ಪಾಕಿಸ್ತಾನದ ಮೊಂಡು ವಾದವನ್ನು ಬಯಲು ಮಾಡಿದ್ರು ಬಾಲಕೋಟ್ ನಿವಾಸಿಗಳು

Public TV
2 Min Read

ನವದೆಹಲಿ: ಭಾರತೀಯ ವಾಯು ಪಡೆ ದಾಳಿಗೆ ಯಾವುದೇ ಹಾನಿ ಸಂಭವಿಸಿಲ್ಲವೆಂದು ಪಾಕಿಸ್ತಾನ ಮೊಂಡುವಾದ ಮುಂದುವರಿಸಿತ್ತು. ಆದರೆ ಬಾಲಕೋಟ್ ನಿವಾಸಿಗಳು ಏರ್ ಸ್ಟ್ರೈಕ್‍ನಿಂದ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಹೇಳುವ ಮೂಲಕ ಪಾಕ್ ಮೊಂಡುವಾದವನ್ನು ಬಯಲು ಮಾಡಿದ್ದಾರೆ.

ಯುದ್ಧದ ರೀತಿಯಲ್ಲಿ ಇಂದು 3 ಗಂಟೆ ಸುಮಾರು ಭಾರೀ ಪ್ರಮಾಣದಲ್ಲಿ ಶಬ್ಧ ಕೇಳಿ ಬಂತು. ಅದು ಹವಾಮಾನ ವೈಪರಿತ್ಯದಂತೆ ನಮ್ಮನ್ನು ತಲ್ಲಣಗೊಳಿಸಿತ್ತು. ಇದರಿಂದಾಗಿ ಇಡೀ ರಾತ್ರಿ ನಾವು ನಿದ್ರಿಸಲು ಸಾಧ್ಯವಾಗಲಿಲ್ಲ. ಶಬ್ಧ ಕೇಳಿಬಂದ 5 ರಿಂದ 10 ನಿಮಿಷದಲ್ಲಿ ಮೂರು ಸ್ಫೋಟಗಳು ಸಂಭವಿಸಿದವು. ಪರಿಣಾಮ ಕಟ್ಟಡಗಳು ನೆಲ ಸಮವಾದವು. ಈ ಘಟನೆಯಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದನ್ನು ನಾವು ನೋಡಿದ್ದೇವೆ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಇದನ್ನು ಓದಿ: ಪಾಕಿಸ್ತಾನಕ್ಕೆ ಅಮೇರಿಕ 1 ಡಾಲರ್ ಆರ್ಥಿಕ ನೆರವನ್ನು ನೀಡಬಾರದು: ನಿಕ್ಕಿ ಹ್ಯಾಲೆ

ಅಷ್ಟೇ ಅಲ್ಲದೆ ದಾಳಿಯ ಅವಶೇಷಗಳನ್ನು ಮಾಧ್ಯಮಗಳಿಗೆ ತೋರಿಸಿದ್ದಾರೆ. ಈ ಮೂಲಕ ದಾಳಿಯಿಂದ ಪಾಕಿಸ್ತಾನದ ಮೊಂಡುವಾದ ಬಯಲಾಗಿದ್ದು, ಪ್ರಧಾನಿ ಇಮ್ರಾನ್ ಖಾನ್ ಉನ್ನತಮಟ್ಟದ ಅಧಿಕಾರಿಗಳ ಸಭೆ ಕರೆದು ಸುದೀರ್ಘ ಚರ್ಚೆ ನಡೆಸಿದ್ದಾರೆ.

ಸರ್ಜಿಕಲ್ ಸ್ಟ್ರೈಕ್ 2 ದಾಳಿಯ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದ ಪಾಕಿಸ್ತಾನದ ಮೇಜರ್ ಜನರಲ್ ಆಸೀಫ್ ಗಫೂರ್, ಭಾರತದ ವಾಯು ಸೇನೆಯ ದಾಳಿಯಿಂದ ಯಾವುದೇ ಹಾನಿಯಾಗಿಲ್ಲ. ಭಾರತದ ಯುದ್ಧ ವಿಮಾನಗಳು ನಮ್ಮಿಂದ ತಪ್ಪಿಸಿಕೊಳ್ಳುವ ತರಾತುರಿಯಲ್ಲಿ ಖಾಲಿ ಜಾಗದಲ್ಲಿ ಬಾಂಬ್ ಹಾಕಿದೆ ಎಂದು ಹೇಳಿ ಮೊಂಡುತನ ಪ್ರದರ್ಶನ ಮಾಡಿದ್ದರು. ಇದನ್ನು ಓದಿ: ಸರ್ಜಿಕಲ್ ಸ್ಟ್ರೈಕ್ 2: ವಾಯುಸೇನೆಗೆ ಅಭಿನಂದಿಸಿ ನಾವು ಹೆಮ್ಮೆ ಪಡಬೇಕು ಯಾಕೆ?

ಭಾರತದ ವಾಯುಸೇನೆಯ ವಿಮಾನಗಳು ಗಡಿ (ಎಲ್‍ಓಸಿ)ಯನ್ನು ಉಲ್ಲಂಘಿಸಿದ್ದವು, ಕೂಡಲೇ ನಾವು ದಾಳಿ ಮಾಡುತ್ತಿದ್ದಂತೆ ಮರಳಿ ಹೋಗಿವೆ. ಭಾರತದ ಯುದ್ಧ ವಿಮಾನಗಳು ಮುಜಾಫರಬಾದ್ ಬಳಿ ಒಳನುಸಳಲು ಪ್ರಯತ್ನ ನಡೆಸಿದ್ದವು. ಪಾಕಿಸ್ತಾನದ ಪ್ರತಿ ದಾಳಿಗೆ ಹೆದರಿದ ಕೂಡಲೇ ತಪ್ಪಿಸಿಕೊಳ್ಳುವ ಗಡಿಬಿಡಿಯಲ್ಲಿ ಬಾಲಕೋಟ್ ಬಳಿಯ ನಿರ್ಜನ ಪ್ರದೇಶದಲ್ಲಿ ಬಾಂಬ್ ಹಾಕಿ ಹೋಗಿವೆ ಎಂದು ತಮ್ಮ ಎಂದಿನ ವಿತ್ತಂಡವಾದವನ್ನು ಮುಂದಿಟ್ಟಿದ್ದಾರೆ. ಗಫೂರ್ ಬೆಳಗ್ಗೆ 5.12ಕ್ಕೆ ಟ್ವೀಟ್ ಮಾಡಿದ ಬಳಿಕ ಸರಣಿ ಟ್ವೀಟ್ ಮಾಡಿದ್ದರು. ಇದನ್ನು ಓದಿ: ಕವಿತೆ ಬರೆದು ವಾಯುಪಡೆಗೆ ಗೌರವ ಸಲ್ಲಿಸಿ #AlwaysReady ಎಂದ ಭಾರತೀಯ ಸೇನೆ!

ಪಾಕಿಸ್ತಾನ ಈ ರೀತಿಯ ಹೇಳಿಕೆ ನೀಡುವುದು ಇದೇ ಮೊದಲೆನಲ್ಲ. ಉರಿ ದಾಳಿ ನಡೆದ ಬಳಿಕ ನಡೆದ ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲೂ ಏನು ಆಗಿಲ್ಲ ಎಂದು ಹೇಳಿತ್ತು. ಅಷ್ಟೇ ಅಲ್ಲದೇ ವಿದೇಶಿ ಮಾಧ್ಯಮಗಳನ್ನು ಕರೆಸಿ ಭಾರತದ ಯಾವುದೇ ದಾಳಿ ನಡೆಸಿಲ್ಲ ಎಂದು ಹೇಳಿತ್ತು. ಬಳಿಕ ವಿದೇಶಿ ಮಾಧ್ಯಮಗಳೇ ಪಾಕಿಸ್ತಾನ ಸುಳ್ಳು ಹೇಳಿದೆ. ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರರನ್ನು ಹೊಡೆದು ಉರುಳಿಸಿವೆ ಎಂದು ವರದಿ ಮಾಡಿತ್ತು.

ಮೊದಲಿಗೆ ಮುಂಜಾನೆ 3.45ರ ಸುಮಾರಿಗೆ ವಾಯುಸೇನೆ ಬಾಲ್‍ಕೋಟ್ ಮೇಲೆ ದಾಳಿ ಮಾಡಿದೆ. ಬಳಿಕ ಮುಂಜಾನೆ 3.48ಕ್ಕೆ ಮುಜಾಫರಬಾದ್ ಮೇಲೆ ದಾಳಿ ಮಾಡಲಾಗಿದೆ. ಕೊನೆಗೆ ಮುಂಜಾನೆ 3.58ಕ್ಕೆ ಚಕೋಟಿ ಉಗ್ರರ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ವಾಯುಸೇನೆ ದಾಳಿ ಮಾಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *