ಶರಣಾದ ಪಾಕ್ – ಶ್ವೇತ ಬಾವುಟ ತೋರಿಸಿ ಮೃತದೇಹ ಹೊತ್ತೊಯ್ದ ಇಮ್ರಾನ್ ಸೇನೆ

Public TV
2 Min Read

ಶ್ರೀನಗರ: ಭಾರತೀಯ ಸೇನೆಯಿಂದ ಹತರಾದ ಪಾಕ್ ಸೈನಿಕರ ಮೃತದೇಹವನ್ನು ಪಾಕಿಸ್ತಾನ ಸೇನೆ ಶ್ವೇತ ಬಾವುಟ ತೋರಿಸಿ ಶರಣಾಗಿದ್ದೇವೆ ಎಂಬ ಸಂದೇಶವನ್ನು ರವಾನಿಸಿ ತೆಗೆದುಕೊಂಡು ಹೋಗಿದೆ.

ಕದನ ವಿರಾಮ ಉಲ್ಲಂಘನೆ ಮಾಡಿದ ಪಾಕಿಸ್ತಾನಿ ಸೈನಿಕರನ್ನು ಸೆಪ್ಟೆಂಬರ್ 10, 11 ರಂದು ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ಯ ಹಾಜಿಪುರ ಸೆಕ್ಟರ್‍ ನಲ್ಲಿ ಹೊಡೆದು ಹಾಕಿತ್ತು. ಈ ಗುಂಡಿನ ದಾಳಿಯಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹವಾಲ್‍ನಗರ ಮೂಲದ ಸೈನಿಕ ಗುಲಾಮ್ ರಸೂಲ್‍ನನ್ನು ಭಾರತೀಯ ಸೇನೆ ಕೊಂದು ಹಾಕಿತ್ತು.

ಈ ಗುಂಡಿನ ಚಕಮಕಿಯಲ್ಲಿ ಹತನಾದ ರಸೂಲ್ ಮೃತ ದೇಹವನ್ನು ತೆಗೆದುಕೊಂಡು ಹೋಗಲು ಪಾಕ್ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿ ಗುಂಡಿನ ದಾಳಿ ಮುಂದುವರಿಸಿತ್ತು. ಈ ದಾಳಿಗೆ ಭಾರತೀಯ ಸೇನೆ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಿದ ಪರಿಣಾಮ ಪಾಕಿನ ಮತ್ತೊಬ್ಬ ಸೈನಿಕ ಸಹ ಹತ್ಯೆಯಾಗಿದ್ದ. ಈ ಎರಡು ಮೃತದೇಹಗಳನ್ನು ವಾಪಸ್ ಪಡೆಯಲು ಪಾಕಿಸ್ತಾನಿ ಸೇನೆ ಎರಡು ದಿನಗಳ ಕಾಲ ಬಹಳ ಪ್ರಯತ್ನ ಪಟ್ಟರೂ ಭಾರತೀಯ ಸೇನೆ ಬಿಟ್ಟುಕೊಟ್ಟಿರಲಿಲ್ಲ.

ಎರಡು ದಿನ ಪ್ರಯತ್ನ ಪಟ್ಟು ಸೋತ ಪಾಕಿಸ್ತಾನಿ ಸೈನಿಕರು ಸೆಪ್ಟಂಬರ್ 13 ಶುಕ್ರವಾರ ಬಿಳಿ ಬಣ್ಣದ ಬಾವುಟವನ್ನು ತೋರಿಸಿ ನಾವು ಶರಣಾಗಿದ್ದೇವೆ ಎಂದು ಸಂದೇಶ ರವಾನೆ ಮಾಡುವ ಮೂಲಕ ಎರಡು ಮೃತ ದೇಹವನ್ನು ತೆಗೆದುಕೊಂಡು ಹೋಗಿದ್ದಾರೆ. ಇದನ್ನು ಓದಿ:ಶ್ವೇತ ಬಾವುಟ ತೋರಿಸಿ, ನಿಮ್ಮ ಶವಗಳನ್ನು ತೆಗೆದುಕೊಂಡು ಹೋಗಿ-ಪಾಕಿಸ್ತಾನಕ್ಕೆ ಭಾರತದ ಸಂದೇಶ

ಶ್ವೇತ ಬಾವುಟ ತೋರಿಸಿ ಶರಣಾಗಿ ಬಂದ ಪಾಕ್ ಸೈನಿಕರನ್ನು ಕಂಡ ಭಾರತೀಯ ಸೈನಿಕರು ಮತ್ತೆ ಗುಂಡಿನ ದಾಳಿ ಮಾಡದೇ ಮೃತ ದೇಹಗಳನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಿದ್ದಾರೆ. ಈ ಮೂಲಕ ಸೋತು ಶರಣಾದವರಿಗೆ ನಾವು ಗೌರವ ನೀಡುತ್ತೇವೆ ಎಂಬ ಸಂದೇಶವನ್ನು ಭಾರತೀಯ ಸೇನೆ ನೀಡಿದೆ.

ಈ ಹಿಂದೆ ಜುಲೈ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಕೇರನ್ ಸೆಕ್ಟರ್ ನಲ್ಲಿಯ ಫಾರ್ವರ್ಡ್ ಪೋಸ್ಟ್ ಬಳಿ ಪಾಕಿಸ್ತಾನದ ಸೇನೆಯ ಬ್ಯಾಟ್  (Border Action Team) ತಂಡ  ದಾಳಿಯನ್ನು ನಡೆಸಿತ್ತು. ಪಾಕಿಸ್ತಾನದ ದಾಳಿಯನ್ನು ವಿಫಲಗೊಳಿಸಿದ ಭಾರತೀಯ ಸೇನೆ ಪ್ರತಿದಾಳಿ ನಡೆಸಿತ್ತು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನದ 5 ರಿಂದ7 ಸೈನಿಕರು ಮತ್ತು ಕೆಲ ಉಗ್ರರು ಸಾವನ್ನಪ್ಪಿದ್ದರು.

ಭಾರತೀಯ ಸೇನೆಯ ದಾಳಿಗೆ ಸಿಕ್ಕಿ ಮೃತ ಪಟ್ಟ ಪಾಕಿಸ್ತಾನ ಸೈನಿಕರ ಮೃತ ದೇಹಗಳು ಎಲ್‍ಓಸಿಯಲ್ಲಿ ಬಿದ್ದಿವೆ. ಈ ದೇಹಗಳನ್ನು ಶ್ವೇತ ಬಾವುಟ ತೋರಿಸಿ ತೆಗೆದುಕೊಂಡಿ ಹೋಗಿ ಅಂತ್ಯಕ್ರಿಯೇ ಮಾಡಬಹುದು ಎಂದು ಭಾರತೀಯ ಸೇನೆ ಪಾಕಿಸ್ತಾನ ಸೇನೆಗೆ ಹೇಳಿತ್ತು. ಇದನ್ನು ನಿರಾಕರಿಸಿದ್ದ ಪಾಕಿಸ್ತಾನ ಎಲ್‍ಓಸಿಯಲ್ಲಿ ಮೃತ ಪಟ್ಟ ಸೈನಿಕರು ನಮ್ಮ ಸೈನಿಕರಲ್ಲ ಎಂದು ಹೇಳಿತ್ತು.

Share This Article
Leave a Comment

Leave a Reply

Your email address will not be published. Required fields are marked *