಲವಿ ರಾಜು ಮನದ ಮಾತು..!

Public TV
4 Min Read

ಮಂತ್ರಂ ಚಿತ್ರದ ಮೂಲಕ ತನ್ನ ಅಮೋಘ ನಟನೆಯಿಂದಲೇ ನೋಡುಗರನ್ನು ಮಂತ್ರಮುಗ್ಧಗೊಳಿಸಿರುವವರು ಪಲ್ಲವಿ ರಾಜು. ಆ ಚಿತ್ರದ ನಟನೆಯ ಬಲದಿಂದಲೇ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರೋ ಪಲ್ಲವಿಯೀಗ ತನ್ನದೇ ಹಾದಿಯಲ್ಲಿ ಹೊರಟಿರೋ ಭಿನ್ನ ನಟಿ. ಅವರ ಲಿಸ್ಟಿನಲ್ಲಿರುವ ಚಿತ್ರಗಳೇ ಚಿತ್ರಗಳ ಬಗ್ಗೆ ಅವರಿಗಿರೋ ಕ್ಲಾರಿಟಿಯ ಸಂಕೇತ. ಯಾರ ಜೊತೆ ನಟಿಸುತ್ತಿದ್ದೇನೆ ಅನ್ನೋದಕ್ಕಿಂತಾ ಯಾವ ಚಿತ್ರದಲ್ಲಿ ನಟಿಸುತ್ತಿದ್ದೇನೆಂಬುದೇ ಮುಖ್ಯ ಎಂಬಂಥಾ ಸ್ಪಷ್ಟತೆಯಿರೋ ಪಲ್ಲವಿ ರಾಜು ‘ಪಬ್ಲಿಕ್ ಟಿವಿ’ ಜೊತೆ ಹೊಸ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಸದ್ಯ ಯಾವ್ಯಾವ ಚಿತ್ರಗಳಲ್ಲಿ ನಟಿಸ್ತಿದ್ದೀರಿ?
– ರತ್ನಮಂಜರಿ ಚಿತ್ರ ಈಗಾಗಲೆ ಮುಗಿದಿದೆ. ಉತ್ತಮರು ಅನ್ನೋ ಚಿತ್ರ ಇನ್ನೇನು ಕಂಪ್ಲೀಟಾಗ್ತಿದೆ. ರವಿ ಹಿಸ್ಟರಿ ಮತ್ತು ಸಾಲಿಗ್ರಾಮ ಚಿತ್ರಗಳು ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗ್ತಿವೆ. ಇದೇ ಶನಿವಾರದಿಂದ ನಿಕ್ಸನ್ ಅಂತ ಹೊಸಾ ಚಿತ್ರವೊಂದು ಶುರುವಾಗ್ತಿದೆ.

ನೀವು ನಟಿಸುತ್ತಿರೋದೆಲ್ಲ ಹೊಸತನ, ಹೊಸಾ ಅಲೆಯ ಚಿತ್ರಗಳನ್ನೇ. ಇದು ನಿಮ್ಮ ಆಯ್ಕೆಯಾ?
ಖಂಡಿತಾ ಇದು ನನ್ನದೇ ಆಯ್ಕೆ. ಹಳಬರು, ಹೊಸಬರು ಯಾರೇ ಅಪ್ರೋಚ್ ಮಾಡಿದ್ರೂ ನಾನು ನೋಡೋದು ಕಥೆಯನ್ನು ಮಾತ್ರ. ಆದರೆ ಹೆಚ್ಚಾಗಿ ಹೊಸಬರ ಚಿತ್ರಗಳನ್ನೇ ಒಪ್ಪಿಕೊಳ್ಳುತ್ತೇನೆ. ಇಂಥಾ ಕಥೆಗಳಲ್ಲಿ ಹೊಸತೇನೋ ತುಡಿತ, ಉತ್ಸಾಹ ಇರುತ್ತೆ ಎಂಬುದಷ್ಟೇ ಇದರ ಹಿಂದಿರೋ ಕಾರಣ. ಪಾತ್ರ ಚೆನ್ನಾಗಿದ್ರೆ ಯಾವ ಚಿತ್ರಗಳಲ್ಲಾದ್ರೂ ನಟಿಸ್ತೀನಿ. ಇತ್ತೀಚೆಗೆ ನಗುವ ನಯನ ಎಂಬ ಶಾರ್ಟ್ ಮೂವಿಯಲ್ಲೂ ನಟಿಸಿದ್ದೇನೆ. ನನಗೆ ಸಬ್ಜೆಕ್ಟ್ ಅಷ್ಟೇ ಮುಖ್ಯ.

ನಿಮ್ಮ ಮುಂದಿನ ಚಿತ್ರ ನಿಕ್ಸನ್ ಅಂದ್ರಲ್ಲಾ? ಏನದರ ಅರ್ಥ?
ಇದು ತಮಿಳು ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ನಿರ್ಮಾಣಗೊಳ್ತಿರೋ ಚಿತ್ರ. ನಾನೇ ಲೀಡ್ ರೋಲ್ ಮಾಡ್ತಿದ್ದೇನೆ. ಈ ಚಿತ್ರ ಒಂದು ಡಿಫರೆಂಟಾಗಿರೋ ಕಥೆ ಹೊಂದಿದೆ ಅಂತಷ್ಟೇ ಸದ್ಯಕ್ಕೆ ಹೇಳಬಹುದು. ಟೈಟಲ್ ಬಗ್ಗೆ ಹೇಳಿದ್ರೆ ಕಥೇನೇ ರಿವೀಲ್ ಮಾಡಿದಂತಾಗುತ್ತೆ.

ನಿಮ್ಮ ನಟನೆಯನ್ನ ಎಲ್ರೂ ಹೊಗಳ್ತಾರೆ. ನಿಮಗೆ ಕಮರ್ಷಿಯಲ್ ಚಿತ್ರಗಳಲ್ಲಿ, ಸ್ಟಾರ್‍ಗಳ ಜೊತೆ ನಟಿಸೋ ಆಸೆ ಇಲ್ವಾ?
ಆಗ್ಲೇ ಹೇಳಿದಂತೆ ಚಿತ್ರ ಕಮರ್ಷಿಯಲ್ ಅಥ್ವಾ ಹೊಸಾ ಅಲೆಯದ್ದೆಂಬುದು ಮುಖ್ಯ ಅಲ್ಲ. ನನ್ನ ಪಾಲಿಗೆ ಕಥೇನೇ ಮುಖ್ಯ. ನಟಿಸೋಕೆ ಚಾಲೆಂಜಿಂಗ್ ಅಂತಿರೋ ಪತ್ರಗಳನ್ನ ಆಕ್ಸೆಕ್ಟ್ ಮಾಡ್ತೀನಿ. ಸದ್ಯ ಒಂದು ಕಮರ್ಷಿಯಲ್ ಸಿನಿಮಾದಲ್ಲೂ ನಟಿಸ್ತಿದ್ದೇನೆ. ಅಜೆಯ್ ರಾಜ್ ಹೀರೋ ಆಗಿರೋ ಆ ಚಿತ್ರದಲ್ಲಿ ನನ್ನದು ಗ್ಲಾಮರಸ್ ಪಾತ್ರ. ಈ ಸಿನಿಮಾದಲ್ಲಿ ಡ್ಯಾನ್ಸು, ಫೈಟ್ ಎಲ್ಲವೂ ಇವೆ.

ಇದುವರೆಗೂ ಡೀಗ್ಲ್ಯಾಮ್ ಪಾತ್ರಗಳಲ್ಲೇ ನಟಿಸಿ ಈಗ ಕಮರ್ಷಿಯಲ್ ಕ್ಯಾರೆಕ್ಟರ್ ಕಷ್ಟ ಅನ್ನಿಸಿಲ್ವಾ?
ಈ ಚೇಂಜ್ ಓವರ್ ಸ್ವಲ್ಪ ಕಷ್ಟ ಅನ್ನಿಸಿದ್ದು ನಿಜ. ಆದ್ರೆ ಆಗಾಗ ಹೀಗೆ ಬದಲಾವಣೆ ಬೇಕಾಗುತ್ತೆ. ಇದುವರೆಗೂ ನಾನು ಹೆಚ್ಚಾಗಿ ನಟಿಸಿದ್ದೇ ಡೀ ಗ್ಲ್ಯಾಮ್ ಪಾತ್ರಗಳಲ್ಲಾದ್ರಿಂದ, ಈ ಚಿತ್ರದಲ್ಲಿನ ಪಾತ್ರ ಸ್ವಲ್ಪ ಹೊಸತನ್ನಿಸ್ತು. ಆದ್ರೂ ಅದ್ರ ಬಗ್ಗೆ ಖುಷಿ ಇದೆ.

ಮಂತ್ರ ಸಿನಿಮಾ ಚೆನ್ನಾಗಿತ್ತು, ನಿಮ್ಮ ಆಕ್ಟಿಂಗನ್ನೂ ಜನ ಮೆಚ್ಚಿಕೊಂಡ್ರು. ಆದ್ರೂ ಆ ಸಿನಿಮಾ ಯಾಕೆ ಓಡ್ಲಿಲ್ಲ…?
ಅದು ಪಬ್ಲಿಸಿಟಿ ಕೊರತೆ ಅಂದ್ಕೋತೀನಿ. ವಾರದಲ್ಲಿ ಏಳೆಂಟು ಚಿತ್ರಗಳು ರಿಲೀಸಾಗೋವಾಗ ಜನ ಯಾವುದಕ್ಕೇ ಹೋಗ್ಬೇಕು ಅಂತಾನೇ ಗೊಂದಲಗೊಳ್ತಾರೆ. ಸ್ಟಾರ್ ಸಿನಿಮಾಗಳಾದ್ರೆ ಮಾತ್ರಾನೇ ಗೊಂದಲ ಇಲ್ದೆ ಹೋಗ್ತಾರೆ. ಈ ನಡುವೆ ಹೊಸಬರ ಸಿನಿಮಾಗಳಿಗೆ ಪಬ್ಲಿಸಿಟಿ ಮುಖ್ಯ ಆಗುತ್ತೆ. ಎಲ್ಲರೂ ಹೊಸಬರೇ ಆಗಿದ್ರಿಂದ ಪಬ್ಲಿಸಿಟಿ ಹೇಗೆ ಮಾಡ್ಬೇಕು ಅನ್ನೋದು ಗೊತ್ತಾಗದೆ ಕಷ್ಟ ಆಯ್ತು ಅನ್ಸತ್ತೆ.

ಇತ್ತೀಚೆಗೆ ಬರ್ತಿರೋ ನಿಮ್ಮ ಚಿತ್ರಗಳ ಬಗ್ಗೆ ನಿಮ್ಮ ಫ್ರೆಂಡ್ಸ್, ಪೇರೆಂಟ್ಸ್ ಏನಂತಾರೆ?
ಅವ್ರೆಲ್ಲರೂ ನಾನು ಯಾವ ಚಿತ್ರದಲ್ಲಿ ನಟಿಸಿದ್ರೂ ಶೂಟಿಂಗ್ ಸ್ಪಾಟಿಗೇ ಬಂದು ಹೋಗ್ತಾರೆ. ನನ್ನ ಪಾತ್ರಗಳ ಬಗ್ಗೆ ಪ್ರಾಮಾಣಿಕ ಅಭಿಪ್ರಾಯ ಹೇಳ್ತಾರೆ. ಕೆಲ ಟಿಪ್ಸನ್ನೂ ಕೊಡ್ತಾರೆ. ನನ್ನ ಫ್ರೆಂಡ್ಸ್, ಪೇರೆಂಟ್ಸ್ ಎಲ್ಲರಿಗೂ ನನ್ನ ಕೆರಿಯರ್ ಬಗ್ಗೆ ಹೋಪ್ಸ್ ಇದೆ. ನಾನು ಗೆಲುವಿನ ಹಿಂದೆ ಬಿದ್ದಿಲ್ಲ. ಸಿಕ್ಕ ಪಾತ್ರಗಳನ್ನು ಪ್ರಾಮಾಣಿಕವಾಗಿ ನಟಿಸ್ತೇನೆ. ಅದೆಲ್ಲವೂ ಡಿಫರೆಂಟಾಗಿಲ್ರಿ ಅಂತ ಬಯಸ್ತೀನಿ. ಹೀಗೆಯೇ ನಟಿಸ್ತಾ ಹೋದರೆ ಜನರಿಗೆ ಹತ್ತಿರಾಗಬಹುದೆಂಬುದಷ್ಟೇ ನನ್ನ ಉದ್ದೇಶ.

ಸಿನಿಮಾಗಳಲ್ಲಿ ಅವಕಾಶ ಸಿಗಬೇಕೆಂದರೆ ಬೇರೆ ಥರ ಅಡ್ಜೆಸ್ಟ್ ಆಗ್ಬೇಕು ಅನ್ನೋ ಕಂಪ್ಲೇಂಟ್ ಆಗಾಗ ಕೇಳಿ ಬರುತ್ತಿರುತ್ತೆ. ಇದ್ರ ಬಗ್ಗೆ ನಿಮ್ಮ ಅಭಿಪ್ರಾಯ?
ಸಿನಿಮಾ ಮಾತ್ರ ಅಲ್ಲ ಕಾರ್ಪೋರೇಟ್ ಸೆಕ್ಟರ್ ಸೇರಿದಂತೆ ಎಲ್ಲ ಕಡೆಗಳಲ್ಲೂ ಇಂಥಾದ್ದಿರುತ್ತೆ. ಆದ್ರೆ ಸಿನಿಮಾ ಅಂದ್ಮೇಲೆ ಮೀಡಿಯಾ ಫೋಕಸ್ ಆ ಕಡೆಗೆ ಜಾಸ್ತಿ ಇರೋದ್ರಿಂದ ಇಲ್ಲಿನದ್ದು ಸುದ್ದಿಯಾಗುತ್ತೆ. ಇದೆಲ್ಲವೂ ನಾವು ಯಾರ ಜೊತೆ ಕೆಲ್ಸಾ ಮಾಡ್ತಿದ್ದೀವಿ ಅನ್ನೋದ್ರ ಮೇಲೆ ಡಿಪೆಂಡ್ ಆಗುತ್ತೆ. ನಾವು ನಡೆದುಕೊಳ್ಳೋ ರೀತಿಯೂ ಮುಖ್ಯವಾಗುತ್ತೆ. ಯಾವ್ದಕ್ಕೂ ನಮ್ಮ ಎಚ್ಚರಿಕೆಯಲ್ಲಿ ನಾವಿದ್ರೆ ಒಳ್ಳೇದಷ್ಟೆ.

ನಿಮ್ಮ ಬಗ್ಗೆ ಯಾರಿಗೂ ಗೊತ್ತಿಲ್ಲದಿರೋ ವಿಷ್ಯ…
ನಾನು ಬೇಸಿಕಲಿ ಡ್ಯಾನ್ಸರ್. ನಂಗೆ ಸಿನಿಮಾಗಳಲ್ಲಿಯೂ ಡ್ಯಾನ್ಸ್ ಮಾಡೋಕೆ ಅವಕಾಶ ಸಿಗುವಂಥಾ ಪಾತ್ರಗಳಿರ್ಬೇಕೆನ್ನೋ ಆಸೆ ಇದೆ. ಆದ್ರೆ ಈವರೆಗೂ ಸಿನಿಮಾಗಳಲ್ಲಿ ಆ ಅವಕಾಶ ಸಿಕ್ಕಿಲ್ಲ. ರತ್ನ ಮಂಜರಿ ಚಿತ್ರದಲ್ಲಿ ಕೂರ್ಗ್ ಸ್ಟೈಲಲ್ಲೊಂದು ಡಾನ್ಸ್ ಮಾಡಿದ್ದೇನೆ. ಮುಂದೆ ಡ್ಯಾನ್ಸ್‍ಗೆ ಪ್ರಾಧಾನ್ಯತೆ ಇರೋ ಪಾತ್ರ ಸಿಗುತ್ತಾ ನೋಡ್ಬೇಕು.

ನಿಮ್ಮ ಮುಂದಿನ ಚಿತ್ರಗಳ ಬಗ್ಗೆ…
ಇನ್ನುಳಿದಂತೆ ಸೆಪ್ಟೆಂಬರ್ ತಿಂಗಳಾದ್ಮೇಲೆ ಡ್ರಗ್ ಮಾಫಿಯಾ ಸುತ್ತಾ ಇರೋ ಹೊಸಾ ಸಿನಿಮಾದಲ್ಲಿ ನಟಿಸ್ತಿದೀನಿ. ಅದ್ರಲ್ಲಿ ನನ್ನದು ವಿಚಿತ್ರ ಪಾತ್ರ. ಅದಕ್ಕಾಗಿ ಆರೇಳು ಕೇಜಿ ತೂಕ ಹೆಚ್ಚು ಮಾಡ್ಕೋಬೇಕು. ಅದಕ್ಕೆ ರೆಡಿಯಾಗ್ತಿದ್ದೇನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *