ಏಷ್ಯಾಕಪ್ ಫೈನಲ್ ರಂಗೇರಿಸಿದ ಹಸರಂಗ – 6ನೇ ಬಾರಿ ಸಿಂಹಳೀಯರಿಗೆ ಕಿರೀಟ

Public TV
3 Min Read

ದುಬೈ: ಹಸರಂಗ (Wanindu Hasarang) ಆಲ್‍ರೌಂಡರ್ ಆಟಕ್ಕೆ ಪಾಕಿಸ್ತಾನ (Pakistan) ತಲೆಬಾಗಿದೆ. 15ನೇ ಆವೃತ್ತಿ ಏಷ್ಯಾಕಪ್ ಫೈನಲ್‍ನಲ್ಲಿ (Asia Cup 2022) ಶ್ರೀಲಂಕಾ (Sri Lanka)  23 ರನ್‍ಗಳ ಭರ್ಜರಿ ಜಯದೊಂದಿಗೆ 6ನೇ ಬಾರಿ ಏಷ್ಯಾಕಪ್ ಕಿರೀಟ ಮುಡಿಗೇರಿಸಿಕೊಂಡಿದೆ.

ರೋಚಕ ಫೈನಲ್ ಪಂದ್ಯದಲ್ಲಿ ಯಾರೂ ನಿರೀಕ್ಷೆ ಮಾಡದಂತ ಆಟದ ಮೂಲಕ ಶ್ರೀಲಂಕಾ ಕ್ರಿಕೆಟ್ ಪ್ರಿಯರ ಮನಗೆದ್ದಿದೆ. ಶ್ರೀಲಂಕಾ ನೀಡಿದ 172 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಪಾಕಿಸ್ತಾನ ಹಸರಂಗ ಮತ್ತು ಲಂಕಾ ಬೌಲರ್‌ಗಳ ದಾಳಿಗೆ ನಲುಗಿ 147 ರನ್‍ಗಳಿಗೆ ಸರ್ವಪತನ ಕಂಡಿತು. ಇತ್ತ ಶ್ರೀಲಂಕಾ 23 ರನ್‍ಗಳ ಭರ್ಜರಿ ಜಯದ ನಗೆ ಬೀರಿತು.

ಆರಂಭದಲ್ಲಿ ಪಾಕಿಸ್ತಾನ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಾಯಕ ಬಾಬರ್ ಅಜಾಮ್ ಮತ್ತೆ ವಿಫಲತೆ ಕಂಡರೆ, ಫಖರ್ ಝಮಾನ್ ಶೂನ್ಯ ಸುತ್ತಿದರು. ಆದರೆ ಇನ್ನೊಂದೆಡೆ ಮೊಹಮ್ಮದ್ ರಿಜ್ವಾನ್ ಮತ್ತೆ ತಂಡಕ್ಕೆ ಆಸರೆಯಾಗುವ ಸೂಚನೆ ನೀಡಿದರು. ಇವರಿಗೆ ಕೆಲ ಕಾಲ ಇಫ್ತಿಕರ್ ಅಹಮದ್ ಸಾಥ್ ನೀಡಿದರು. ಆದರೆ ಇಫ್ತಿಕರ್ ಆಟ 32 ರನ್ ( 31 ಎಸೆತ, 2 ಬೌಂಡರಿ, 1 ಸಿಕ್ಸ್) ಕೊನೆಗೊಂಡಿತು.

ಹಸರಂಗ ಸೂಪರ್ ಸ್ಪೆಲ್:
ಒಂದುಕಡೆ ರಿಜ್ವಾನ್ ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನ ಹಳಿಗೆ ತರಲು ಯತ್ನಿಸಿದರೆ, ಇನ್ನೊಂದೆಡೆ ಹಸರಂಗ ವಿಕೆಟ್ ಬೇಟೆ ಆರಂಭಿಸಿದರು. ತನ್ನ ಕೋಟದ ಕೊನೆಯ ಓವರ್‌ನಲ್ಲಿ ಡೇಂಜರಸ್ ಬ್ಯಾಟ್ಸ್‌ಮ್ಯಾನ್‌ಗಳಾದ ಖುಷ್ದಿಲ್ ಶಾ ಮತ್ತು ಆಸಿಫ್ ಅಲಿ ವಿಕೆಟ್ ಕಿತ್ತು ಶ್ರೀಲಂಕಾವನ್ನು ಜಯದ ಹೊಸ್ತಿಗೆ ತಂದು ನಿಲ್ಲಿಸಿದರು. ಅಂತಿಮವಾಗಿ 20 ಓವರ್‌ಗಳಲ್ಲಿ 147 ರನ್‍ಗಳಿಗೆ ಆಲೌಟ್ ಆಯಿತು.

ಪಾಕ್‍ಗೆ ಶಾಕ್ ನೀಡಿದ ಲಂಕನರು 6ನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದರೆ, ಪ್ರಶಸ್ತಿ ಗೆಲ್ಲುವ ಖುಷಿಯಲ್ಲಿದ್ದ ಪಾಕ್ ಅಭಿಮಾನಿಗಳಿಗೆ ನಿರಾಸೆ ಉಂಟಾಯಿತು.

