ವಿದೇಶಕ್ಕೂ ಹರಡಿದೆ ಬೆಗ್ಗರ್‌ ಜಾಲ – ಪಾಕ್‌ ಭಿಕ್ಷುಕರ ವಾರ್ಷಿಕ ಆದಾಯ ಕೇಳಿದ್ರೆ ಬೆಚ್ಚಿ ಬೀಳ್ತೀರಿ…

By
3 Min Read

ʻಹೊಟ್ಟೆಗೆ ಹಿಟ್ಟಿಲ್ಲ ಅಂದ್ರೂ ಜುಟ್ಟಿಗೆ ಮಲ್ಲಿಗೆ ಹೂವುʼ ಅನ್ನೋ ಹಾಗೇ, ದೇಶದ ಆರ್ಥಿಕತೆ ಹಳಿತಪ್ಪಿದ್ದರೂ, ಪಾಕಿಸ್ತಾನದ (Pakistan) ಕುತಂತ್ರಿ ಬುದ್ಧಿಗೇನೂ ಕಡಿಮೆಯಿಲ್ಲ. ಆರ್ಥಿಕವಾಗಿ ದಿನದಿಂದ ದಿನಕ್ಕೆ ಜರ್ಝರಿತರಾಗುತ್ತಿರುವ ಪಾಕಿಸ್ತಾನ, ಎಲ್ಲೆಲ್ಲಿ ಸಾಲ ಸಿಗುತ್ತೋ, ಅದು ದೇಶವಾಗಿರಲಿ, ಆರ್ಥಿಕ ಸಂಸ್ಥೆಗಳಾಗಿರಲಿ ಅದರ ಕದ ತಟ್ಟುತ್ತಿರುವುದು ಗೊತ್ತಿರುವ ವಿಚಾರ. ಅಲ್ಲಿನ ಆರ್ಥಿಕ ಸಮಸ್ಯೆ, ಆಂತರಿಕ ಕಿತ್ತಾಟ ಅರಿತುಕೊಂಡ, ವಿಶ್ವದ ದಿಗ್ಗಜ ಮೈಕ್ರೊಸಾಫ್ಟ್‌ ಐಟಿ ಸಂಸ್ಥೆಯು ಇತ್ತೀಚೆಗಷ್ಟೇ 25 ವರ್ಷಗಳ ಸಂಬಂಧಕ್ಕೆ ಎಳ್ಳುನೀರು ಬಿಟ್ಟಿತು. 

ಒಂದೆಡೆ ಪಾಕಿಸ್ತಾನ ಸರ್ಕಾರ ಐಎಂಎಫ್‌ನಿಂದ (IMF) ಸಾಲ ಪಡೆದು ಭಯೋತ್ಪಾದಕರಿಗೆ ಖರ್ಚು ಮಾಡುತ್ತಿದ್ದರೆ, ಮತ್ತೊಂದೆಡೆ ಅಲ್ಲಿನ ಸಾಮಾನ್ಯ ಜನರು ವಿದೇಶಗಳಿಗೆ ಹೋಗಿ ಭಿಕ್ಷೆ ಬೇಡುತ್ತಿದ್ದಾರೆ. ಪಾಕ್ ಮೂಲದ ಭಿಕ್ಷುಕರ ಪರಿಸ್ಥಿತಿ ಹೇಗಿದೆ ಅಂದ್ರೆ ಇತರ ದೇಶಗಳು ಪಾಕಿಸ್ತಾನಿ ಭಿಕ್ಷುಕರನ್ನ ತಮ್ಮ ದೇಶಗಳಿಂದ ಓಡಿಸಬೇಕಾಗಿದ ಪರಿಸ್ಥಿತಿಗೆ ಬಂದಿವೆ. ಇತ್ತೀಚಿನ ವರದಿಗಳ ಪ್ರಕಾರ ಸೌದಿ ಅರೇಬಿಯಾ 16 ತಿಂಗಳಲ್ಲಿ 5 ಸಾವಿರಕ್ಕೂ ಅಧಿಕ ಪಾಕ್‌ ಭಿಕ್ಷುಕರನ್ನು (Beggars) ಓಡಿಸಿದ್ರೆ, ಇರಾನ್‌ 3 ವರ್ಷಗಳಲ್ಲಿ 50,000ಕ್ಕೂ ಅಧಿಕ ಭಿಕ್ಷುಕರನ್ನು ಒದ್ದೋಡಿಸಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಪಾಕ್‌ನ ಆರ್ಥಿಕತೆಗೆ ಸಂಬಂಧಿಸಿದ ವರದಿಯೊಂದು ಅಚ್ಚರಿ ಉಂಟು ಮಾಡಿದೆ. ಅದೇನೆಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ… 

ಭಿಕ್ಷುಕರೇ ಶ್ರೀಮಂತರು!

ಭಿಕ್ಷಾಟನೆ (Pakistan’s begging) ಅನ್ನೋದು ಪಾಕಿಸ್ತಾನದಲ್ಲಿ ಪ್ರಮುಖ ವೃತ್ತಿಗಳಲ್ಲಿ ಒಂದಾಗಿದೆ. ಪಾಕ್‌ನ ಒಟ್ಟು ಜನಸಂಖ್ಯೆ 25 ಕೋಟಿಯಷ್ಟಿದ್ದರೆ, ಇದರಲ್ಲಿ 4 ಕೋಟಿಯಷ್ಟು ಜನ ಭಿಕ್ಷಾಟನೆ ಮಾಡುತ್ತಿದ್ದಾರೆ. ತಮ್ಮ ದೇಶಗಳಲ್ಲಿ ಭಿಕ್ಷಾಟನೆ ಮಾಡಿಕೊಂಡಿದ್ದ ಬೆಗ್ಗರ್‌ ಜಾಲ ದಿನೇ ದಿನೇ ಆರ್ಥಿಕತೆ ಕ್ಷೀಣಿಸಿದಂತೆ ವಿದೇಶಗಳಿಗೂ ವ್ಯಾಪಿಸಿದೆ. ಇದರಿಂದ ಪಾಕ್‌ ಸರ್ಕಾರ ತನ್ನ ಘನತೆ ಉಳಿಸಿಕೊಳ್ಳುವು ಕಷ್ಟವಾಗಿದೆ. ಅಚ್ಚರಿಯೆಂದರೆ ಪಾಕಿಸ್ತಾನಿ ಭಿಕ್ಷುಕರ ವಾರ್ಷಿಕ ಆದಾಯ 42 ಶತಕೋಟಿ ಡಾಲರ್‌ ತಲುಪಿದೆ ಅಂತ ಇತ್ತೀಚಿನ ವರದಿಯೊಂದು ತಿಳಿಸಿದೆ. 

ಸದ್ಯ 25 ಕೋಟಿ ಜನಸಂಖ್ಯೆ ಹೊಂದಿರುವ ಪಾಕಿಸ್ತಾನದ ಸಾಲವು ಜಿಡಿಪಿಯ 65.2% ರಷ್ಟಿದೆ. ತೆರಿಗೆ, ದೇಶ ಮತ್ತು ವಿದೇಶಿ ಸಾಲಗಳು, ಸರ್ಕಾರಿ ಸ್ವಾಮ್ಯದ ಆಸ್ತಿ ಮಾರಾಟ ಇವು ಪಾಕಿಸ್ತಾನದ ಆದಾಯ ಮೂಲಗಳಾಗಿವೆ. ಆದಾಗ್ಯೂ ಭಿಕ್ಷುಕರ ವಾರ್ಷಿಕ ಆದಾಯ 42 ಶತಕೋಟಿ ಡಾಲರ್‌ನಷ್ಟು ತಲುಪಿರುವುದು ಆರ್ಥಿಕ ತಜ್ಞರ ಹುಬ್ಬೇರಿಸುವಂತೆ ಮಾಡಿದೆ. ಇದರ ಸ್ವಾರಸ್ಯವನ್ನು ಮುಂದೆ ತಿಳಿಯೋಣ.. ಅದಕ್ಕೂ ಮುನ್ನ ಪಾಕ್‌ನಲ್ಲಿ ಭಿಕ್ಷಾಟನೆಗೆ ಕಾರಣಗಳೇನು ಎಂಬುದನ್ನ ತಿಳಿಯೋಣ… 

ಪಾಕಿಸ್ತಾನದಲ್ಲಿ ಭಿಕ್ಷಾಟನೆಗೆ ಕಾರಣಗಳೇನು?

ಪಾಕಿಸ್ತಾನದಲ್ಲಿ ಭಿಕ್ಷಾಟನೆ ಹೆಚ್ಚಾಗಲು ಹಲವು ಕಾರಣಗಳಿವೆ. ಮುಖ್ಯವಾಗಿ ಆರ್ಥಿಕ ಹಿಂಜರಿತ, ಬಡತನ, ನಿರುದ್ಯೋಗ, ಮತ್ತು ರಾಜಕೀಯ ಅಸ್ಥಿರತೆಯಿಂದ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿರುವುದರಿಂದ, ಅನೇಕ ಜನರು ಜೀವನೋಪಾಯಕ್ಕಾಗಿ ಭಿಕ್ಷಾಟನೆಯ ಮೊರೆ ಹೋಗುತ್ತಿದ್ದಾರೆ. ಅಲ್ಲದೆ, ಉದ್ಯೋಗಾವಕಾಶಗಳ ಕೊರತೆಯಿಂದಾಗಿ, ಅನೇಕ ಜನರು ಕೆಲಸವಿಲ್ಲದೆ ಭಿಕ್ಷೆ ಬೇಡಲು ಮುಂದಾಗುತ್ತಿದ್ದಾರೆ. ರಾಜಕೀಯ ಅಸ್ಥಿರತೆಯಿಂದಾಗಿ, ದೇಶದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಮತ್ತು ಬಡತನ ಹೆಚ್ಚಾಗಿದೆ. ಈ ಎಲ್ಲಾ ಅಂಶಗಳು ಸೇರಿ ಪಾಕಿಸ್ತಾನದಲ್ಲಿ ಭಿಕ್ಷಾಟನೆ ಹೆಚ್ಚಾಗಲು ಕಾರಣವಾಗಿವೆ. ಅಲ್ಲದೇ ಇದೇ ಭಿಕ್ಷಾಟನೆಯ ಜಾಲ ವಿದೇಶಗಳಿಗೂ ವ್ಯಾಪಿಸಿದೆ. 

ವರದಿಗಳು ಹೇಳುವುದೇನು?

ಪಾಕ್‌ನಲ್ಲಿ ಸುಮಾರು 4 ಕೋಟಿ ಜನಕ್ಕೆ ಭಿಕ್ಷಾಟನೆಯೇ ವೃತ್ತಿಯಾಗಿದ್ದು, ಒಬ್ಬ ಭಿಕ್ಷುಕನ ದೇಶದ ಸರಾಸರಿ ಆದಾಯ ದಿನಕ್ಕೆ 850 ಪಾಕಿಸ್ತಾನಿ ರೂಪಾಯಿಗಳಷ್ಟಿದೆ. ಒಟ್ಟಾರೆ ಭಿಕ್ಷುಕರು 32 ಶತಕೋಟಿ (ಪಾಕಿಸ್ತಾನಿ ರೂಪಾಯಿ)ಯನ್ನು ಪ್ರತಿದಿನ ಭಿಕ್ಷೆಯಾಗಿ ಪಡೆಯುತ್ತಿದ್ದು, ಇದು ವಾರ್ಷಿಕವಾಗಿ 117 ಲಕ್ಷ ಕೋಟಿ ಪಾಕಿಸ್ತಾನಿ ರೂಪಾಯಿಗಳಷ್ಟಿದೆ. ಅಂದ್ರೆ 42 ಶತಕೋಟಿ ಯುಎಸ್‌ ಡಾಲರ್‌ನಷ್ಟಿದೆ. ಇದು ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತಿದೆ. ಏಕೆಂದ್ರೆ ಭಿಕ್ಷುಕರ ಆದಾಯ ಹೆಚ್ಚುತ್ತಿರುವುದರಿಂದ ಇತರ ಕಾರ್ಮಿಕರು ಅದರತ್ತಲೇ ಆಸಕ್ತಿ ತೋರುತ್ತಿದ್ದಾರೆ ಎಂದು ಸಹ ತಿಳಿದುಬಂದಿದೆ. 

ಏಷ್ಯನ್ ಮಾನವ ಹಕ್ಕುಗಳ ಆಯೋಗದ (AHRC) ವರದಿ ಹೇಳುವಂತೆ, ಪಾಕಿಸ್ತಾನದ ಜನಸಂಖ್ಯೆಯ ಶೇ.2.5 ರಿಂದ 11 ರಷ್ಟು ಜನ ಜೀವನೋಪಾಯಕ್ಕಾಗಿ ಭಿಕ್ಷಾಟನೆಯನ್ನೇ ಅವಲಂಬಿಸಿದ್ದಾರೆ. ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಅಂಕಿ-ಅಂಶಗಳ ಪ್ರಕಾರ, ದೇಶದ ಪ್ರಮುಖ ನಗರ ಕೇಂದ್ರಗಳ ಬೀದಿಗಳಲ್ಲಿ ಸುಮಾರು 12 ಲಕ್ಷ ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ ಎಂದು ಹೇಳಲಾಗಿದೆ. 

ವಿದೇಶಗಳಿಂದ ಬಂದ ದೂರುಗಳೇನು?

ಪಾಕಿಸ್ತಾನ ಸರ್ಕಾರವು ಭಿಕ್ಷೆ ಬೇಡಲು ವಿದೇಶಗಳಿಗೆ ಪ್ರಯಾಣಿಸುವ ಜನರ ಡೇಟಾವನ್ನು ಸಂಗ್ರಹಿಸಿದೆ. ವಿದೇಶಗಳಲ್ಲಿ ಸಿಕ್ಕಿಬಿದ್ದ ಭಿಕ್ಷುಕರಲ್ಲಿ 90 ಪ್ರತಿಶತ ಪಾಕಿಸ್ತಾನ ಮೂಲದವರೇ ಆಗಿರುವುದರಿಂದ ಈ ಅಂಕಿಅಂಶಗಳನ್ನು ಸಂಗ್ರಹಿಸಲಾಗುತ್ತಿದೆ. ಇರಾಕ್‌ ಮತ್ತು ಸೌದಿ ರಾಯಭಾರಿಗಳು ಈ ಬಗ್ಗೆ ಪಾಕಿಸ್ತಾನ ಸರ್ಕಾರಕ್ಕೆ ದೂರು ನೀಡಿದ್ದಾರೆ. ಹೀಗಾಗಿ ಧಾರ್ಮಿಕ ತೀರ್ಥಯಾತ್ರೆ ನೆಪದಲ್ಲಿ ಭಿಕ್ಷಾಟನೆಗೆ ಸೌದಿ ಅರೇಬಿಯಾ, ಇರಾಕ್ ಮತ್ತು ಇರಾನ್‌ನಂತಹ ದೇಶಗಳಿಗೆ ಹೋಗುವ ಸಾವಿರಾರು ಭಿಕ್ಷುಕರ ಪಾಸ್‌ಪೋರ್ಟ್‌ಗಳನ್ನ ಪಾಕಿಸ್ತಾನ ಸರ್ಕಾರ ಅಮಾನತುಗೊಳಿಸಿದೆ. 

ಭಾರತದ ಪ್ರತೀಕಾರದ ದಾಳಿ ʻಆಪರೇಷನ್‌ ಸಿಂಧೂರʼ ಕಾರ್ಯಾಚರಣೆ ಬಳಿಕ ತನ್ನ ಆರ್ಥಿಕತೆಯನ್ನು ಇನ್ನಷ್ಟು ಕ್ಷೀನಿಸಿಕೊಂಡಿರುವ ಪಾಕ್‌ ಈಗ ಶಾಂತಿ ಮಾತುಕೆಗೆ ಸಿದ್ಧ ಎಂದು ಬಾಯಿ ಬಡಿದುಕೊಳ್ಳುತ್ತಿದೆ. ಭಾರತದ ಜೊತೆಗೆ ವ್ಯಾಪಾರ ಮಾತುಕತೆಗೆ ಹೆಣಗಾಡುತ್ತಿದೆ.

Share This Article