Toshakhana Case | ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಪತ್ನಿ ಬುಷ್ರಾ ಬಿಬಿಗೆ ತಲಾ 17 ವರ್ಷ ಜೈಲು

3 Min Read

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಹಾಗೂ ಪತ್ನಿ ಬುಷ್ರಾ ಬಿಬಿಗೆ ತೋಷಖಾನ-2 (Toshakhana Case) ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ವಿಶೇಷ ನ್ಯಾಯಾಲಯವು ತಲಾ 17 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.

ಇಮ್ರಾನ್ ಖಾನ್ ಪ್ರಸ್ತುತ ಇರುವ ಅಡಿಯಾಲಾ ಜೈಲಿನೊಳಗೆ (Adiala Jail) ನಡೆದ ವಿಚಾರಣೆಯ ಸಂದರ್ಭದಲ್ಲಿ ವಿಶೇಷ ಕೋರ್ಟ್‌ನ ನ್ಯಾಯಾಧೀಶ ಸೆಂಟ್ರಲ್ ಶಾರುಖ್ ಅರ್ಜುಮಂಡ್ ಅವರು ತೀರ್ಪು ಪ್ರಕಟಿಸಿದ್ದಾರೆ. ರಾಜ್ಯದ ಉಡುಗೊರೆಗಳಿಗೆ ಸಂಬಂಧಿಸಿದಂತೆ ಅಧಿಕಾರ ದುರುಪಯೋಗ ಮತ್ತು ನಂಬಿಕೆ ದ್ರೋಹ ಆರೋಪಗಳ ಅಡಿಯಲ್ಲಿ ತಪ್ಪಿತಸ್ಥರೆಂದು ಕೋರ್ಟ್‌ ತೀರ್ಪು ನೀಡಿದೆ. ಇದನ್ನೂ ಓದಿ: ಪಾಕ್‌ನಲ್ಲಿ ರಾಜಕೀಯ ಕೋಲಾಹಲ – ಜೈಲುಪಾಲಾದ ಕ್ರಿಕೆಟ್‌ ದಂತಕಥೆಯ ಜೀವಕ್ಕೆ ಇದೆಯಾ ಆಪತ್ತು? 

ಇಮ್ರಾನ್‌ ಖಾನ್‌ ಮತ್ತು ಪತ್ನಿಗೆ ಪಾಕಿಸ್ತಾನ ದಂಡ ಸಂಹಿತೆ (Pakistan Penal Code) ಸೆಕ್ಷನ್‌ 34 ಮತ್ತು 409ರ ಅಡಿಯಲ್ಲಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತು. ಇನ್ನೂ ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್‌ 5(2) ಅಡಿಯಲ್ಲಿ ಹೆಚ್ಚುವರಿ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಇದೇ ಕಾನೂನು ನಿಬಂಧನೆಗಳ ಅಡಿಯಲ್ಲಿ ಬುಷ್ರಾ ಬಿಬಿಗೂ 17 ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು. ಇದರೊಂದಿಗೆ ಇಬ್ಬರಿಗೂ ತಲಾ 16.4 ಮಿಲಿಯನ್‌ ಪಾಕಿಸ್ತಾನಿ ರೂಪಾಯಿ (52.39 ಲಕ್ಷ ರೂಪಾಯಿ) ದಂಡ ವಿಧಿಸಲಾಗಿದೆ. ಒಂದು ವೇಳೆ ದಂಡ ವಿಧಿಸಲು ವಿಫಲವಾದ್ರೆ ಮತ್ತಷ್ಟು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದೆ. ಇದನ್ನೂ ಓದಿ: 200ಕ್ಕೂ ಹೆಚ್ಚು ಮಂದಿ ಇಮ್ರಾನ್ ಖಾನ್‌ ಬೆಂಬಲಿಗರು ಅರೆಸ್ಟ್ – ಪಾಕ್‌ನಲ್ಲಿ ಭುಗಿಲೆದ್ದ ಆಕ್ರೋಶ

ಏನಿದು ತೋಶಖಾನ ಕೇಸ್‌?
ತೋಷಖಾನ (Toshakhana) ಸರ್ಕಾರದ ಖಜಾನೆಯಾಗಿದ್ದು, ಸರ್ಕಾರಕ್ಕೆ ಬಂದ ಕಾಣಿಕೆಗಳನ್ನ ನಿರ್ವಹಣೆ ಮಾಡುತ್ತದೆ. 1974ರಲ್ಲಿ ತೋಶಖಾನ ಇಲಾಖೆಯನ್ನ ಸ್ಥಾಪಿಸಲಾಯಿತು. ಭಾರತ ಸೇರಿದಂತೆ ಅನೇಕ ದೇಶಗಳು ತೋಶಖಾನಗಳನ್ನ ಹೊಂದಿವೆ. ಅಲ್ಲಿ ಇದನ್ನು ವಿದೇಶಾಂಗ ಸಚಿವಾಲಯ ನಿರ್ವಹಿಸುತ್ತದೆ. ಉಡುಗೊರೆಗಳನ್ನು ದೇಶದ ಆಸ್ತಿ ಎಂದು ಭಾವಿಸಲಾಗುತ್ತದೆ. ಸದ್ಯ ಇಮ್ರಾನ್‌ ಖಾನ್‌ ತಮ್ಮ ಅಧಿಕಾರಾವಧಿಯಲ್ಲಿ ತಮಗೆ ಬಂದ ಉಡುಗೊರೆಗಳನ್ನು ಈ ತೋಶಖಾನ ನಿಧಿಗೆ ನೀಡಬೇಕಿತ್ತು. ಆದ್ರೆ ಖಾನ್‌ ಅದನ್ನು ಮಾರಾಟ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಇದೆ. ಖಾನ್ ಅವರು 2018ರ ನವೆಂಬರ್‌ನಲ್ಲಿ ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಂದ ಪಡೆದ ನಾಲ್ಕು ಉಡುಗೊರೆಗಳನ್ನು ಮಾರಾಟ ಮಾಡಿದ್ದಾರೆ. ಪ್ರಾಚೀನ ಗಡಿಯಾರ, ಚಿನ್ನದ ಪೆನ್, ಉಂಗುರ, ನೆಕ್ಲೆಸ್‌ ಮತ್ತು ಇತರೆ ಅಮೂಲ್ಯ ಉಡುಗೊರೆಗಳನ್ನು ಮಾರಾಟ ಮಾಡಿಕೊಂಡಿದ್ದಾರೆ ಎನ್ನುವ ಆರೋಪಗಳು ಇದೆ. ಪಕ್ಷದ ಮಾಜಿ ಅಧ್ಯಕ್ಷರಾದವರ ಪೈಕಿ ಆಸಿಫ್‌ ಅಜಿ ಜರ್ಧಾರಿ ಪಾಕ್‌ ಮಾಜಿ ಪ್ರಧಾನಿ ನವಾಜ್‌ ಷರೀಫ್‌, ಯೂಸೂಫ್‌ ರಾಜಾ ಗಿಲಾನಿ ಕೂಡ ಇಂತಹ ಅಪರಾಧ ಎಸಗಿದ್ದಾರೆ. ಇಮ್ರಾನ್ ಖಾನ್ ಪತ್ನಿ ಬುಷ್ರಾ ಕೂಡ ಉಡುಗೊರೆಗಳನ್ನ ದುರುಪಯೋಗ ಮಾಡಿದ್ದಾರೆ ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ.

4

ತೋಶಖಾನಾ ಕೇಸ್‌ ಹಿನ್ನೆಲೆ ಏನು?
ಆಗಸ್ಟ್ 2022: ಪ್ರಕರಣವನ್ನ ಚುನಾವಣಾ ಆಯೋಗದ ಪರಿಶೀಲನೆಗೆ ಒಪ್ಪಿಸಿದ ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ರಾಜಾ
ಅಕ್ಟೋಬರ್‌ 21, 2022: ಪ್ರಕರಣದ ತೀರ್ಪು ಕಾಯ್ದಿರಿಸಿದ್ದ ಆಯೋಗ
ಅಕ್ಟೋಬರ್‌ 21, 2022: ಇಮ್ರಾನ್‌ಖಾನ್‌ರಿಂದ ತಪ್ಪು ಹೇಳಿಕೆ, ಅಸಮರ್ಪಕ ಆಸ್ತಿ ಘೋಷಣೆ ಎಂದು ತೀರ್ಪು. ಸದಸ್ಯತ್ವ ರದ್ದು.
ನವೆಂಬರ್‌ 21,2022: ಕ್ರಿಮಿನಲ್ ವಿಚಾರಣೆ ಕೋರಿ ಖಾನ್ ವಿರುದ್ಧ ಸೆಷನ್ ಕೋರ್ಟ್‌ಗೆ ಆಯೋಗದಿಂದ ದೂರು.
ಜುಲೈ 4, 2023: ಅರ್ಜಿದಾರರ ವಾದ ಮರು ಆಲಿಸುವಂತೆ ಕೆಳಹಂತದ ನ್ಯಾಯಾಲಯಕ್ಕೆ ಇಸ್ಲಾಮಾಬಾದ್ ಹೈಕೋರ್ಟ್ ಆದೇಶ.
ಜುಲೈ 8, 2023: ಪ್ರಕರಣ ವಿಚಾರಣೆಗೆ ಅರ್ಹ ಎಂದು ಸೆಷನ್ಸ್ ಕೋರ್ಟ್ ನ್ಯಾಯಾಧೀಶರ ಘೋಷಣೆ.
ಆಗಸ್ಟ್‌ 2, 2023: ಇಮ್ರಾನ್ ಖಾನ್ ಸಲ್ಲಿಸಿದ್ದ ಸಾಕ್ಷಿಗಳ ಪಟ್ಟಿ ತಿರಸ್ಕರಿಸಿದ ಕೋರ್ಟ್.
ಆಗಸ್ಟ್‌ 5, 2023: ಆರೋಪ ಸಾಬೀತು. 3 ವರ್ಷ ಶಿಕ್ಷೆ ವಿಧಿಸಿ ಆದೇಶ.

Share This Article