ಈ ಮೊದಲು ಟಾಸ್ ಗೆದ್ದ ಪಾಕಿಸ್ತಾನ ನಾಯಕ ಎದುರಾಳಿ ಶ್ರೀಲಂಕಾ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಇತ್ತ ಆರಂಭದಲ್ಲೇ ನಸೀಮ್ ಶಾ, ಶ್ರೀಲಂಕಾ ಬ್ಯಾಟ್ಸ್‌ಮ್ಯಾನ್‌ಗಳಿಗೆ ತನ್ನ ಘಾತಕ ವೇಗದ ಮೂಲಕ ನಡುಕ ಹುಟ್ಟಿಸಿದರು. ಶ್ರೀಲಂಕಾದ ಟಾಪ್ ಆಡರ್ ಬ್ಯಾಟ್ಸ್‌ಮ್ಯಾನ್‌ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಕೇವಲ 36 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಶ್ರೀಲಂಕಾಗೆ ಧನಂಜಯ ಡಿ ಸಿಲ್ವ ಆಸರೆಯಾಗುವ ಸೂಚನೆ ನೀಡಿದರೂ ಅವರ ಆಟ 28 ರನ್‍ಗೆ (21 ಎಸೆತ, 4 ಬೌಂಡರಿ) ಅಂತ್ಯವಾಯಿತು.

ಆ ಬಳಿಕ ಬಂದ ದನುಷ್ಕ ಗುಣತಿಲಕ ಮತ್ತು ನಾಯಕ ದಾಸುನ್ ಶನಕ ಕೂಡ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಈ ವೇಳೆ ಶ್ರೀಲಂಕಾ 8.5 ಓವರ್‌ಗಳಲ್ಲಿ 58 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡಿತು.

ಅಸಲಿ ಆಟ ಆರಂಭಿಸಿದ ಹಸರಂಗ, ರಾಜಪಕ್ಸೆ:
ಬಳಿಕ ಒಂದಾದ ಭಾನುಕಾ ರಾಜಪಕ್ಸೆ ಮತ್ತು ವಾನಿಂದು ಹಸರಂಗ ಪಾಕ್ ಬೌಲರ್‌ಗಳನ್ನು ದಂಡಿಸಲು ಮುಂದಾದರು. ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್‌ಗಳ ಮೂಲಕ ಬಾಲ್‍ಗೆ ಅಷ್ಟ ದಿಕ್ಕುಗಳನ್ನು ಪರಿಚಯಿಸಿದ ಈ ಜೋಡಿ ಪಾಕ್ ಬೌಲರ್‌ಗಳ ಬೆವರಿಳಿಸಿತು. ಈ ವೇಳೆ ದಾಳಿಗಿಳಿದ ಹ್ಯಾರಿಸ್ ರೌಫ್ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಹಸರಂಗ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಹಸರಂಗ 36 ರನ್ (21 ಎಸೆತ, 5 ಬೌಂಡರಿ, 1 ಸಿಕ್ಸ್) ಹೊಡೆದು ವಿಕೆಟ್ ಕಳೆದುಕೊಂಡರು. ಈ ಮೊದಲು ರಾಜಪಕ್ಸೆ ಜೊತೆ 6ನೇ ವಿಕೆಟ್ 58 ರನ್ (36 ಎಸೆತ) ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು.

ಹಸರಂಗ ವಿಕೆಟ್ ಕಳೆದುಕೊಂಡ ಬಳಿಕ ಸ್ಲಾಗ್ ಓವರ್‌ಗಳಲ್ಲಿ ಮತ್ತಷ್ಟು ವೈಲೆಂಟ್ ಆದ ರಾಜಪಕ್ಸೆ ಸಿಡಿಲಬ್ಬರದ ಬ್ಯಾಟಿಂಗ್‍ಗೆ ಮುಂದಾದರು. ಇವರಿಗೆ ಕರುಣಾರತ್ನೆ ಉತ್ತಮ ಸಾಥ್ ನೀಡಿದರು. ಅಂತಿಮವಾಗಿ ರಾಜಪಕ್ಸೆ ಅಜೇಯ 71 ರನ್ (45 ಎಸೆತ, 6 ಬೌಂಡರಿ, 3 ಸಿಕ್ಸ್) ಮತ್ತು ಕರುಣಾರತ್ನೆ 14 ರನ್ (14 ಎಸೆತ, 1 ಸಿಕ್ಸ್) ಚಚ್ಚಿದ ಪರಿಣಾಮ 7ನೇ ವಿಕೆಟ್‍ಗೆ ಮುರಿಯದ 54 ರನ್ (31 ಎಸೆತ) ಜೊತೆಯಾಟ ಕಾಣಸಿಕ್ಕಿತು. ಜೊತೆಗೆ ತಂಡದ ಮೊತ್ತ 20 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 170 ಬಂತು.

ಕೊನೆಯ 10 ಓವರ್‌ಗಳಲ್ಲಿ ಶ್ರೀಲಂಕಾ ನೂರಕ್ಕೂ ಹೆಚ್ಚು ರನ್ ಹೊಡೆದು ಮಿಂಚಿತು. ಕೊನೆಯ 5 ಓವರ್‌ಗಳಲ್ಲಿ ಶ್ರೀಲಂಕಾ 53 ಚಚ್ಚಿತು. ಮೊದಲ 10 ಓವರ್‌ಗಳಲ್ಲಿ ಪಾಕಿಸ್ತಾನ ಬೌಲರ್‌ಗಳು ಮೇಲುಗೈ ಸಾಧಿಸಿದರು. ಪಾಕ್ ಬೌಲರ್‌ಗಳ ಪೈಕಿ ಹ್ಯಾರಿಸ್ ರೌಫ್ 3 ವಿಕೆಟ್ ಪಡೆದು ಮಿಂಚಿದರೆ, ನಸೀಮ್ ಶಾ, ಶಾದಾಬ್ ಖಾನ್ ಮತ್ತು ಇಫ್ತಿಕರ್ ಅಹಮದ್ ತಲಾ 1 ಪಡೆದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *